ಸೈನಿಕರೆಂಬ ಅನಿವಾರ್ಯ ಬಲಿಪಶುಗಳು…!

ಸೈನಿಕರೆಂಬ ಅನಿವಾರ್ಯ ಬಲಿಪಶುಗಳು…!

ಹೌದು, ಇಡೀ ವಿಶ್ವದಲ್ಲಿ ಸುಮಾರು 200 ದೇಶಗಳಿವೆ ಮತ್ತು ಸುಮಾರು 700 ಕೋಟಿಗೂ ಹೆಚ್ಚು ಜನಸಂಖ್ಯೆಯಿದೆ. ನನ್ನ ಒಂದು ಸಣ್ಣ ಅಂದಾಜಿನ ಪ್ರಕಾರ ಸುಮಾರು 6-7 ಕೋಟಿಗೂ ಹೆಚ್ಚು ಸೈನಿಕರಿದ್ದಾರೆ. ಮುಖ್ಯವಾಗಿ ತಮ್ಮ ದೇಶವನ್ನು ವಿದೇಶಿ ಆಕ್ರಮಣಕಾರರಿಂದ ರಕ್ಷಿಸಲು, ದೇಶದ ಆಂತರಿಕ ದುಷ್ಟ ಶಕ್ತಿಗಳನ್ನು ಅನಿವಾರ್ಯವಾದಾಗ ತಡೆಯಲು, ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ನಾಗರಿಕರಿಗೆ ಸಹಾಯ ಮಾಡಲು ಹೀಗೆ ಅತ್ಯಂತ ಉಪಯುಕ್ತ ಮತ್ತು ಮಹತ್ವದ ಸಂದರ್ಭದಲ್ಲಿ ಬಹುದೊಡ್ಡ ಕೆಲಸ ಮಾಡುವುದು ಸೈನಿಕ ವ್ಯವಸ್ಥೆಯ ಕಾಯಕ.

ಸೈನಿಕರ ದೈಹಿಕ ಶಕ್ತಿ, ಆಕಾರ, ಶಿಸ್ತು, ಶ್ರಮ, ಕ್ರಮಬದ್ಧತೆ, ಕರ್ತವ್ಯ ನಿಷ್ಠೆ, ದೇಶಭಕ್ತಿ ನೋಡುವುದೇ ಒಂದು ಸುಂದರ ಅನುಭವ. ಆದರೆ ಅವರ ಇಡೀ ವೃತ್ತಿ ಸದಾ ತಮ್ಮ ಸಾವಿನ ನೆರಳಿನಲ್ಲಿ ಅಥವಾ ಇತರರನ್ನು ಕೊಲ್ಲುವ ಮನಸ್ಥಿತಿಯಲ್ಲಿಯೇ ಇರುತ್ತದೆ. ಯಾವುದೇ ಭಾವನೆ, ತೀರ್ಮಾನ, ಮಾನವೀಯತೆ, ಸರಿ ತಪ್ಪು ಯಾವುದಾದರ ಸ್ವಾತಂತ್ರ್ಯವೂ ಇಲ್ಲದೇ ಕೇವಲ ಸಾವಿನ ಆಟದಲ್ಲಿ ಆದೇಶ ಪಾಲಿಸುವುದು ಮಾತ್ರ ಅವರ ಕೆಲಸವಾಗಿರುತ್ತದೆ.

ಇತ್ತೀಚಿನ ಕಾಶ್ಮೀರ ಲಡಾಖ್ ಪ್ರವಾಸದಲ್ಲಿ ಪಾಕಿಸ್ತಾನ ಮತ್ತು ಚೀನಾದ ಗಡಿ ಭಾಗಗಳಲ್ಲಿ ಭಾರತ ನಿಯೋಜಿಸಿರುವ ಸೈನಿಕ ಶಿಬಿರಗಳು, ಬಂಕರ್ ಗಳು, ಸದಾ ಶಸ್ತ್ರಸಜ್ಜಿತ ಯೋಧರು, ಆ ಯೋಧರ ಆರೋಗ್ಯಪೂರಿತ ಮತ್ತು ಬಲಿಷ್ಠ ದೇಹ ದಾಡ್ಯತೆಯನ್ನು ನೋಡಿದಾಗ ಅವರ ಸಾವಿನ ಬಗ್ಗೆ ಆತಂಕ ಮತ್ತು ಅವರ ಕೊಲ್ಲುವ ಮನಸ್ಥಿತಿಯ ಬಗ್ಗೆ ಬೇಸರ ಎರಡೂ ಉಂಟಾದವು.

