ಸೇವೆ........ ಒಂದಷ್ಟು ಹರಟೆ
ಗಾಂಧಿಜಿಯವರಿಗೆ ಸರ್ಕಾರದಲ್ಲಿ ಯಾವ ಉನ್ನತ ಅಧಿಕಾರವಿರಲಿಲ್ಲ. ಹೇಳಿಕೊಳ್ಳುವಂತಹ ಹಣ, ಆಸ್ತಿ ಏನೂ ಇರಲಿಲ್ಲ. ಒಳ್ಳೆಯ ಸೌಂದರ್ಯ ಅಥವಾ ಆಕರ್ಷಣೆ ಇರಲಿಲ್ಲ. ತನ್ನದೇ ಆದ ಗುಂಪಾಗಲಿ, ಸೈನ್ಯವಾಗಲಿ ಇದ್ದು ಅದಕ್ಕೆ ನಾಯಕರು ಇವರಾಗಿರಲಿಲ್ಲ. ಆದರೂ, ಗಾಂಧೀಜಿಯವರಿಗೆ ಲಕ್ಷಾಂತರ ಜನರ ಬೆಂಬಲವಿತ್ತು. ಹಿಂಬಾಲಕರಿದ್ದರು, ಗಾಂಧಿಜಿಯವರು ಒಮ್ಮೆ ಹೇಳಿದರೆ ಸಾಕು, ಒಮ್ಮೆಲೇ ಮಾಡಲು ಮುನ್ನುಗ್ಗುತ್ತಿದ್ದರು. ಸೇವೆಗೆ ಸದಾ ಸಿದ್ದರಿರುತ್ತಿದ್ದರು. ಇದಕ್ಕೆ ಮುಖ್ಯ ಕಾರಣವೆಂದರೆ, ಗಾಂಧೀಜಿಯವರು ತಮ್ಮ ಜೀವನವನ್ನು ಸೇವೆಗೆ ಮುಡುಪಾಗಿ ಇಟ್ಟದ್ದು ಮತ್ತು ನಿಸ್ವಾರ್ಥ ಸೇವೆ ಮಾಡುತ್ತಿದ್ದದ್ದು.
ಸಾಮಾನ್ಯವಾಗಿ ನಾಯಕತ್ವ ಮತ್ತು ಅಧಿಕಾರವಿದ್ದಾಗ ಮಾತ್ರ ಸೇವೆ ಮಾಡಲು ಸಾಧ್ಯ ಎಂಬ ತಪ್ಪು ಕಲ್ಪನೆ ಹೆಚ್ಚಿನ ಜನರಲ್ಲಿದೆ. ವಾಸ್ತವದಲ್ಲಿ ಎಲ್ಲಿಯತನಕ ಅಧಿಕಾರಕ್ಕಾಗಿ ಹೋರಾಡುತ್ತಾರೋ ಅಲ್ಲಿಯತನಕ ನಾಯಕತ್ವ ಸಿಗಲಾರದು. ಶ್ರೀ ರಾಮಕೃಷ್ಣರು ಹೇಳುತ್ತಾರೆ " ಎಲ್ಲಿಯತನಕ ನೀನು ಕಷ್ಟದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿಯೋ ಅಲ್ಲಿಯತನಕ ನಿನಗೆ ಕಷ್ಟಗಳು ಒಂದಾದನಂತರ ಮತ್ತೊಂದರಂತೆ ಬಂದು ಎರಗುತ್ತಲೇ ಇರುತ್ತವೆ. ದೈಯವಾಗಿ ನಿಂತು ಎದುರಿಸಿದಾಗ ಕಷ್ಟಗಳು ಪಲಾಯನ ಮಾಡುತ್ತವೆ. ಆದ್ದರಿಂದ ಸುಖದ ಬೆನ್ನೇರಿ ಓಡಬೇಡ, ಕಷ್ಟಕ್ಕೆ ಬೆನ್ನು ತೋರಿಸಬೇಡ." ಇದೆ ರೀತಿ ಅಧಿಕಾರ ಕೂಡಾ . ಅಧಿಕಾರಕ್ಕಾಗಿ ಹಪಹಪಿಸಿದರೆ ನಾಯಕತ್ವದ ನೈಪುಣ್ಯತೆ ದೊರೆಯುವುದಿಲ್ಲ. ಸೇವೆಯನ್ನು ನಿಸ್ವಾರ್ಥ ಭಾವದಿಂದ, ಶ್ರದ್ಧೆಯಿಂದ ಮಾಡಲು ಪ್ರಾರಂಭ ಮಾಡಿದರೆ ಸಾಕು, ನಾಯಕತ್ವದ ಗುಣಗಳು ತನ್ನಷ್ಟಕ್ಕೆ ತಾನೇ ಮೈತುಂಬಿಕೊಳ್ಳುತ್ತದೆ. ಇದಕ್ಕೆ ನಮ್ಮ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳಿವೆ. ನಮ್ಮ ಇತಿಹಾಸ ಸಾಕಷ್ಟು ರಾಜ ಮಹಾರಾಜರ, ಸಾಧು ಸಂತರ, ಸಮಾಜ ಸೇವಾಸಕ್ತರ ಗಣನೀಯ ಸೇವೆಯನ್ನು ದಾಖಲು ಮಾಡಿದೆ. ಅವರು ಅಂದು ಮಾಡಿದ ಸೇವಾ ಕೆಲಸಗಳು ಇಂದಿಗೂ ಸಮಾಜದಲ್ಲಿ ಚಿರಸ್ಥಾಯಿಯಾಗಿ ನಿಂತಿದೆ. ಕಟ್ಟಡಗಳಿರಲಿ , ಸೇತುವೆ ಆಗಿರಲಿ, ಕಟ್ಟಿ ಬೆಳೆಸಿದ ವಿದ್ಯಾಸಂಸ್ತೆಗಳಾಗಿರಲಿ, ಗುಡಿ ಗೋಪುರಗಲಾಗಿರಲಿ, ದೇವಸ್ತಾನ, ಚರ್ಚು, ಮಸೀದಿಗಳೇ ಆಗಿರಲಿ ಇನ್ನ್ಯಾವುದೇ ಕೆಲಸವಿರಲಿ ಅದು ಅವರ ನಿಸ್ವಾರ್ಥ ಸೇವೆ ಯನ್ನು ತೋರಿಸುತ್ತಿವೆ.
ಆದರೆ, ಇಂದು ಸಮಾಜ ಸೇವೆಯ ಹೆಸರಿನಲ್ಲಿ ಆಗುತ್ತಿರುವ ಮೋಸ, ವಂಚನೆ ಇವು ಅಸಹ್ಯ ತರಿಸುತ್ತಿದೆ. ಸಮಾಜದ ಒಳಿತಿಗೆ ಕೆಲಸ ಮಾಡಬೇಕಾದವರು ಕೋಟಿಗಟ್ಟಲೆ ಲಂಚದ ಪ್ರಕರಣಗಳಲ್ಲಿ ಸಿಕ್ಕಿ ಒದ್ದಾಡುತ್ತಿದ್ದಾರೆ. ತಮ್ಮ ಮಾನ ಉಳಿಸಿಕೊಳ್ಳಲು ಇಲ್ಲದ ನಾಟಕ, ಶಕ್ತಿ ಪ್ರದರ್ಶನ ಮತ್ತು ದೇವರಿಗೂ ಆಮಿಷ ಒಡ್ಡುತ್ತಾ ಪೂಜೆ, ಹವನ ಹೊಮಾದಿಗಳು ನಡೆಯುತ್ತಿವೆ. 'ಸರ್ಕಾರಿ ಕೆಲಸ ದೇವರ ಕೆಲಸ' ಎಂಬುದು ಬೋರ್ಡುಗಲ್ಲಿ ಚನ್ನಾಗಿ ಕಾಣುತ್ತದೆ. ಜನನಾಯಕ ಎನಿಸಿಕೊಂಡವನು ಸಮಾಜ ಘಾತುಕ ಕೆಲಸದಲ್ಲಿ, ಕಳಂಕಿತ ಕೆಲಸಗಳಲ್ಲಿ ಭಾಗಿಯಾಗಿ ಸಮಾಜಕ್ಕೆ ಮಾರಕನಾಗಿದ್ದಾನೆ. ಇಂತಹ ನಾಯಕರು ಆಲಸಿಗಳಿಗೆ, ಸ್ವಾರ್ಥಿಗಳಿಗೆ ಮತ್ತು ಲಂಪಟರಿಗೆ ನಾಯಕನಾಗಿ ಬಿಂಬಿತವಾಗುತ್ತಿದ್ದಾರೆ . ಇವರಲ್ಲಿ ಸೇವಾ ಮನೋಭಾವವನ್ನು ಭೂತಗನ್ನಡಿ ಹಾಕಿ ಹುಡುಕ ಬೇಕಾಗಿದೆ .
