ಸುಬ್ರಹ್ಮಣ್ಯನ್ ಚಂದ್ರಶೇಖರ್
ನವಕರ್ನಾಟಕ ಪ್ರಕಾಶನ ಇವರು ಹೊರತರುತ್ತಿರುವ 'ವಿಶ್ವ ಮಾನ್ಯರು' ಮಾಲಿಕೆಯಲ್ಲಿ ಹೊರಬಂದ ಕೃತಿಯೇ ನಕ್ಷತ್ರಗಳ ಭವಿಷ್ಯಕಾರ 'ಸುಬ್ರಹ್ಮಣ್ಯನ್ ಚಂದ್ರಶೇಖರ್'. ಈ ಮಾಲಿಕೆಯ ಸಂಪಾದಕರು ಖ್ಯಾತ ಸಾಹಿತಿ ಡಾ. ನಾ ಸೋಮೇಶ್ವರ ಹಾಗೂ ಕೃತಿಯ ಲೇಖಕರು ವಿಜ್ಞಾನ ಬರಹಗಾರರಾದ ರೋಹಿತ್ ಚಕ್ರತೀರ್ಥ ಇವರು. ರೋಹಿತ್ ಅವರು ಕನ್ನಡದಲ್ಲಿ ವಿಜ್ಞಾನ-ಗಣಿತ ಬರಹಗಾರರ ಸಂಖ್ಯೆ ಕಡಿಮೆ ಎಂಬ ಕೊರತೆಯನ್ನು ನೀಗಿಸಿದವರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರ ಹಲವಾರು ಪುಸ್ತಕಗಳನ್ನು ನವಕರ್ನಾಟಕ ಪ್ರಕಾಶನ ಹೊರ ತಂದಿದೆ.
ಸುಬ್ರಹ್ಮಣ್ಯನ್ ಚಂದ್ರಶೇಖರ್ ಪುಸ್ತಕದ ಮೊದಲ ಸಾಲುಗಳಲ್ಲಿ ಚಕ್ರತೀರ್ಥ ಅವರು ಹೀಗೆ ಬರೆಯುತ್ತಾರೆ "ಸುಬ್ರಹ್ಮಣ್ಯನ್ ಚಂದ್ರಶೇಖರ್ ೧೯ ವರ್ಷದ ಹುಡುಗ. ಭಾರತದಿಂದ ಇಂಗ್ಲೆಂಡಿಗೆ ಹೊರಟಿದ್ದ. ಎರಡು ವಾರಗಳ ಹಡಗು ಪಯಣ. ಕಣ್ಣು ಹಾಯಿಸಿದೆಡೆಯಲ್ಲೆಲ್ಲ ನೀರು. ರಾತ್ರಿಯ ಆಕಾಶದ ತುಂಬಾ ನಕ್ಷತ್ರಗಳು! ಈ ನಕ್ಷತ್ರಗಳಿಗೆ ಹುಟ್ಟು, ಬದುಕು ಮತ್ತು ಸಾವಿದೆಯೇ? ನಮ್ಮ ಸೂರ್ಯನೂ ಒಂದು ನಕ್ಷತ್ರವಲ್ಲವೇ! ಅವನೂ ಒಂದು ದಿನ ಸಾಯುವನೇ? - ಹೀಗೆ ಹಲವು ಹತ್ತು ಪ್ರಶ್ನೆಗಳು ಯುವಕನನ್ನು ಕಾಡಿದವು. ತಕ್ಷಣವೇ ತಾನು ಅದುವರೆಗೂ ಕಲಿತಿದ್ದ ಗಣಿತ ಹಾಗೂ ಭೌತಶಾಸ್ತ್ರದ ಆಧಾರದ ಮೇಲೆ ಲೆಕ್ಕ ಹಾಕಲು ಆರಂಭಿಸಿದ. ಇಂಗ್ಲೆಂಡ್ ತಲುಪುವುದಕ್ಕೆ ಮೊದಲೇ ತನ್ನ ಲೆಕ್ಕಾಚಾರವನ್ನು ಮುಗಿಸಿದ. ನಮ್ಮ ಸೂರ್ಯನ ದ್ರವ್ಯರಾಶಿಗಿಂತ ೧.