'ಸುವರ್ಣ ಸಂಪುಟ' (ಭಾಗ ೫೪) - ಸು.ರಂ.ಎಕ್ಕುಂಡಿ
ಕನ್ನಡದ ಸುಪ್ರಸಿದ್ಧ ಕವಿ ಹಾಗೂ ಕಥೆಗಾರರಲ್ಲಿ ಸು.ರಂ.ಎಕ್ಕುಂಡಿ ಅವರು ಒಬ್ಬರು. ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗನಾಥ (ರಂಗಣ್ಣ) ಎಕ್ಕುಂಡಿ. ಹುಟ್ಟಿದ್ದು ಜನವರಿ ೨೦, ೧೯೨೩ರಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ. ೧೯೪೪ರಲ್ಲಿ ಬಿ ಎ (ಆನರ್ಸ್) ಪದವಿಯನ್ನು ಪಡೆದ ಇವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿಕೊಂಡರು. ೩೫ ವರ್ಷ ಅದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ಮುಖ್ಯೋಪಾಧ್ಯಾಯರಾಗಿ ಪದೋನ್ನತಿ ಪಡೆದು, ನಂತರ ನಿವೃತ್ತಿ ಹೊಂದಿದರು.
ಬಾಲ್ಯದಲ್ಲಿ ಬಹಳ ಬಡತನ ಇದ್ದ ಕಾರಣ ಇವರಿಗೆ ವಿದ್ಯೆ ಕಲಿಯಲು ಬಹಳ ಕಷ್ಟವಾಗಿತ್ತು. ತಮ್ಮ ಐದನೇ ವಯಸ್ಸಿನಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡ ಎಕ್ಕುಂಡಿಯವರು ಸವಣೂರಿನ ಶ್ರೀ ಸತ್ಯಭೋಧ ಸೇವಾಸಂಘ ನಡೆಸುತ್ತಿದ್ದ ವಾಚನಾಲಯದ ಸದಸ್ಯರ ಪುಸ್ತಕಗಳನ್ನು ಅವರವರ ಮನೆಗೆ ತಲುಪಿಸುವ ಕೆಲಸವನ್ನು ಹೊತ್ತುಕೊಂಡರು. ಇದರಿಂದ ದೊರೆತ ಅಲ್ಪ ಆದಾಯದಿಂದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು.
ಎಕ್ಕುಂಡಿಯವರು ಗದ್ಯ ಹಾಗೂ ಪದ್ಯ ಎರಡರ ರಚನೆಯಲ್ಲೂ ಎತ್ತಿದ ಕೈ. ಅವರು ಶ್ರೀ ಆನಂದ ತೀರ್ಥರು, ಸಂತಾನ, ಹಾವಾಡಿಗರ ಹುಡುಗ, ಮತ್ಸ್ಯಗಂಧಿ, ಬೆಳ್ಳಕ್ಕಿಗಳು ಮೊದಲಾದ ಕವನ ಸಂಕಲನಗಳನ್ನೂ, ನೆರಳು ಎಂಬ ಕಥಾ ಸಂಕಲನವನ್ನೂ, ಪ್ರತಿಬಿಂಬಗಳು ಎಂಬ ಕಾದಂಬರಿಯನ್ನೂ ರಚಿಸಿದ್ದಾರೆ. ಎರಡು ರಷ್ಯನ್ ಕಾದಂಬರಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದ್ದು. ಪು.ತಿ.ನರಸಿಂಹಾಚಾರ್ ಇವರ ಪರಿಚಯ ಕಥನವನ್ನು ಬರೆದಿದ್ದಾರೆ.
ಇವರ ಕೃತಿಗಳಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ‘ಲೆನಿನ್ನರ ನೆನಪಿಗೆ' ಕೃತಿಗೆ ೧೯೭೦ರಲ್ಲಿ ಸೋವಿಯತ್ ಲ್ಯಾಂಡಿನ ನೆಹರೂ ಪುರಸ್ಕಾರ ಲಭಿಸಿದೆ. ೧೯೭೫ರಲ್ಲಿ ‘ಮತ್ಸ್ಯಗಂಧಿ' ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ೧೯೯೨ರಲ್ಲಿ ‘ಬಕುಲದ ಹೂಗಳು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಬೆಳ್ಳಕ್ಕಿಗಳು ಹಸ್ತಪ್ರತಿಗೆ ೧೯೮೨ರಲ್ಲಿ ಮುದ್ದಣ ಸ್ಮಾರಕ ಬಹುಮಾನ ದೊರೆತಿದೆ. ಎಕ್ಕುಂಡಿಯವರು ಆಗಸ್ಟ್ ೨೦, ೧೯೯೫ರಲ್ಲಿ ನಿಧನ ಹೊಂದಿದರು.
