'ಸುವರ್ಣ ಸಂಪುಟ' (ಭಾಗ ೮೮) - ಯರ್ಮುಂಜ ರಾಮಚಂದ್ರ

'ಸುವರ್ಣ ಸಂಪುಟ' (ಭಾಗ ೮೮) - ಯರ್ಮುಂಜ ರಾಮಚಂದ್ರ

ಅತ್ಯಂತ ಪ್ರತಿಭಾಶಾಲಿಯಾಗಿದ್ದರೂ ಅಲ್ಪಾಯುಷಿಯಾಗಿದ್ದ ಯರ್ಮುಂಜ ರಾಮಚಂದ್ರ ಎಂಬ ಕವಿಯ ಕವನವನ್ನು ನಾವು ಈ ವಾರ ಆಯ್ದುಕೊಂಡಿದ್ದೇವೆ. ರಾಮಚಂದ್ರರು ಬದುಕಿದ್ದು ಕೇವಲ ೨೨ ವರ್ಷಗಳು ಮಾತ್ರ. ಆದರೆ ಅವರ ಸಾಧನೆ ಮಾತ್ರ ಎಂದೂ ಮರೆಯಲಾರದಂಥದ್ದು. ಇವರು ಹುಟ್ಟಿದ್ದು ಫೆಬ್ರವರು ೨, ೧೯೩೩ರಲ್ಲಿ ಯರ್ಮುಂಜ ಎಂಬ ಪುಟ್ಟ ಗ್ರಾಮದಲ್ಲಿ. ರಾಮಚಂದ್ರರ ತಂದೆ ಜನಾರ್ಧನ ಜೋಯಿಸರು ಹಾಗೂ ತಾಯಿ ದೇವಕಿ ಅಮ್ಮ. 

ರಾಮಚಂದ್ರರು ತಮ್ಮ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸವನ್ನು ಕಬಕದ ಕೊವೆತ್ತಿಲ ಗ್ರಾಮದಲ್ಲಿ ಪೂರೈಸಿ, ಮಾಧ್ಯಮಿಕ ಶಿಕ್ಷಣವನ್ನು ಪುತ್ತೂರಿನ ಬೋರ್ಡ್ ಹೈಸ್ಕೂಲ್ ಇಲ್ಲಿ ಮುಗಿಸಿದರು. ಸಾಹಿತ್ಯದತ್ತ ಒಲವು ಬೆಳೆಸಿಕೊಂಡ ಇವರು ತಮ್ಮ ಹಸ್ತಾಕ್ಷರದಲ್ಲಿ 'ಬಾಲವಿಕಟ' ಎಂಬ ಮಾಸ ಪತ್ರಿಕೆಯೊಂದನ್ನು ಪ್ರಾರಂಭಿಸಿದರು. ೧೯೪೮ರಲ್ಲಿ ಇವರು 'ಬಾಪೂಜಿಗೆ ಬಾಷ್ಪಾಂಜಲಿ' ಎಂಬ ಚೊಚ್ಚಲ ಕವನವನ್ನು ಬರೆದರು. ಇವರ ಮೊದಲ ಕಥೆ 'ಆರಿದ ಹಂಬಲ'. ರಾಮಚಂದ್ರರು ಬರೆದದ್ದು ಕಡಿಮೆಯೇ ಅದರೂ ಅವುಗಳಲ್ಲಿ ಅಡಗಿದ ಸಾರ ಮಾತ್ರ ಅಪಾರ.

ಇವರ ಮೊದಲ ಕಥೆ 'ಅರುಣ' ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಎರಡನೇ ಕಥೆಯಾದ 'ಸ್ನೇಹಿತರು' ಬೆಟಗೇರಿ ಕೃಷ್ಣ ಶರ್ಮ ಇವರ 'ಜಯಂತಿ' ಪತ್ರಿಕೆಯಲ್ಲಿ ಪ್ರಕಟವಾಗಿ ಪ್ರಥಮ ಬಹುಮಾನ ಪಡೆಯಿತು. ಮೆಟ್ರಿಕ್ ಪರೀಕ್ಷೆಯನ್ನು ಪಾಸು ಮಾಡುವ ಹೊತ್ತಿಗೆ 'ಪಾಂಚಜನ್ಯ' ಹಸ್ತಪತ್ರಿಕೆಯನ್ನು ಪ್ರಾರಂಭಿಸಿದರು. ಇವರ ಪತ್ರಿಕೆಯಲ್ಲಿ ಚಾಣಾಕ್ಷನ ಬಾಣಗಳು, ವಿಚಿತ್ರ ವಿಭಾಗ, ಪ್ರಶ್ನೋತ್ತರ ಮಾಲಿಕೆ, ಲೆಕ್ಕದ ಬುಕ್ಕು, ಅಣಕವಾಡು, ಗತಕಾಲದ ಟಗರುಗಳು, ವಿಡಂಬನೆ ಮುಂತಾದ ಸ್ಥಿರ ಶೀರ್ಷಿಕೆಗಳು ಮನಮುಟ್ಟುವಂತಿರುತ್ತಿದ್ದವು. 

