'ಸುವರ್ಣ ಸಂಪುಟ' (ಭಾಗ - ೭೩) - ಎಚ್.ತಿಪ್ಪೇರುದ್ರಸ್ವಾಮಿ
ಡಾ। ಹೊನ್ನಾಳಿ ತಿಪ್ಪೇರುದ್ರಸ್ವಾಮಿ (ಎಚ್. ತಿಪ್ಪೇರುದ್ರಸ್ವಾಮಿ) ಇವರು ಕನ್ನಡ ಸ್ವಾರಸ್ವತ ಲೋಕದ ಮೇರು ಕವಿಗಳಲ್ಲಿ ಓರ್ವರು. ಎಲೆಮರೆಯ ಕಾಯಿಯಂತೇ ಬದುಕಿದ ಇವರ ಬಗ್ಗೆ ತಿಳಿದವರು ಕೆಲವರು ಮಾತ್ರ. ಇವರು ಹುಟ್ಟಿದ್ದು ಫೆಬ್ರವರಿ ೩, ೧೯೨೮ರಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಎಂಬ ಗ್ರಾಮದಲ್ಲಿ. ಇವರ ತಂದೆ ಚೆನ್ನಮಲ್ಲಯ್ಯ ಹಾಗೂ ತಾಯಿ ಬಸಮ್ಮ. ಹೊನ್ನಾಳಿ, ಶಿರಾಳಕೊಪ್ಪ, ಶಿವಮೊಗ್ಗಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ ಎ ಹಾಗೂ ಎಂ ಎ ಪದವಿಗಳನ್ನು ಪಡೆದುಕೊಂಡರು. ಇವರು ಎಂ ಎ ಪದವಿಯನ್ನು (೧೯೫೨) ಪ್ರಥಮ ರಾಂಕ್ ಪಡೆಯುವ ಮೂಲಕ ಪೂರೈಸಿದ್ದು ಇವರ ಕಲಿಕಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.
ಎಂ ಎ ಬಳಿಕ ಹಾಸನದ ಕಾಲೇಜಿನಲ್ಲಿ ಕನ್ನಡದ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ೧೯೬೨ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ 'ಶರಣರ ಅನುಭಾವ ಸಾಹಿತ್ಯ' ಎಂಬ ಮಹಾ ಪ್ರಬಂಧಕ್ಕೆ ಪಿ ಹೆಚ್ ಡಿ ಪದವಿಯನ್ನು ಪಡೆದುಕೊಂಡರು. ಇವರು ಸ್ವಲ್ಪ ಸಮಯ ಮೈಸೂರಿನ ಮಹಾರಾಣಿ ಕಾಲೇಜಿನಲ್ಲೂ ಉಪನ್ಯಾಸಕರಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಬಿ ಆರ್ ಪ್ರಾಜೆಕ್ಟ್ ನ ಸ್ನಾತಕೋತ್ತರ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಪ್ರಾಚೀನ ಕನ್ನಡ ಕಾವ್ಯ ಹಾಗೂ ಶಾಸ್ತ್ರಗಳ ಅಧ್ಯಯನ ಇವರ ಮೆಚ್ಚಿನ ವಿಷಯವಾಗಿತ್ತು.