ಸೇವೆಯ ಪದದ ಅರ್ಥವೇ ನಿಸ್ವಾರ್ಥವಾಗಿ , ಯಾರಿಂದ ಏನನ್ನು ಬಯಸದೆ ನಿರ್ವಂಚನೆಯಿಂದ, ನಿಷ್ಪಕ್ಷಪಾತವಾಗಿ ಇನ್ನೊಬ್ಬರ ಒಳಿತಿಗಾಗಿ ಮಾಡುವ ಕೆಲಸ. ಸೇವೆ ಎನ್ನುವುದು ಸಂಬಂಧಗಳಲ್ಲಿ ಬೆಸೆದುಕೊಂಡಿರುತ್ತದೆ . ಒಂದು ಇನ್ನೊಂದಕ್ಕೆ ಜೋಡಣೆಯಾಗಿರುತ್ತದೆ . ಚುನಾಯಿತ ಪ್ರತಿನಿಧಿಯು ಕ್ಷೇತ್ರದ ಮತದಾರನ ಜೊತೆ, ಶಿಕ್ಷಣ ಕ್ಷೇತ್ರದಲ್ಲಿ ಗುರು ಮತ್ತು ವಿದ್ಯಾರ್ಥಿಗಳ ಜೊತೆ, ಧರ್ಮದಲ್ಲಿ ಧರ್ಮಾಧಿಕಾರಿ (ಮಠದ ಅಧಿಪತಿಗಳು ) ಮತ್ತು ಭಕ್ತರುಗಳ ಜೊತೆ, ಕುಟುಂಬದಲ್ಲಿ ಗಂಡ ಹೆಂಡಿರ, ತಂದೆ ತಾಯಿ ಮಕ್ಕಳ, ಸೋದರ ಸೋದರಿಯರ, ಅಜ್ಜಿತಾತನ ಜೊತೆ, ಹೀಗೆ ಎಲ್ಲದರಲ್ಲೂ ಸಂಬಂಧಗಳು ಬೆರೆತಿದೆ. ಇಲ್ಲಿ ಸೇವೆಗೆ ನಾಯಕತ್ವವೇ ಬೇಕಾಗಿಲ್ಲ. ತನಗಿರುವ ವ್ಯಾಪ್ತಿಯಲ್ಲೇ ಬೇಕಾದಷ್ಟು ಸೇವೆ ಮಾಡಿ ತನ್ನ ಇರುವನ್ನ ಸಾರ್ಥಕ ಮಾಡಿಕೊಳ್ಳಬಹುದು. ಸೇವೆಯನ್ನು ಕರ್ತವ್ಯ ಎಂದೂ ಹೇಳುತ್ತಾರೆ. ಆದರೆ ಈ ಕರ್ತವ್ಯವನ್ನು ಸೇವೆಯಾಗಿ ನಿಸ್ವಾರ್ಥವಾಗಿ ಮಾಡಿದಾಗ, ಅದು ದೈವತ್ವದ ಮಟ್ಟಕ್ಕೆ ಏರುತ್ತದೆ. ಇದೆ ನಿಜವಾದ ಪೂಜೆಯಾಗುತ್ತದೆ. ಭಗವಂತನನ್ನು ಕಾಣಲು ಬೇರೆ ಇನ್ಯಾವ ಮಾರ್ಗಕ್ಕಾಗಿ ಹುದುಕಾಡಬೇಕಾಗಿಲ್ಲ .
ನೀವೇನು ಹೇಳುತ್ತೀರಿ ?