'ಸುವರ್ಣ ಸಂಪುಟ' (ಭಾಗ ೭೫) - ಶಂಕರ ಮೊಕಾಶಿ ಪುಣೇಕರ

'ಸುವರ್ಣ ಸಂಪುಟ' (ಭಾಗ ೭೫) - ಶಂಕರ ಮೊಕಾಶಿ ಪುಣೇಕರ

ಶಂಕರ ಮೊಕಾಶಿ ಪುಣೇಕರ್ ಇವರು ಕನ್ನಡದ ಪ್ರಮುಖ ಕವಿ-ಕಾದಂಬರಿಕಾರರಲ್ಲಿ ಓರ್ವರು. ಇವರು ಹುಟ್ಟಿದ್ದು ಮೇ ೮, ೧೯೨೮ರಂದು ಧಾರವಾಡದಲ್ಲಿ. ಇವರ ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗಿನ ಶಿಕ್ಷಣ ಧಾರವಾಡದಲ್ಲೇ ನಡೆಯಿತು. ಬಿ ಎ ಪದವಿಯ ಬಳಿಕ ನಾಲ್ಕು ವರ್ಷಗಳ ಕಾಲ ವಿಜಯಪುರ, ಕಾರವಾರ, ಧಾರವಾಡಗಳಲ್ಲಿ ಪ್ರೌಢ ಶಾಲಾ ಶಿಕ್ಷಕರಾಗಿದ್ದರು. ನಂತರ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ ಎ ಸ್ನಾತಕೋತ್ತರ ಪದವಿಯನ್ನು ಪಡೆದು ಅಲ್ಲಿಯೇ ಪಿ ಹೆಚ್ ಡಿ ಪದವಿಯನ್ನೂ ಗಳಿಸಿದರು. ಇವರು ಯೇಟ್ಸ್ ಕವಿಯನ್ನು ಕುರಿತು ಬರೆದ ಮಹಾ ಪ್ರಬಂಧಕ್ಕೆ ಪಿ ಹೆಚ್ ಡಿ ನೀಡಲಾಗಿದೆ. ಇದೊಂದು ಅಪರೂಪದ ಪ್ರಬಂಧ ಎಂದು ಬಹಳಷ್ಟು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. ಈ ಕಾರಣದಿಂದ ಮೊಕಾಶಿಯವರನ್ನು 'ಯೇಟ್ಸ್ ಪಂಡಿತ' ಎಂದೇ ಅವರ ಆತ್ಮೀಯರು ಕರೆಯುತ್ತಿದ್ದರು.

ಶಂಕರ ಮೊಕಾಶಿಯವರು ಬೆಳಗಾವಿಯ ಆರ್ ಪಿ ಡಿ ಕಾಲೇಜು, ಲಿಂಗರಾಜ ಕಾಲೇಜು, ಮುಂಬಯಿಯ ಕೆ ಸಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ರೀಡರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈ ಸಮಯದಲ್ಲಿ ಖ್ಯಾತ ಸಂಗೀತ ವಿದ್ವಾಂಸ ಮಲ್ಲಿಕಾರ್ಜುನ ಮನ್ಸೂರ್ ಅವರ ಪರಿಚಯವಾಗಿ ಸಂಗೀತ ಅಭ್ಯಾಸ ಮಾಡಿದ್ದಾರೆ. ತಮ್ಮ ಸೇವಾವಧಿಯ ಕೊನೆಯ ದಿನಗಳಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೧೯೮೮ರಲ್ಲಿ ನಿವೃತ್ತಿಯನ್ನು ಹೊಂದಿದರು. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾಗಿಯೂ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ್ದಾರೆ. 

ಮೊಕಾಶಿಯವರು ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದ ಕಾರಣ ಆ ಎರಡೂ ಭಾಷೆಗಳಲ್ಲಿ ಸುಮಾರು ೩೫ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ಇವರ 'ಅವಧೇಶ್ವರಿ' ಎಂಬ ಕೃತಿ ಬಹಳ ಅಪರೂಪದ ಪುಸ್ತಕ. ಋಗ್ವೇದದ ಮಂತ್ರಗಳು ಹಾಗೂ ಹರಪ್ಪ ಮೊಹೆಂಜೋದಾರೋದ ಕೆಲವೇ ಮುದ್ರಿಕೆಗಳಲ್ಲಿ ದೊರೆಯುವ ಆಧಾರದ ಮೇಲೆ ಈ ಕೃತಿಯ ರಚನೆ ಮಾಡಿದ್ದಾರೆ. ಈ ಕೃತಿಗೆ ೧೯೮೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ದೊರೆತಿದೆ.