ಇವರು ಬರೆದ ಐತಿಹಾಸಿಕ ಕಾದಂಬರಿಗಳು ಬಹಳ ಜನಪ್ರಿಯವಾಗಿವೆ. ಅಲ್ಲಮ ಪ್ರಭುಗಳ ಬಗ್ಗೆ ಬರೆದ ಪರಿಪೂರ್ಣದೆಡೆಗೆ, ಅಕ್ಕಮಹಾದೇವಿಯ ಬಗ್ಗೆ ಕದಳಿಯ ಕರ್ಪೂರ, ನಿಜಗುಣ ಶಿವಯೋಗಿಯ ಬಗ್ಗೆ ಜ್ಯೋತಿ ಬೆಳಗಿತು, ಸಿದ್ದರಾಮನ ಚರಿತ್ರೆಯಾದ ನೆರಳಾಚೆಯ ಬದುಕು, ಷಣ್ಮುಖ ಶಿವಯೋಗಿಯ ಬಗ್ಗೆ ಜಡದಲ್ಲಿ ಜಂಗಮ ಮೊದಲಾದ ಕಾದಂಬರಿಗಳನ್ನು ರಚಿಸಿದ್ದಾರೆ. ತಪೋರಂಗ ಇವರ ಕವನ ಸಂಕಲನ, ಸಾಹಿತ್ಯ ಚಿತ್ರಗಳು ಇವರ ಕಥಾಸಂಕಲನ, ವಿಧಿ ಪಂಜರ ಎಂಬ ನಾಟಕ ಹಾಗೂ ತೌಲನಿಕ ಕಾವ್ಯ ಮೀಮಾಂಸೆ, ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ, ಸಾಹಿತ್ಯ ವಿಮರ್ಶೆಯ ಮೂಲ ತತ್ವಗಳು, ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಸಾಹಿತ್ಯ ಮತ್ತು ಸಮಕಾಲೀನ ವಾಸ್ತವಿಕತೆ ಎಂಬ ವೈಚಾರಿಕ ವಿಮರ್ಶಾ ಬರಹಗಳನ್ನು ಬರೆದಿದ್ದಾರೆ.
ತಿಪ್ಪೇರುದ್ರಸ್ವಾಮಿಯವರ 'ಕರ್ನಾಟಕ ಸಂಸ್ಕೃತಿ ಸಮೀಕ್ಷೆ' ಕೃತಿಗೆ ೧೯೬೯ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇವರು ಅಕ್ಟೋಬರ್ ೨೮, ೧೯೯೪ರಲ್ಲಿ ಮೈಸೂರಿನಲ್ಲಿ ತಮ್ಮ ೬೬ನೇ ವಯಸ್ಸಿನಲ್ಲಿ ನಿಧನ ಹೊಂದಿದರು.
'ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಒಂದು ಕವನ ಪ್ರಕಟವಾಗಿದೆ. ಆ ಕವನ ಸ್ವಲ್ಪ ದೀರ್ಘವಾಗಿದ್ದರೂ ಓದುಗರ ಅಪೇಕ್ಷೆಯ ಮೇರೆಗೆ ಪೂರ್ಣವಾಗಿ ನೀಡಲಾಗಿದೆ.
ಯಾತ್ರೆ
"ಎತ್ತಣ ಮಾಮರ, ಎತ್ತಣ ಕೋಗಿಲೆ,
ಎತ್ತಣಿಂದೆತ್ತ ಸಂಬಂಧವಯ್ಯ !"
ಜೀವನದ ಪಯಣದಲಿ ದೊರೆವ ಅನುಭವದಲ್ಲಿ
ಈ ಉದ್ಗಾರಕುತ್ತರವ ಕಾಣಬಹುದು ;
ಎತ್ತಣದು ಮೈಸೂರು, ಎತ್ತಣದು ಎಲ್ಲೋರ !
ದೌಲತಾಬಾದಿನೀ ನೆತ್ತಿಯಲಿ ನಿಂತು
ಈ ಸಂಗಡಿಗರೊಡನಾಡುತ್ತ ನೋಡುತಿಹುದೆತ್ತ !
ಅದು ಹೇಗೊ ಲಭಿಸಿತ್ತು ಆ ಯೋಗ.
***
ನಾವೆಲ್ಲ ಒಟ್ಟಾಗಿ ಒಂದೆ ದಿನ ರೈಲಿನಲಿ
ಹೊರಟಿದ್ದೆವಿಲ್ಲಿಂದ ಯಾತ್ರೆಗಾಗಿ.
ಅಜಂತ, ಎಲ್ಲೋರ, ಎಲಿಫೆಂಟ, ಬಾದಾಮಿ, ಹಂಪೆ ;
ಈ ಕಲೆಯ ಕಾವ್ಯಗಳ ಕಾನೂವಾಸೆಯನು
ಕಂಠಪೂರ್ತಿಯೆ ಕುಡಿದು ನುಗ್ಗಿದೆವು.