ಪಾಂಚಜನ್ಯದ ವಿಶೇಷಾಂಕಕ್ಕೆ ಖ್ಯಾತ ಸಾಹಿತಿಗಳಾದ ಗೋವಿಂದ ಪೈ, ಶಿವರಾಮ ಕಾರಂತರು, ಸೇಡಿಯಾಪು ಕೃಷ್ಣ ಭಟ್ಟರು, ಗೋಪಾಲಕೃಷ್ಣ ಅಡಿಗರು ಮುಂತಾದವರು ಬರಹಗಳನ್ನು ಬರೆಯುತ್ತಿದ್ದರು. ರಾಮಚಂದ್ರರು ಜೀವನೋಪಾಯಕ್ಕಾಗಿ ಕೆಲಕಾಲ ಅಂಚೆ ಕಚೇರಿಯಲ್ಲಿ ಹಾಗೂ ಸ್ವಲ್ಪ ಸಮಯ ಶಾಲೆಯಲ್ಲಿ ಉಪಾಧ್ಯಾಯರಾಗಿ ಕಾರ್ಯನಿರ್ವಹಿಸಿದ್ದರು. ತಾಲೂಕು ಕಚೇರಿಯಲ್ಲಿ ಟೈಪಿಸ್ಟ್ ಆಗಿ ದುಡಿದರು. ನಂತರ 'ನವಭಾರತ' ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. 

ರಾಮಚಂದ್ರರಿಗೆ ನಿರಂತರವಾಗಿ ಕಾಡುತ್ತಿದ್ದ ಉದರ ಬೇನೆಯು ಅವರನ್ನು ಬಹಳವಾಗಿ ಹೈರಾಣಾಗಿಸಿತು. ಮಂಗಳೂರಿಗೆ ಬಂದು ಕಡೆಂಗೋಡ್ಲು ಶಂಕರಭಟ್ಟರ 'ರಾಷ್ಟ್ರಮತ' ಪತ್ರಿಕೆಯಲ್ಲಿ ಸಹ ಸಂಪಾದಕರಾಗಿ ಉದ್ಯೋಗ ಮಾಡತೊಡಗಿದರು. ಬಿಡುವಿಲ್ಲದ ದುಡಿತ, ಅದರ ನಡುವೆ ನಿರಂತರ ಕಾಡುತ್ತಿದ್ದ ಅನಾರೋಗ್ಯದಿಂದಾಗಿ ರಾಮಚಂದ್ರರು ಹೈರಾಣಾದರು. ಕೆಲಸವನ್ನು ತ್ಯಜಿಸಿ ಮರಳಿ ಮನೆಗೆ ಮರಳಿದ ಇವರು, ತಮ್ಮ ಅನಾರೋಗ್ಯದ ನಡುವೆಯೂ 'ಚಿಕಿತ್ಸೆಯ ಹುಚ್ಚು ಮತ್ತು ಇತರ ಕಥೆಗಳು' ಎಂಬ ಕಥಾ ಸಂಕಲನವನ್ನು ಪ್ರಕಟಿಸಿದರು. ಕರುಳಿನ ನಿಷ್ಕ್ರಿಯತೆಯಿಂದಾಗಿ ಇವರ ವ್ಯಾಧಿ ಉಲ್ಭಣವಾಯಿತು. ಜನವರಿ ೧೦, ೧೯೫೫ರಲ್ಲಿ ತಮ್ಮ ೨೨ನೇ ವಯಸ್ಸಿನಲ್ಲಿ ಪ್ರತಿಭಾವಂತ ಸಾಹಿತಿಯೊಬ್ಬನ ನಿಧನವಾಯಿತು. ಇವರ ಮರಣದ ನಂತರ 'ವಿದಾಯ' ಎಂಬ ಕವನ ಸಂಕಲನ ಪ್ರಕಟವಾಯಿತು. ತಮ್ಮ ಹದಿನೈದನೇ ವಯಸ್ಸಿನಲ್ಲೇ ಸಾಹಿತ್ಯ ಕೃಷಿ ಆರಂಭಿಸಿದ ರಾಮಚಂದ್ರರು ವಯಸ್ಸಿಗೇ ಮೀರಿದ ಸಾಧನೆಯನ್ನು ಮಾಡಿದ್ದರು. ದೇಶಭಕ್ತಿಯ ಕಿಚ್ಚನ್ನು ಬಡಿದೆಬ್ಬಿಸುವ ಕವಿತೆಗಳನ್ನು ರಚಿಸಿದ್ದರು. ಆದರೆ ಹೊತ್ತಿ ಉರಿದು ಬೆಳಗುವ ಮೊದಲೇ ಯರ್ಮುಂಜ ರಾಮಚಂದ್ರರ ಬದುಕು ಬತ್ತಿ ಹೋದದ್ದು ದುರಂತವೇ ಸರಿ.

