ಸೂರ್ಯ ದೇವನೆ ಬಾರೋ ನಗುತ

ಸೂರ್ಯ ದೇವನೆ ಬಾರೋ ನಗುತ

ಕವನ

ರವಿಯೆಲ್ಲಿ ಮರೆಯಾದೆ

ಕವಿಮನಕೆ ಕಾಣಿಸದೆ

ಅವನಿಯ ಕಾಡಿಸದೆ

ಗವಿಯೊಳಗೆ ಅಡಗಿದೆ

 

ಬಾನಿಗದು ಶೋಭೆ

ಹೊಂಬೆಳಕಿನ ಪ್ರಭೆ 

ಘನಮಹಿಮ ಏನೆಂಬೆ

ಹಸಿರ ಚೆಲ್ಲಿದ ಕೊಂಬೆ

 

ಮಳೆರಾಯನಾರ್ಭಟವೋ

ಮಿಂಚು ಗುಡುಗಿನಬ್ಬರವೋ

ಸಿಡಿಲು ಗಾಳಿ ಧೂಳೆಬ್ಬಿಸಿತೋ

ಕಾರ್ಮೋಡ ಮುಸುಕಿತೋ

 

ಬೆಳ್ಮುಗಿಲ ರಾಶಿಯಲಿ

ನೀ ಬರಲು ಖುಷಿಯಲಿ

ತೇಲಾಡುವೆ ಬಾನ ತೊಟ್ಟಿಲಲಿ

ಜಗವೆಲ್ಲ ಸಂತಸದಿ ನಲಿಯಲಿ

 

ಕಣ್ಣಿಗೆ ಗೋಚರವಾಗದೆ

ದೂರ ದೂರಕೆ ಸರಿಯದೆ

ಜೀವರಾಶಿಗಳಿಗೆ ಚೇತನವಾಗದೆ

ಸಹಕರಿಸು ನಿರ್ಲಿಪ್ತನಾಗದೆ

 

ಮನುಜರ ಸ್ವಾರ್ಥಕೆ

ಬಲಿಪಶುವಾದೆಯಾ

ಒಳಗೊಳಗೆ ನೊಂದು ಬೆಂದೆಯಾ

ಚಿಂತೆ ಚಿತೆಗೆ ಅರಿತಿರುವೆಯಾ

 

ದು:ಖಿಸದಿರು ದಿನಕರನೆ

ಹಸಿರು ಗಿಡ ನೆಡುವೆವು

ಕೊಳಕು ಕೊಚ್ಚೆಯ ಮಾಡೆವು

ಸ್ವಚ್ಛತೆಯ ಪರಿಸರ ನಿರ್ಮಿಪೆವು

 

ಸಹಸ್ರ ಕಿರಣಂಗಳ ಹಾಯಿಸುತ

ಜೀವಜಂತುಗಳ ಪೊರೆಯುತ

ಮರೆಯಿಂದ ಹೊರಗೆ ಇಣುಕುತ

ಸೂರ್ಯದೇವನೆ ಬಾರೋ ನಗುತ

 

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್