ಎಲ್ಲಿಯೋ ಇಳಿದೆವು. ಮತ್ತೆಲ್ಲೊ ಹತ್ತಿದೆವು
ಎಲ್ಲಿಯೂ ಕೊಳ್ಳಲಿಲ್ಲ ಟಿಕೆಟ್ಟು.
ಮೈಸೂರಿನಿಂದ ಮತ್ತೆ ಮೈಸೂರಿಗೆ
ನಿರ್ಧಾರವಾಗಿತ್ತೆಮ್ಮ "ಬಡ್ಜೆಟ್ಟು"
ಅದಕ್ಕೆ ತಕ್ಕಂತೆ "ರೌಂಡು ಟೂರು ಟಿಕ್ಕೆಟ್ಟು"
***
ಜೀವನದ ಯಾತ್ರೆಯಲ್ಲಿಯು ನಮಗೆ ಇರಬಹುದು
ಒಂದು "ರೌಂಡು ಟೂರು ಟಿಕೆಟ್ಟು",
ಯಾವ ಕ್ಷೇತ್ರಗಳಿಹವೊ ಅದರಲ್ಲಿ
ಯಾವ ಗುಹೆಗಳ ಭಿತ್ತಿಚಿತ್ರ ದರ್ಶನವಿಹುದೊ?
ಯಾವ ಮಾತಂಗ ಪರ್ವತದ ಏರುವಿಕೆಯೋ?
ಸಾಲಾರು ಜಂಗು ಮ್ಯೂಸಿಯಮ್ಮಂತು ಇರಲೇ ಬೇಕು ;
ಜೀವನದ ವೈವಿಧ್ಯ ದರ್ಶನಕೆ ಅದು ಬೇಕು,
"ನೋಡುತ್ತ ನಡೆಯುತಿರಿ
ಒಂದೆ ಕಡೆ ನಿಂತು ಬಿಡಬೇಡಿ"
"ಚಿಕ್ಕ ಗುಹೆಗಳ ಬಿಟ್ಟು ಬೇಗ ಬೇಗನೆ ಬನ್ನಿ
ಮುಂದಿಹುದು ಕೈಲಾಸ ಹೋಗುವ ಬನ್ನಿ"
ನಿಮ್ಮ ಎಡಪಕ್ಕದಲಿ ಹಳ್ಳತಿಟ್ಟುಗಳಿಹವು
ಜಾರಿ ಬಿದ್ದೀರಿ ಜೋಕೆ"-
ಜೀವನದ ಯಾತ್ರೆಯಲ್ಲಿಯು ನಮಗೆ
ಹೇಳುವವರಿದ್ದಾರೆ ಈ ಮಾತು.
ಗುರುಗಳೋ, ಗ್ರಂಥಗಳೋ, ಘಟನೆಗಳೋ !
ಯಾವ ರೂಪದಿ ಮೂಡಿ ಮೈ ತಳೆದು ಬರುವುದೋ ಆ ಮಾತು !
ಬಂದಾಗ ಕಿವುಡಾಗದಿದ್ದರೆ ಸಾಕು,
ಯಾತ್ರೆಯಲ್ಲಿ ಎಲ್ಲವೂ ಸುಖಕರವೆ ಆಗುವುದು.
ನೋಡುವುದ ನೋಡಲಿಲ್ಲವೆ -ಎಂಬ
ಸಂಕಟವು ತಪ್ಪುವುದು.
ಪಟ್ಟಿಯಲಿ ಇಲ್ಲದಿದ್ದರು ಕೂಡ
ಹಂಪೆ ಹೊಸದಾಗಿ ಸೇರುವುದು.
ನಮ್ಮ ಕೈಯಲೆ ಇಹುದು ನಮ್ಮ "ಟೂರು ಟಿಕೆಟ್ಟು"
ಹುಡುಕುವೆವು ಪರರ ಕೈಗದನಿಟ್ಟು.
***
ಬಹುದೂರ ಎಲ್ಲೋರದಲ್ಲಿರುವ ಕೈಲಾಸ
ಕೈಬೀಸಿ ಕರೆವುದೇಕೆ?
ಗುಹೆಯ ಗೋಡೆಯಲಿ ಮೂಡಿರುವ ಪದ್ಮಪಾಣಿಗು
ನಮಗು ನಂಟುತನವೇಕೆ?