‘ಸುವರ್ಣ ಸಂಪುಟ'ದಲ್ಲಿ ಇವರ ಐದು ಕವನಗಳು ಪ್ರಕಟವಾಗಿವೆ. ಅತಿಥಿ, ಪ್ರೀತಿ, ಮೀನು ಪೇಟೆ, ಶ್ವೇತ ಕೇತು ದೇವರ್ಷಿ, ಹಾವಾಡಿಗರ ಹುಡುಗ ಎಂಬ ಹೆಸರಿನ ಕವನಗಳು ಇದರಲ್ಲಿವೆ. ನಾವು ಈ ಸಂಪುಟದಿಂದ ‘ಹಾವಾಡಿಗರ ಹುಡುಗ' ಕವನವನ್ನು ಆರಿಸಿಕೊಂಡಿದ್ದೇವೆ. ಓದುವ ಸುಖ ನಿಮ್ಮದಾಗಲಿ…
ಹಾವಾಡಿಗರ ಹುಡುಗ
೧
ಒಂಬತ್ತು ಬಾಗಿಲುಗಳಿರುವ ಮನೆಗೊಪ್ಪಿದವು
ಒಂಬತ್ತು ಉಪ್ಪರಿಗೆ ;
ತುಂಬಿತ್ತು ಸಂಪತ್ತು, ತುಳುಕಾಡುತ್ತಿದ್ದವು
ಒಂಬತ್ತು ಕೊಪ್ಪರಿಗೆ,
ಬಿಡಿಗಾಸು ಕೊಡ ಹೊರ
ಬಿಡದಂತೆ ಹಗಲಿರುಳು
ನಿಧಿಯ ಕಾಯುವ ಸರ್ಪ
ಬಂದ ಬಂದವರೆದುರು
ಹೆಡೆಯೆತ್ತಿ ಫೂತ್ಕರಿಸುತ್ತಿತ್ತು.
ಕಾಸುಕಾಸಿನ ಪುಂಗಿ
ಯೆಳೆದ ಲೋಹಸ್ವರಕೆ
ಹೆಡೆಯೆತ್ತಿ ತೂಗುತ್ತಿತ್ತು
ನಿಧಿಯ ಕಾಯುವ ಹಾವಿಗಿನ್ನೇನು ಗೊತ್ತು ?
೨
ಒಂದು ದಿನ ಮುಂಜಾವು;
ಘಮಘಮಿಸಿದವು ಹೂವು.
ದಿವ್ಯ ಸೌಗಂಧಿಕ
ಸಹಸ್ರ ಸೌರಭಿ ತಾಳಿ
ಬಿರಿದ ದಿಕ್ಕುಗಳಿಂದ
ಬೀಸಿದವು ಗಾಳಿ.
ಅಂದು ಬಂದೇ ಬಿಟ್ಟ
ಹಾವಾಡಿಗರ ಪುಟ್ಟ
ಹುಡುಗ ಬಲು ದಿಟ್ಟ !
ಮುಗಿಲಿಗಿಂತಲು ನೀಲ
ಮೈಯ ಬಣ್ಣ.
ಮೊಸರು ಬೆಣ್ಣೆಯನುಂಡ
ಮುದ್ದು ಗೊಲ್ಲರ ಬಣ್ಣ.
ತಳಿರು ತುಟಿ ಬಿಡಿಸಿದರೆ
ಮುಗುಳು ನಗೆ ಗಿಣ್ಣ
ಹೆಜ್ಜೆಯಿಟ್ಟರೆ ಸಾಕು
ನೆಲವು ಬಂಗಾರ.
ಗೆಜ್ಜೆಗಳು ಗಂಟೆಗಳು
ಕಿವಿ ತುಂಬ ಸಿಂಗಾರ.
೩.
ನಿಧಿಯ ಕಾಯುವ ಸರ್ಪ
ಫೂತ್ಕರಿಸ ತೊಡಗಿತ್ತು,
ಹೆಡೆಯೆತ್ತಿ ಕಣ್ಣುಬಿಟ್ಟು.
ಹಾವಾಡಿಗರ ಹುಡುಗ
ಮುಂದೆ ಬಂದೇ ಬಿಟ್ಟ
ಒಂದೊಂದೆ ಹೆಜ್ಜೆಯಿಟ್ಟು.
ಹಾವಿನೆದುರು ನಿಂದು
ಪುಟ್ಟ ಕೈಯೆತ್ತಿದನು,
ನೇವರಿಸಿ ಹೆಡೆಯ ಮೇಲೆ
ಗರುಡವಾಹನನಿತ್ತೆ
ಗಾರುಡಿಗ ಸ್ಪರ್ಶಕ್ಕೆ
ಹಾವಾಯ್ತು ರತ್ನಮಾಲೆ.
ವಿಧಿಯ ಕೊಳಲಿನ ಕರೆಗೆ
ವಿಧಿಯ ಕಾಯುವ ಸರ್ಪ
ಹೊಳೆದಿರಲು ಮಾಲೆಯಾಗಿ
ಎತ್ತಿ ಕೊರಳೊಳಗಿರಿಸಿ
ಮತ್ತೊಮ್ಮೆ ಮಲಗಿದನು
ಶ್ರೀಹರಿ ಶೇಷಶಾಯಿಯಾಗಿ.
***
(ಸುವರ್ಣ ಸಂಪುಟ ಕೃತಿಯಿಂದ ಆಯ್ದ ಕವನ)