ಸುಳ್ಳು ಹೇಳದೋರ್ ಯಾರ್ ಅವ್ರೇ ?

ಸುಳ್ಳು ಹೇಳದೋರ್ ಯಾರ್ ಅವ್ರೇ ?

ವೈದ್ಯರೊಂದಿಗೆ ಮತ್ತು ನ್ಯಾಯವಾದಿಯೊಂದಿಗೆ ಸುಳ್ಳು ಹೇಳಬಾರದು ಎಂಬ ನಾಣ್ಣುಡಿ ಇದೆ. ಆದರೆ ಜನ ಎಲ್ಲರೊಂದಿಗೂ ಸುಳ್ಳು ಹೇಳಿ ದಕ್ಕಿಸಿಕೊಳ್ಳುತ್ತಾರೆ.
ಸುಳ್ಳುಗಾರರನ್ನು ಜನರು ಬೈಯ್ಯುತ್ತಾರೆ. ಹೀಯಾಳಿಸುತ್ತಾರೆ; ಕೀಳಾಗಿ ಕಾಣುತ್ತಾರೆ. ಅವರನ್ನು ನಂಬದಿರುವಂತೆ ಬೇರೆಯವರಿಗೆ ಸಲಹೆ ನೀಡುತ್ತಾರೆ; ಹಣ ಮುಂತಾದ ಕೆಲ ವಿಚಾರಗಳಲ್ಲಂತೂ ಸುಳ್ಳು ಹೇಳುವವರನ್ನು ಯಾರೂ ನಂಬುವುದೇ ಇಲ್ಲ. ವಿಚಿತ್ರವೆಂದರೆ  ಎಲ್ಲರೂ ಒಂದಿಲ್ಲೊಂದು ಸಮಯದಲ್ಲಿ ಸುಳ್ಳು ಹೇಳಿಯೇ ಇರುತ್ತಾರೆ. ಅದು ಉತ್ತಮ ಕಾರಣಕ್ಕೇ ಇರಬಹುದು ಅಥವಾ ಕೃತ್ರಿಮ ಕಾರಣಕ್ಕೇ ಇರಬಹುದು, ಆದರೆ ಸುಳ್ಳು ಮಾತ್ರ ಸರ್ವಾಂತರ್ಯಾಮಿ !
ನಾವು ಯಾವುದಾದರೂ ಸಂದಿಗ್ಥ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿರುತ್ತೇವೆ. ಆದರಿಂದ ಪಾರಾಗಲು ಯಾವ ದಾರಿಯೂ ತೋರದಿದ್ದಾಗ ತಟ್ಟನೆ ಒಂದು ಪರಮ ಸುಳ್ಳನ್ನು ಹೇಳಿದರೆ ಆ ತಾಪತ್ರಯದಿಂದ ಪಾರು! ಸುಳ್ಳು ಹೇಳಿದರೂ ನಂಬುವಂತಿಬೇಕೆಂದು ಸುಳ್ಳಿನ ಪರ ವಹಿಸುವವರೂ ಇದ್ದಾರೆ. ಸತ್ಯದ ತಲೆ ಮೇಲೆ ಹೊಡೆದಂತೆ ಇವರು ಸುಳ್ಳು ಹೇಳಬಲ್ಲರು. ಕೆಲವರು ಬಾಯಿ ಬಿಟ್ಟರೆ ಬರುವುದೆಲ್ಲಾ ಸುಳ್ಳೇ ಆಗಿದ್ದರೆ, ಇನ್ನು ಕೆಲವರು ಬಾಯಿ ಬಿಡುವ ಮೊದಲೇ ತಿಳಿದು ಹೋಗುತ್ತದೆ, ಏನೋ ಮಹಾನ್ ಸುಳ್ಳು ಹೇಳಲಿದ್ದಾನೆ ಎಂದು. ಸುಳ್ಳು ಹೇಳಿಕೊಂಡೇ ಕೆಲವರು ಜೀವನ ಸಾಗಿಸುವವರೂ ಇದ್ದಾರೆ. ಕೆಲವರು ತಾವು ಹೇಳುವ ಸುಳ್ಳನ್ನು ಎದುರಿನವರು ನಂಬಲಿ ಎಂದು ಈ ವಿಷಯ ದೇವರಾಣೆ ಸತ್ಯ ಎಂದೋ, ತಾಯಿ ಮೇಲಾಣೆ ಎಂದೋ ಹೇಳುತ್ತಿರುತ್ತಾರೆ.