ಯರ್ಮುಂಜ ರಾಮಚಂದ್ರ ಇವರ ಒಂದು ಕವನ 'ಸುವರ್ಣ ಸಂಪುಟ'ದಲ್ಲಿ ಪ್ರಕಟವಾಗಿದೆ. ಅದನ್ನು ಇಲ್ಲಿ ಪ್ರಕಟಿಸಲಾಗಿದೆ.

ಯಾರಿಲ್ಲಿಗೆ ಬಂದರು ಕಳೆದಿರುಳು

ಯಾರಿಲ್ಲಿಗೆ ಬಂದರು ಕಳೆದಿರುಳು

ಏ ಗಾಳಿ,

 

ಆ ಕಥೆಯನೊರೆದು ಮುಂದಕೆ ತೆರಳು

ನೆನೆದು ನೆನೆದು ತನು ಪುಳಕಗೊಳ್ಳುತಿದೆ

ನುಡಿವೆನೆ ದನಿ ನಡಗುತಿದೆ.

ಸ್ಮೃತಿ ವಿಸ್ಮೃತಿಗಳ ಕಂಬನಿ ಮಾಲೆ

ಎಲ್ಲೆಲ್ಲೂ ತೂಗುತಿದೆ

ಕಳೆದಿರುಳಿನ ಬೆಳದಿಂಗಳ ಮರೆಯಲಿ

ಏನೂ ಅರಿಯದ ಮುಗ್ದೆಯ ಕಿವಿಯಲಿ

ಯಾರೇನನು ಪಿಸು ನುಡಿದರು ಹೇಳು

ಏ ಗಾಳಿ,

 

ಆ ಕಥೆಯನೊರೆದು ಮುಂದಕೆ ತೆರಳು.

ನಸುಕಿನ ಬೆಳಕಿನೊಳೆಂಥ ಬಳಲಿಕೆ

ಮೂಡಲ ಹಣೆ ಕಡುಗೆಂಪು !

ಮರ ಮರದೆಡೆಯಲಿ ಕೂಕು ಆಟ

ಭೂಮಿಗೆ ಮೈಮೆರೆವು

ಅಲ್ಲಿ ಇಲ್ಲಿ ಗಿಡ ಬಳ್ಳಿ ಮರಗಳು

ಯಾವ ನೆನಪಿನಲೊ ಮೈಮರೆತಿಹವು

ಹೃದಯದೊಳೇನನು ಎರೆದರು ಕೊರೆದರು ?

ಏ ಗಾಳಿ,

 

ಆ ಕಥೆಯನೊರೆದು ಮುಂದಕೆ ತೆರಳು.

ಮೈಯೆಲ್ಲಾ ಗಡಗುಟ್ಟುತಲಿದೆಯೇ

ಬೆದರಿಸಿದವರಾರು?

ಮುಖ ತೊಯ್ದಿದೆ, ಕಣ್ಣೀರಿನ ಹನಿಯನು

ಹರಿಯಿಸಿದವರಾರು?

ಯಾರೂ ಕಾಣದ ಆ ಮರೆಯೊಳಗೆ

ಕುಲುಕುಲು ಎನುತಿದೆ ಮೆಲುನಗೆಯ ನೊರೆ

ನೆನ್ನೆಯ ಹಾಡಿನ ದನಿಯಿನ್ನೂ ಗುಣು-

ಗುಣಿಸುವ ಮಾಯೆಯಿದೆಂಥದು ಹೇಳು 

ಏ ಗಾಳಿ,

ಆ ಕಥೆಯನೊರೆದು ಮುಂದಕೆ ತೆರಳು.

('ಸುವರ್ಣ ಸಂಪುಟ' ಕೃತಿಯಿಂದ ಸಂಗ್ರಹಿತ)