ಮೊಕಾಶಿಯವರು ಗಂಗವ್ವ ಗಂಗಾಮಾಯಿ, ಬೇಂದ್ರೆಯವರ ಕಾವ್ಯ ಮೀಮಾಂಸೆ, ಮಾಯಿಯ ಮೂರು ಮುಖಗಳು, ನಟ ನಾರಾಯಣಿ, ಸಾಹಿತ್ಯ ಮತ್ತು ಅಭಿರುಚಿ, ಡೆರಿಕ್ ಡಿಸೋಜಾ ಮತ್ತು ಇತರ ಕಥೆಗಳು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ವಿಪರ್ಯಾಸದ ವಿನೋದ ಹಾಗೂ ಶ್ರೀ ಸಂಗೀತದ ನಾಟ್ಯ ನಂದಿ ಇವರ ನಾಟಕಗಳು.

ಕಾಳಿದಾಸನ 'ಋತು ಸಂಹಾರ' ವನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ. ಕುವೆಂಪು ಕುರಿತು 'ಹಮ್ಮಿಂಗ್ ಬರ್ಡ್' ಎಂಬ ಕೃತಿಯನ್ನು ರಚಿಸಿದ್ದಾರೆ. 'ರಾಮಾಯಣ ದರ್ಶನಂ' ಕೃತಿಯನ್ನು ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಹಲವಾರು ವರ್ಷಗಳ ಕಾಲ ಸಂಗೀತ ವಿಮರ್ಶೆಯನ್ನು ಮಾಡಿದ್ದಾರೆ. ಮೊಕಾಶಿಯವರು ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜ್ಞಾನಪೀಠದ ಕನ್ನಡ ಸಲಹಾ ಸಮಿತಿಯ ಸದಸ್ಯರೂ ಆಗಿದ್ದರು. ಮೊಕಾಶಿಯವರು ಆಗಸ್ಟ್ ೧೧, ೨೦೦೪ರಲ್ಲಿ ನಮ್ಮನ್ನು ಅಗಲಿದ್ದಾರೆ. 

'ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಮೂರು ಕವನಗಳು ಪ್ರಕಟವಾಗಿವೆ. Democracy ಯ ಜನನ, ಮಾಯಿಯ ಮೂರು ಮುಖಗಳು, ಸಿದ್ಧಾ !. ಇವುಗಳಲ್ಲಿ ಸಿದ್ಧಾ ಎಂಬ ಕವನ ತುಂಬಾ ಸುದೀರ್ಘವಾಗಿದೆ. ಮೊಕಾಶಿಯವರ ಒಂದು ಕವನ ಇಲ್ಲಿದೆ. ಓದಿ, ಪ್ರತಿಕ್ರಿಯಿಸಿ…

ಮಾಯಿಯ ಮೂರು ಮುಖಗಳು (ನಾಲ್ಕನೇ ಮುಖವನ್ನು ಕಂಡಿಲ್ಲ)

ಮಾಯಿ ! ಮಹಾ ಮಾಯಿ !

ಮೂರು ವಿಧದಿಂದ ನೀನೆಮ್ಮ ತಾಯಿ !

(ಸಾಕು ತಾಯಿ ; ದತ್ತ ತಾಯಿ ; ಹೆತ್ತ ತಾಯಿ)

ಮೊಟ್ಟ ಮೊದಲಿಗೆ ಬರುವಿ ಸಾಕು ತಾಯಾಗಿ

ಬೆಳೆಯುತ್ತ ಬಳಸುವಿಯೊ ಬಾಳ, ಹಾಯಾಗಿ, 

ಕರುಳಿಗೊಂದು ಹೊಸ ಕರುಳ ಪ್ರಾರಂಬಿ

ಇಳಿ ಬಿಟ್ಟು ನೆಲವ ನಿನ್ನದೆ ಮಾಡಿಕೊಂಬಿ,

ಮುಟ್ಟಿದರೆ ಮಾಸುವಾ ಸುಳಿಗೆಂಪು ಕಂಬಿ

ಒಂದೊಂದು ಎತ್ತಿ ಹಿಡಿದಿವೆ ಸೊಟ್ಟ ರೆಂಬಿ

ನಿನ್ನ ಅಚ್ಛಿಯ ಕೈಯ ತುತ್ತನುಂಡವರು

ತಮ್ಮ ಮುಂಗೈಬಲವ ಕಳೆದು ಕೊಂಡಿಹರು

ಕಣ್ಣು ಬೊಂಬೆಯೆ ಆಗಿ ಕುರುಡು ಗೊಳಿಸುವೆಯಾ?