 
ಸುಳ್ಳಿನ ರಕ್ಷಣೆ ಎಲ್ಲರಿಗು ಬೇಕು!
ಯಾರೊಂದಿಗಾದರೂ ನಿಷ್ಠುರವನ್ನು ಕಟ್ಟಿಕೊಳ್ಳದಿರಲೂ ನಾವು ಸುಳ್ಳಿನ ಮೊರೆ ಹೋಗುತ್ತೇವೆ. ತೀರಾ ಆತ್ಮೀಯರು ತಮ್ಮ ಮನೆಗೆ ಊಟಕ್ಕೆ ಬರುವಂತೆಯೋ, ಅಥವಾ ಬೇರೆಲ್ಲಿಗಾದರೂ ತಮ್ಮೊಂದಿಗೆ ಬರಲೋ ಹೇಳುತ್ತಾರೆ. ಆದರೆ ನಮಗೆ ಖಡಾಖಂಡಿತವಾಗಿ ನಿರಾಕರಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಹಾಗೆ ನಿರಾಕರಿಸಿದರೆ ಅವನ ಮನಸ್ಸಿಗೆ ಬೇಸರವಾಗುತ್ತದೆಂಬುದು ಒಂದೆಡೆಯಾದರೆ, ಹೋಗದಿರುವ ಇಲ್ಲವೇ ನಿರಾಕರಿಸಲು ಬಲವಾದ ಕಾರಣವಿಲ್ಲದಿರುವ ಅಥವಾ ಸತ್ಯವನ್ನು ಮರೆಮಾಚುವ ಅಸಹಾಯಕತೆ ಮತ್ತೊಂದೆಡೆ. ಆಗ ನಾವು ಸಂದಿಗ್ದತೆಗೆ ಸಿಲುಕುತ್ತೇವೆ. ನಿಜವನ್ನು ನುಡಿದರೆ ನಿಷ್ಠುರರಾಗುತ್ತೇವೆ. ಇಲ್ಲವೇ ಗುಟ್ಟಾಗಿರಬೇಕಾದ ವಿಷಯವು ಬಯಲಾಗಿ ಬಿಡುವ ಅಪಾಯವಿರುತ್ತದೆ. ಏನು ಮಾಡಬೇಕೆಂಬುದು ತೋಚದಿರುವಾಗ ಪಕ್ಕನೇ ಒಂದು ಸುಳ್ಳನ್ನು ತೇಲಿಬಿಡುತ್ತೇವೆ. ಆಗ ಆತನಿಗೂ ಸಮಾಧಾನ. ಆತನಿಂದ ಬಚಾವಾದುದರಿಂದ ನಮಗೂ ಸಮಾಧಾನ.