೪೪ ಒಟ್ಟು ಅಥವಾ ಕಡಿಮೆ ಇರುವ ನಕ್ಷತ್ರಗಳು ತಮ್ಮನ್ನೇ ಹಿಂಡಿಕೊಂಡು ಕುಗ್ಗುತ್ತವೆ. ಅತಿಭಾರದ ಕುಬ್ಜರೂಪಿಗಳಾಗಿ ತಮ್ಮ ವೃದ್ಧಾಪ್ಯವನ್ನು ಕಳೆಯುತ್ತವೆ. ಹುಡುಗ ಚಂದ್ರಶೇಖರ್ ಹೇಳಿದ ಈ ಮಾತುಗಳನ್ನು ಜಗತ್ತಿನ ವಿಜ್ಞಾನಿಗಳು ಸುಮಾರು ೫೦ ವರ್ಷಗಳ ಕಾಲ ಪರೀಕ್ಷಿಸಿದರು. ಅನೇಕ ಪ್ರಯೋಗಗಳನ್ನು ನಡೆಸಿ, ನಿಜವೆಂದು ಒಪ್ಪಿಕೊಂಡರು. ೧೯ನೆಯ ವರ್ಷದಲ್ಲಿ ಮಾಡಿದ ಸಂಶೋಧನೆಗೆ ೭೩ನೆಯ ವಯಸ್ಸಿನಲ್ಲಿ ಜಗತ್ತಿನ ಪ್ರತಿಷ್ಟಿತ ನೊಬೆಲ್ ಪ್ರಶಸ್ತಿ ದೊರೆಯಿತು!"
'ವಿಶ್ವಮಾನ್ಯರು' ಮಾಲಿಕೆಯ ಸಂಪಾದಕರಾದ ಡಾ. ನಾ ಸೋಮೇಶ್ವರ ಇವರು ತಮ್ಮ 'ನುಡಿ ಮಂಥನ' ದಲ್ಲಿ "ಸುಬ್ರಹ್ಮಣ್ಯನ್ ಚಂದ್ರಶೇಖರ್ (೧೯೧೦-೧೯೯೫) ೨೦ನೆಯ ಶತಮಾನ ಕಂಡ ಮಹಾನ್ ಮೇಧಾವಿಗಳಲ್ಲಿ ಒಬ್ಬರು. ತಾವು ಬದುಕಿದ್ದಾಗಲೇ ದಂತಕತೆಯಾದರು. ಈ ಭಾರತೀಯ ಅಮೇರಿಕನ್ 'ಚಂದ್ರ' ಎಂದೇ ಪರಿಚಿತರು. ಚಂದ್ರ ಅವರ ಆಸಕ್ತಿ ಹಾಗೂ ಕಾರ್ಯಕ್ಷೇತ್ರ ವಿಫುಲವಾದದ್ದು. ಭೌತಶಾಸ್ತ್ರ, ಖಭೌತಶಾಸ್ತ್ರ ಹಾಗೂ ಆನ್ವಯಿಕ ಗಣಿತ ಶಾಸ್ತ್ರ ಅವರ ಮೆಚ್ಚಿನ ವಿಷಯಗಳು. ಚಂದ್ರ ಅವರದ್ದು ಮುಳ್ಳಿನ ಹಾದಿ. ಮೂರು ಸಂಸ್ಕೃತಿಗಳನ್ನು (ಭಾರತೀಯ, ಬ್ರಿಟನ್ ಹಾಗೂ ಅಮೇರಿಕನ್) ಜೀರ್ಣಿಸಿಕೊಂಡು ಅಪಾರ ಆತ್ಮವಿಶ್ವಾಸ, ಕುಶಲತೆ ಹಾಗೂ ತಾಳ್ಮೆಯಿಂದ ಎಲ್ಲ ಕಂಟಕಗಳನ್ನು ದಾಟಿ, ವಿದ್ಯಾರ್ಥಿ ದೆಸೆಯಲ್ಲಿಯೇ ನೊಬೆಲ್ ಪ್ರಶಸ್ತಿ ವಿಜೇತ ಸಂಶೋಧನೆಯನ್ನು ಮಾಡಿ ತಮ್ಮ ೮೫ನೆಯ ವರ್ಷದಲ್ಲೂ ವಿಜ್ಞಾನ ಸಂಶೋಧನೆಯಲ್ಲಿ ತೊಡಗಿಕೊಂಡು ಎಲ್ಲರಿಗೂ ಮಾದರಿಯಾದರು.