ನೆರಳು ನೀಡುವ ಸಸಿಯ ಬರಡುಗೊಳಿಸುವೆಯಾ?

 

ಇನ್ನೊಮ್ಮೆ ಬರುವಿ ನೀ ದತ್ತಕಾಯಾಗಿ

ಕರ್ತವ್ಯಗಳ ತೂಗುಹಲಗೆಗಳನೇ ತೂಗಿ,

ಆಕಾಂಕ್ಷೆ ಅಭಿಮಾನ ಕರ್ತವ್ಯ ಕಾಯಾಸ

ಆದರ್ಶ ಆವೇಶ ಆಕ್ರೋಶ ಅಪಹಾಸ 

ಚಾಣಕ್ಯ ಚಂದ್ರಗುಪ್ತರ ಜತೆಯ ರೀತಿ.

ವಿದುಲೆಯಂಥ ಕಠೋರ ಪುತ್ರ ಪ್ರೀತಿ,

ಮಾತುಮಾತಿಗೂ ಈರ್ಷೆ, ಆಶೆ, ಕೆಚ್ಚು 

ಕೊಟ್ಟ ಸಾಲಕು ಕೇಳ್ವ ಬಡ್ಡಿಯೋ ಹೆಚ್ಚು.

ಕುಳಿತವನ ಕಿವಿ ಹಿಂಡಿ ಮೇಲಕೆಚ್ಚರಿಸಿ 

ಲೆಕ್ಕ ಕೇಳುವೆ ಪೈಗೆ ಪೈಯ ಸವಕರಿಸಿ.

'ನುಗ್ಗಿ ನಡೆ' ಯೆಂಬ ನಿನ್ನೀ ಪಾಂಚಜನ್ಯ

ಕೇಳಿ ನಡೆಯಲು ತ್ರಾಣ ಉಳಿದವನೆ ಧನ್ಯ !

ಕೊನೆಗಾಲ ಬರುವಿ ನೀ ಹೆತ್ತ ತಾಯಾಗಿ

ಕನಸ ಹಿಂದಿನ ಕನಸ ಬೊಗಳುನಾಯಾಗಿ,

ಮುಗಿಲ ಮೂವಟ್ಟೆಗಳ ಮೂದಲಿಸುವಂತೆ

ನಡೆದಿರಲು ಹೊಕ್ಕುಳಲಿ ವ್ಯಾಕುಲತೆ ಚಿಂತೆ ;

ಮರಣವನು ಗೆದ್ದವರು ರಣದಿ ಓಡಿದರು,

ಯದ್ವಾಜಯೇಮ ಯದಿ ವಾನೋ ಚಯೇ ಯು

ಎಂದು ಮಿಡುಕಿತ್ತು ನರ, ಬಿಗಿದಿರಲು ಸ್ನಾಯು.

ರಟ್ಟೆಯೊಳಗಿತ್ತು, ಕಿಪ್ಪೊಟ್ಟೆಯೊಳಗಿಲ್ಲ.

ಬಿಲ್ಲಿನೊಳಗಿದ್ದ ಎದೆ ರಟ್ಟೆಯೊಳಗಿಲ್ಲ.

ಹೇಡಿ ಮಾಂಸವು ಮನದ ಮಾತ ಜರೆದಿತ್ತು.

ಮುಗಿಲಿಗಾನಿಸಿದ ನಿಚ್ಚಣಿಕೆ ಮುರಿದಿತ್ತು.

ಒಡಲು ಒಡ್ಡುವ ಬಲೆಯ ಕಣ್ಣಿ ನೋಡೀತೆ?

ಬಸಿರು ಬರೆದಿರುವ ಗೆರೆ ಬಾಳು ದಾಟೀತೆ?

ಈ ಹಾಡು ತಿರುಳನ್ನು ಕುರಿತು ಅರಿತವನು

ತಾಯ ಇನ್ನೊಂದು ಮೊಗವನ್ನು ಅರಸುವನು.

('ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)