ಕೆಲವೊಮ್ಮೆ ನಾವು ಯಾವುದಾದರೂ ಮಾನ ಕಳೆದುಕೋಳ್ಳುವಂಥ ತಪ್ಪು ಮಾಡಿ, ಅದು ಬಹಿರಂಗಗೊಂಡಾಗ ಅದನ್ನು ನಿರಾಕರಿಸಲೂ ಸುಳ್ಳಿನ ಮೊರೆ ಹೋಗುತ್ತೇವೆ. ಕೆಲ ಬಾರಿ ನಾವು ಪ್ರಾಮಾಣಿಕರಂತೆ ಸತ್ಯವನ್ನು ಹೇಳಿ, ಆಮೇಲೆ ಪಜೀತಿಗೀಡಾಗಿ ಯಾಕಾದ್ರೂ ನಿಜ ಹೇಳಿದೆವೋ ಅಂತ ಪೇಚಾಡುತ್ತೇವೆ. ಉದಾ: ಬಹುತೇಕರು ಮದ್ಯಪಾನ ಮಾಡುತ್ತಾರಾದರೂ ಇದನ್ನು ಎಲ್ಲರೆದುರಿಗೂ ಹೇಳಿಕೊಳ್ಳಲಾಗುವುದಿಲ್ಲ. ಮುಖ್ಯವಾಗಿ ಪತ್ನಿಯಿಂದ ಮುಚ್ಚಿಡಲೇ ಬೇಕಲ್ಲ?! ಆಕೆಯೇ ಕೇಳಿದರೂ ಇಲ್ಲವೆಂದೇ ಹೇಳಬೇಕು. ನಿಜ ಹೇಳಿದರೆ ಮನೆ ರಣರಂಗವಾದೀತು. ಅಂತೆಯೇ ಮದುವೆಗೂ ಮುಂಚಿನ ಪ್ರೇಮ ಪ್ರಕರಣಗಳ ವಿಷಯ ಕೂಡಾ! ಇದನ್ನು ಗಮನಿಸಿದಾಗ ಕೆಲವು ಸಂದರ್ಭಗಳಲ್ಲಿ ಸತ್ಯಕ್ಕಿಂತಲೂ ಸುಳ್ಳು ಹೇಳುವುದೇ ವಾಸಿಯೆನಿಸುತ್ತದೆ. ನಮ್ಮ ತಕ್ಷಣೆಗಾಗಿ ಸುಳ್ಳಿನ ನೆರವು ಪಡೆಯುವುದು ತಪ್ಪಲ್ಲವಾದರೂ, ನಾವು ಹೇಳುವ ಸುಳ್ಳಿನಿಂದ ಬೇರೆಯವರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು.ನ್ಯಾಯಾಲಯದಲ್ಲಿ ನಾವು ಹೇಳುವ ಸುಳ್ಳು ಸಾಕ್ಷಿಯಿಂದ ನಿರಪರಾಧಿಗೆ ಮರಣದಂಡನೆಯಂಥ ದಂಡನೆ ಕೂಡಾ ದೊರಕಬಲ್ಲದು... ಕೊಲೆಯಾದ ವ್ಯಕ್ತಿಗೆ ಸಂಬಂಧಿಸಿದಂತೆ ವೈದ್ಯರು ಸುಳ್ಳು ಪೋಸ್ಟ್ಮಾರ್ಟಂ ರಿಪೋರ್ಟರ‍್ ನೀಡಿದರೆ ಕೊಲೆಗಾರ ಶಿಕ್ಷೆಯಿಂದ ಪಾರಾಗಬಲ್ಲ.... ಸುಳ್ಳು ಆಶ್ವಾಸನೆಗಳಿಂದ ಜನರನ್ನು ವಂಚಿಸಿ ಅಧಿಕಾರಕ್ಕೆ ಬರುವ ಭ್ರಷ್ಟ ರಾಜಾಕಾರಣಿಗಳು ದೇಶದ ಪ್ರಗತಿಗೆ ಮಾರಕವಾಗಬಲ್ಲರು... ವಿನಿವಿಂಕ್ ನಂಥ ಬ್ಲೇಡ್ ಸಂಸ್ಥೆಗಳಿಂದ ಸಾವಿರಾರು ಕುಟುಂಬಗಳು ಬೀದಿ ಪಾಲಾಗಬಲ್ಲವು... ಪ್ರೀತಿಸುವಂತೆ ನಾಟಕವಾಡುವ ಹುಡುಗಿಯು, ಹುಡುಗನ ಆತ್ಮಹತ್ಯೆಗೆ ಕಾರಣಳಾಗಬಲ್ಲಳು..... ಸ್ನೇಹಿತನ ಹೆಂಡತಿಯ ಶೀಲದ ಬಗ್ಗೆ ಸುಳ್ಳು ಅಪವಾದ ಹೊರಿಸುವಾತ ತನ್ನ ಗೆಳೆಯನ ಕುಟುಂಬವನ್ನೇ ನೆಮ್ಮದಿ ಹೀನ ಮಾಡಬಹುದು. ಹೀಗೆ ದುರಂತದ ಪಟ್ಟಿ ಸಾಗುತ್ತಾ ಹೋಗುತ್ತದೆ. ಆದ್ದರಿಂದ ನಾವು ಹೇಳುವ ಸುಳ್ಳು ಎಂದಿಗೂ ಅನಾಹುತಕ್ಕೆ ಎಡೆ ಮಾಡದಂತಿರಬೇಕು.