ಚಂದ್ರ ತಮ್ಮ 'ಚಂದ್ರಶೇಖರ್ ಲಿಮಿಟ್' ಸಂಶೋಧನೆಗೆ ಹೆಸರಾದವರು. ನಕ್ಷತ್ರಗಳ ಇಂಧನ ಜಲಜನಕ. ನಾಲ್ಕು ಜಲಜನಕ ಪರಮಾಣುಗಳು ಸಂಯೋಜನೆಗೊಂಡು ಒಂದು ಹೀಲಿಯಂ ಪರಮಾಣುವಾಗುತ್ತವೆ. ಈ ಸಂಯೋಜನೆಯ ಅವಧಿಯಲ್ಲಿ ಉತ್ಪಾದನೆಯಾಗುವ ಅಪಾರ ಶಕ್ತಿ-ಬೆಳಕು ನಕ್ಷತ್ರಗಳಿಗೆ ಜೀವ ತುಂಬುತ್ತದೆ. ಹೀಲಿಯಂ ಉತ್ಪಾದನೆ ಅಧಿಕವಾಗುತ್ತಿದ್ದಂತೆ, ಅಲ್ಲಿಯವರೆಗೂ 'ಹಗುರ'ವಾಗಿದ್ದ ನಕ್ಷತ್ರ ಈಗ 'ಭಾರ'ವಾಗುತ್ತಾ ಹೋಗುತ್ತದೆ. ಆಗ ಅದರ ಗುರುತ್ವ ಹೆಚ್ಚುತ್ತದೆ. ಒಂದು ಹಂತದಲ್ಲಿ ಗುರುತ್ವದ ಪ್ರಭಾವ ಹೆಚ್ಚಾಗಿ ಅನಿಲಗೋಳ ಕುಸಿಯುತ್ತದೆ. ಈ ಹಂತವೇ 'ವ್ಯವಸ್ಥೆ ಕುಸಿತ' ಅಥವಾ 'ಡಿಜೆನರೆಸಿ'. ಈ ನಕ್ಷತ್ರಗಳೇ ಶ್ವೇತ ಕುಬ್ಜ! ಒಂದು ತಾರೆಯ ದ್ರವ್ಯರಾಶಿ ನಮ್ಮ ಸೂರ್ಯನಿಗಿಂತ ೧.೪೪ಗಿಂತಲೂ ಹೆಚ್ಚಿದರೆ, ಅದು ಶ್ವೇತಕುಬ್ಜವಾಗಿ ತನ್ನ ಬದುಕನ್ನು ಕೊನೆಗೊಳಿಸುತ್ತದೆ ಎನ್ನುವುದನ್ನು ಚಂದ್ರ ಗಣಿತೀಯವಾಗಿ ನಿರೂಪಿಸಿದ ಕಾರಣ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯಿತು." ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸುಮಾರು ೫೦ ಪುಟಗಳ ಈ ಪುಟ್ಟ ಪುಸ್ತಕವು ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಓದಿ ಮಾಹಿತಿ ಸಂಗ್ರಹಿಸಲು ಅನುಕೂಲ.