ಗಿರಿಯನೆತ್ತಿಯ ಮೆಟ್ಟಿ ನಿಂತಿರುವ ಗೊಮ್ಮಟಗೆ
ತಲೆಬಾಗಿ ಮಣಿವುದೇಕೆ?
"ಬೆಟ್ಟದ ನೆಲ್ಲಿಯಕಾಯಿ, ಸಮುದ್ರದೊಳಗಣ ಉಪ್ಪು
ಎತ್ತಣಿಂದೆತ್ತ ಸಂಬಂಧವಯ್ಯ?"
ಇಲ್ಲಿಹುದು ಸಂಬಂಧ.
ಬಿಗಿದಿಹುದು ಯಾವುದೋ ಕಾಣಲಾಗದ ಬಂಧ,
ಸ್ವಚ್ಛಂದ ಛಂದ.
ಎಲ್ಲಿಂದಲೋ ತಂದು ಎಲ್ಲಿಗೋ ಎಸೆಯುವುದು
ಯಾರನ್ನು ಯಾರೊಡನೆ ಸೇರಿಸುವುದೋ!
ಕಟ್ಟಿ ನೋಡುವುದಿಲ್ಲಿ, ಮುರಿದು ಮುಕ್ಕುವುದಲ್ಲಿ,
ಕೆರಳಿರುವ ಆಸೆಯನು ಕೆಣಕಿ ಬೆಳೆಸುವುದು,
ನಮ್ಮರಿವಿನರಮನೆಗೆ ಅತಿಥಿಗಳು ಕೆಲವು ;
ಅರಮನೆಯ ಗೋಪುರಕು ಕಾಣದಿಹ
ರೆಕ್ಕೆಗಳು ಹಲವು.
ನಮ್ಮ ತಿಳಿವಿಗೆ ಬರುವ ಭಾವ ಒಂದು
ತಿಳಿವಿನಾಚೆಗೆ ನಿಂತ ಭಾವಗಳು ನೂರಒಂದು.
***
ಭಾವಗಂಗೋತ್ರಿಯಲಿ ಮೀನಾಗಿ ಬದುಕುತಿಹ
ಈ ನಿಲುವು, ಕೊನೆಯ ನಿಲ್ದಾಣವಲ್ಲ.
ಪಯಣದಾರಂಭವಿದು. ಈಗಲೇ
ಸರಕುಗಳ ನೋಡಿ ಬಿಡಿ, ಮುಂದೆ ಗಡಿಬಿಡಿ ಬೇಡ.
"ಗೈಡೊ"ಬ್ಬ ಜೊತೆಗಿದ್ದರೊಳಿತು; ಹೊರಗಿನವನಲ್ಲ,
ಎಲ್ಲವನು ಬಲ್ಲವನು, ಒಳಗಿನವನು;
ಆಗಾಗ ಎಚ್ಚರಿಕೆ ನೀಡುವನು.
ಸಿದ್ಧತೆಯು ಮುಗಿಯಿತೇ?
ಯಾತ್ರೆ ಹೊರಡಿರಿ ಇನ್ನು,
"ನೀವು ನಡೆದುದೆ ಮಾರ್ಗ, ನೀವು ನುಡಿದುದೆ ಮಂತ್ರ
ನೀವು ಅಡಿಯಿಟ್ಟ ಧರೆ, ಅದೆ ಅವಿಮುಕ್ತ ಕ್ಷೇತ್ರ,
-ಆಗುವಂದ ಅರಿತು ಯಾತ್ರೆಯನು ಕೈಗೊಳ್ಳಿ
ಗಂಗೋತ್ರಿಯಲಿ ಮಿಂದು, ಗಂಗಾಮೃತವ ಕೊಂಡು
ಗಂಗೆಯಂತೆಯೆ ಹರಿದು
ಹಚ್ಚಹಸುರಾಗಿಸಿ ನಾಡುಗಳನು ;
ಜೀವನಾಡಿಗಳನು.
***
('ಸುವರ್ಣ ಸಂಪುಟ'ಕೃತಿಯಿಂದ ಆಯ್ದ ಕವನ)