ಸುಳ್ಳಿಗೆ ನೂರೆಂಟು ಮುಖ

 

ಕೆಲವು ಜನರು ಅಲ್ವ ತೃಪ್ತಿಗಾಗಿಯೋ, ಒಣ ಪ್ರತಿಷ್ಠೆಗಾಗಿಯೋ, ಇಲ್ಲದಿರುವುದು ಇದೆಯೆಂಬಂತೆ ಬಿಂಬಿಸಿಕೊಳ್ಳಲೋ ಹಸಿ ಹಸಿ ಸುಳ್ಳುಗಳನ್ನು ಹೇಳುತ್ತಾರೆ. ಮತ್ತೆ ಕೆಲವರು ಸುಳ್ಳು ಮಾತುಗಳಿಂದ ಜನರನ್ನು ತಮ್ಮತ್ತ ಆಕಷರ್ಿಸಿಕೊಳ್ಳಲು ಯತ್ನಿಸುತ್ತಾರೆ. ಇನ್ನು ಕೆಲವರು ತಮ್ಮ ಕಾರ್ಯ ಸಾಧನೆಗಾಗಿ ರಂಗು ರಂಗಿನ ಸುಳ್ಳುಗಳನ್ನು ಹೇಳುತ್ತಾರೆ. ಅವರು ಅದೆಷ್ಟು ನೈಜವಾಗಿ, ನಂಬಿಕೆ ಬರುವಂತೆ ಸುಳ್ಳು ಹೇಳುತ್ತಾರೆಂದರೆ ಆತನ ಚಾಳಿ ತಿಳಿದವರು ಬುದ್ಧಿವಾದ ಹೇಳಿದರೂ ಎದುರಿನವರು ನಂಬದಿರುವಷ್ಟು! ಮುಗ್ದರನ್ನು ಸುಳ್ಳುಗಾರನು ತನ್ನಿಷ್ಟದಂತೆ ಬಳಸಿಕೊಳ್ಳುತ್ತಾನೆ. ಹರೆಯದ ಹುಡುಗಿಯರನ್ನು ತಮ್ಮ ಸುಳ್ಳಿನ ಬಲೆ ಬೀಸಿ ವಂಚಿಸುವ ಅದೆಷ್ಟು ಪ್ರಕರಣಗಳನ್ನು ನಾವು ನೋಡುವುದಿಲ್ಲ? ಆದ್ದರಿಂದ ನಾವು ಯಾವುದನ್ನೇ ಆಗಲಿ ಬೇಗನೆ ನಂಬಬಾರದು, ಯೋಚಿಸಿ ಮುಂದಡಿಯಿಡಬೇಕು. ಮುಖ್ಯವಾಗಿ ಯಾರೊಂದಿಗಾದರೂ ಗೆಳೆತನ ಮಾಡುವಾಗ ಆತನ ಬಗ್ಗೆ ತಿಳಿದುಕೊಳ್ಳಬೇಕು.

ಪರರ ಮೇಲಿನ ಹೊಟ್ಟೆ ಕಿಚ್ಚಿನಿಂದಲೋ, ಸಿಟ್ಟಿನಿಂದಲೋ, ದ್ವೇಷ ಸಾಧನೆಯಿಂದಲೋ ಅವರ ಚಾರಿತ್ರ್ಯವಧೆ ಮಾಡಲು ಸುಳ್ಳಿನ ಆಸರೆ ಪಡೆಯುವಂಥವರೂ ಇದ್ದಾರೆ. ಭ್ರಷ್ಟಾಚಾರದ ಆರೋಪವೆದುರಿಸುತ್ತಿರುವ ರಾಜಕಾರಣಿಯು ತನ್ನ ಚಾರಿತ್ರ್ಯವಧೆಗಾಗಿ ವಿರೋಧಿಗಳು ಮಾಡುತ್ತಿರುವ ಸುಳ್ಳು ಆಪಾದನೆಯೆಂದು ಸಮಥರ್ಿಸಿಕೊಳ್ಳುವುದು ಇದಕ್ಕೆ ನಿದರ್ಶನ. ಅವರು ಹೇಳುವುದು ಸುಳ್ಳೇ? ಇವರು ಹೇಳುವುದು ಸುಳ್ಳೇ? ಎಂಬುದು ನಮಗೆ ತಿಳಿಯಲು ಸಾಧ್ಯವೇ ಇಲ್ಲ. ಇಂದಿನ ನಮ್ಮ ಜನಪ್ರತಿನಿಧಿಗಳು ಜನಸೇವೆ ಮಾಡದಿದ್ದರೂ ಪರಸ್ಪರರ ವಿರುದ್ಧ ಸುಳ್ಳು ಆಪಾದನೆಗಳನ್ನಂತೂ ತಪ್ಪದೇ ಮಾಡುತ್ತಾರೆ!ಚುನಾವಣೆ ಸಮಯದಲ್ಲಂತೂ ರಾಜಕಾರಣಿಗಳು ಸುಳ್ಳು ಆಶ್ವಾಸನೆಗಳ ಮಹಾಪೂರವನ್ನೇ ಹರಿಸುತ್ತಾರೆ. ಜನರಲ್ಲಿ ಇಲ್ಲದ ಆಸೆ ಹುಟ್ಟಿಸುತ್ತಾರೆ. ಆಧಿಕಾರಕ್ಕೆ ಬಂದ ನಂತರ ಆಶ್ವಾಸನೆಗಳನ್ನು ಈಡೇರಿಸುವುದಾಗಿ ಹೇಳುತ್ತಲೇ ಅಧಿಕಾರಕ್ಕೆ ತಂದರೆ ಹಿಂದಿನ ಆಶ್ವಾಸನೆಗಳನ್ನು ಈಡೇರಿಸುವುದಾಗಿ ಹೇಳಿ, ಅವುಗಳೊಂದಿಗೆ ಮತ್ತಷ್ಟು ಸುಳ್ಳು ಭರವಸೆಯನ್ನು ಸೇರಿಸುತ್ತಾರೆ. ಎಂಥಾ ವಿಪಯರ್ಾಸ! ತಾವು ಸುಳ್ಳು ಹೇಳಿದರೂ ಜನ ನಂಬುತ್ತಾರೆಂಬ ವಿಶ್ವಾಸದಿಂದ ತಾನೇ ಅವರು ಸುಳ್ಳು ಹೇಳುವುದು?.ಕೆಲವರು ಹಣ ಸುಲಿಯಲು ಸುಳ್ಳು ಹೇಳುತ್ತಾರೆ. ಇಂಥವರು ಹೆಚ್ಚಾಗಿ ನೌಕರಿ ಕೊಡಿಸುವುದಾಗಿ ಹೇಳುತ್ತಿರುತ್ತಾರೆ. ಇದನ್ನು ಕೆಳಮಟ್ಟದಿಂದ ಹಿಡಿದು ಮೇಲ್ಮಟ್ಟದ ವರ್ಗದ ಜನರೂ ಮಾಡುತ್ತಾರೆ. ದುಬೈಯಲ್ಲಿ ಕೆಲಸ ಕೊಡಿಸುವುದಾಗಿ ಹೇಳುವವರು ಹೆಚ್ಚಾಗಿ ಮೋಸಗಾರರಾಗಿರುತ್ತಾರೆ. ಸಿನೆಮಾದಲ್ಲಿ ಅಭಿನಯಿಸುವ ಬಯಕೆಯುಳ್ಳ ಹುಡುಗಿಯರು ವಂಚಕರಿಗೆ ತಮ್ಮ ಶೀಲ, ಹಣಗಳೆರಡನ್ನೂ ಅಪರ್ಿಸಿಬಿಡುತ್ತಾರೆ. ಐದು ಲಕ್ಷ ತನ್ನಿ ಸಾಕು, ನಿಮಗೊಂದು ಉತ್ತಮ ಚಿತ್ರ ನಿಮರ್ಿಸಿ ಕೊಡುತ್ತೇನೆ ಎಂದು ಸುಳ್ಳು ಹೇಳಿ ತಮ್ಮ ಬದುಕು ಸಾಗಿಸುವ ನಿದರ್ೇಶಕರು ಗಾಂಧಿನಗರದಲ್ಲಿ ಸಿಗುತ್ತಾರೆ. ದುಡ್ಡು ಕೊಡುತ್ತೇನೆಂದು ಹೇಳಿ ಕೆಲಸ ಮಾಡಿಸಿಕೊಂಡು ಕೈ ಎತ್ತುವವರಿಗೇನು ಬರವೇ?

ಸುಳ್ಳಿಗೆ ಸುಖವಿಲ್ಲ, ಸತ್ಯಕ್ಕೆ ಸಾವಿಲ್ಲ

 

ನಿಜವನ್ನು ಹೇಳಿದರೂ ತಾವು ನಂಬದಿರುವ ಜನರೂ ನಮ್ಮ ಮಧ್ಯೆ ಕಾಣಸಿಗುತ್ತಾರೆ. ಸಭ್ಯಸ್ಥರು ತಾವು ಮಾಡಿದ ಯಾವುದಾದರೂ ಕೆಟ್ಟ ಕೆಲಸದ ಬಗ್ಗೆ ಪ್ರಮಾಣಿಕವಾಗಿ ಹೇಳಿಕೊಂಡರೆ ಎದುರಿನವನು ನಂಬುವುದಿಲ್ಲ, ಆತನು ಸುಳ್ಳು ಹೇಳುತ್ತಿದ್ದಾನೆಂದೇ ಭಾವಿಸುತ್ತಾನೆ!

`ನಮ್ಮಮ್ಮನಾಣೆಗೂ ನಿಜ ಹೇಳ್ತಿದೀನಿ ಎಂದು ತಲೆ ಮೇಲೆ ಕೈಯಿಟ್ಟು ಆಣೆ ಮಾಡುವಂಥ ಇಲ್ಲವೇ `ಸತ್ಯವನ್ನೇ ನುಡಿಯುತ್ತೇನೆ, ಸತ್ಯವನ್ನಲ್ಲದೆ ಬೇರೇನೂ ನುಡಿಯುವುದಿಲ್ಲ ಎಂದು ನ್ಯಾಯಾಲಯದಲ್ಲಿ ಭಗವದ್ಗೀತೆ ಮೇಲೆ ಕೈಯಿಟ್ಟು ಆಣೆ ಮಾಡಿ ಶುದ್ಧ ಸುಳ್ಳು ಹೇಳುವಂಥ ಭೂಪರಿಗೂ ಕೊರತೆಯೇನಿಲ್ಲ. ಇಂಥವರು ಕೊಂಚವೂ ನಾಚಿಕೆಯಿಲ್ಲದೆ ಆಣೆ ಮಾಡಿ ಸುಳ್ಳುಗಳನ್ನು ಹೇಳುತ್ತಲೇ ಇರುತ್ತಾರೆ.`ಅತಿಯಾದರೆ ಅಮೃತವೂ ವಿಷ ಎಂಬಂತೆ, ಸುಳ್ಳು ಮಾತುಗಳು ಅತಿಯಾದರೆ ನಾವು ಇತರರ ದೃಷ್ಟಿಯಲ್ಲಿ ಸಣ್ಣವರಾಗಿ ಬಿಡುತ್ತೇವೆ. ಸಿಗುತ್ತಿರುವ ಮಯರ್ಾದೆಯೂ ಸಿಗದಾಗುತ್ತದೆ. ನಮ್ಮ ವ್ಯಕ್ತಿತ್ವಕ್ಕೆ ಕುಂದು ಬರುತ್ತದೆ. ಅಪರೂಪಕ್ಕೆ ನಿಜವನ್ನು ನುಡಿದರೂ ನಂಬುವುದಿಲ್ಲ. ನಮ್ಮ ಪ್ರತಿ ಮಾತನ್ನೂ ಜನ ಅನುಮಾನಿಸುವಂತಾಗುತ್ತದೆ. ನಮ್ಮೆದುರು ಗೆಳೆಯರು ಆತ್ಮೀಯರಂತೆ ಕಂಡರೂ ಸಹ ನಮ್ಮನ್ನು ಆದಷ್ಟೂ ದೂರವಿಡಲು ನೋಡುತ್ತಿರುತ್ತಾರೆ.  ಉತ್ತಮ ಸ್ನೇಹಿತರನ್ನು ಕಳೆದುಕೊಂಡು ನಮ್ಮಂತೆಯೇ ಬೊಂಗು ಬಿಡುವ ಜನರೇ ನಮ್ಮ ಸ್ನೇಹಿತ ವಲಯದಲ್ಲಿ ಉಳಿಯುತ್ತಾರೆ.ಆದ್ದರಿಂದ ಸಣ್ಣ ವಿಷಯವಾದರೂ ಸರಿ, ಯೋಚಿಸಿ ಸುಳ್ಳು ಹೇಳಬೇಕು. ಹಾಗಂತ ಸುಳ್ಳು ಹೇಳುವುದು ತಪ್ಪಲ್ಲವೆಂದು ಭಾವಿಸಬಾರದು. ಮೊದಲೇ ಹೇಳಿದಂತೆ ಅದು ಯಾವುದೇ ಅಭಾಸಕ್ಕೆ ಅಸ್ಪದ ನೀಡದಂತಿರಬೇಕು. ಅನಿವಾರ್ಯತೆ ಇದ್ದರೆ ಮಾತ್ರ ಸುಳ್ಳು ಹೇಳುವುದೆಂಬ ನಿರ್ಧಾರವನ್ನು ನಾವು ಮಾಡಿಕೊಳ್ಳಬೇಕು. ಯಾವುದೇ ವಿಷಯವನ್ನು ಸತ್ಯ ಹೇಳಲಾಗದ ಸಂದರ್ಭದಲ್ಲಿ ಸುಳ್ಳು ಹೇಳುವುದಕ್ಕಿಂತಾ ಸುಮ್ಮನಾಗಿ ಬಿಡುವುದೇ ಉತ್ತಮ. ಸುಳ್ಳೊಂದನ್ನು ಹೇಳುವುದರಿಂದ ಯಾರಿಗಾದರೂ ಲಾಭವಿದ್ದರೆ ಹೇಳಬಹುದು, ಆದರೆ ಅದನ್ನು ಸಂಪೂರ್ಣವಾಗಿ ಯೋಚಿಸಿ ಹೇಳಬೇಕು. ಬಾಯಿಗೆ ಬಂತೆಂದು ತಟ್ಟನೆ ಹೇಳಿದರೆ ಸಿಕ್ಕಿ ಹಾಕಿಕೊಂಡು ತೊಂದರೆಗೆ ಒಳಗಾಗಬಹುದು. ಮುಖ್ಯವಾಗಿ ವ್ಯವಹಾರದಲ್ಲಿ, ಗೆಳೆಯರೊಂದಿಗೆ ಸುಳ್ಳು ಹೇಳಲೇಬಾರದು.ಸುಳ್ಳು ಹೇಳುವಂಥ ಸಂದರ್ಭಗಳು ಒದಗಿ ಬಂದಾಗಲೆಲ್ಲಾ ಸಾಧ್ಯವಾದಷ್ಟೂ ಪ್ರಾಮಾಣಿಕರಾಗಿರಲು, ನಿಜ ಹೇಳಲು ಪ್ರಯತ್ನಿಸಿದರೆ ಸತ್ಯವು ತಾನಾಗಿಯೇ ಗೋಚರಿಸುತ್ತದಲ್ಲವೆ ?