ಎಲ್ಲಾ ದೇಶಗಳ ಸೈನಿಕರು ಬಹುತೇಕ ಹೊಟ್ಟೆ ಪಾಡಿನ ಉದ್ಯೋಗಿಗಳು. ಆಯಾ ದೇಶದ ಜನರ ಪಾಲಿಗೆ ಹೀರೋಗಳು ಮತ್ತು ಶತ್ರು ರಾಷ್ಟ್ರಗಳ ಪಾಲಿಗೆ ವಿಲನ್ ಗಳು. ಯಾರಾದರೂ ನಮ್ಮನ್ನು ಆಕ್ರಮಿಸಬಹುದು ಎಂದು ಒಂದು ಅನುಮಾನದ ಕಾರಣಕ್ಕಾಗಿ ಇಡೀ ವಿಶ್ವ ತನ್ನ ಉತ್ಪಾದನೆಯ ಕಾಲು ಭಾಗಕ್ಕೂ ಹೆಚ್ಚು ಸಂಪನ್ಮೂಲಗಳನ್ನು ಸೈನಿಕ ವ್ಯವಸ್ಥೆಗಾಗಿ ಖರ್ಚು ಮಾಡುತ್ತದೆ ಮತ್ತು ಇದು ನಿರಂತರವಾಗಿ  ಇರುತ್ತದೆ. ವರ್ಷ ವರ್ಷ ಇನ್ನೂ ಹೆಚ್ಚಾಗುತ್ತಿರುತ್ತದೆ. ಅಮೆರಿಕಾದಂತ ದೇಶ ರಕ್ಷಣೆಗಾಗಿ ವಿಶ್ವದ ಐದನೇ ದೊಡ್ಡ ಆರ್ಥಿಕ ಶಕ್ತಿ ಭಾರತದ ಒಟ್ಟು ಬಜೆಟ್ ಗಾತ್ರಕ್ಕಿಂತ ಸುಮಾರು 4 ಪಟ್ಟು ಹೆಚ್ಚು ಕೇವಲ ರಕ್ಷಣೆಗಾಗಿ ಖರ್ಚು ಮಾಡುತ್ತದೆ. ಅಂದರೆ ಸುಮಾರು ‌165 ಲಕ್ಷ ಕೋಟಿ ಅದರ ವಾರ್ಷಿಕ ರಕ್ಷಣಾ ಬಜೆಟ್.

ಪ್ರತಿ ದೇಶದ ದೊಡ್ಡ ಪ್ರಮಾಣದ ಹಣ ಸಾವಿನ ಆಟಕ್ಕಾಗಿ‌ ಖರ್ಚಾಗುತ್ತದೆ. ಹಾಗೆಯೇ ಮಾನವ ಸಂಪನ್ಮೂಲಗಳ ದೃಷ್ಟಿಯಿಂದ ನೋಡಿದರು ಅತಿ ಹೆಚ್ಚು ಆರೋಗ್ಯವಂತ ಮತ್ತು ಬಲಿಷ್ಠ ವ್ಯಕ್ತಿಗಳು ಸೈನಿಕರೇ ಆಗಿರುತ್ತಾರೆ. ಜಗತ್ತಿನ ಬಹುತೇಕ ದೇಶಗಳ ಬಹಳಷ್ಟು ಜನರು ದೇವರನ್ನು ನಂಬುತ್ತಾರೆ. ಧರ್ಮವನ್ನು ಅನುಸರಿಸುತ್ತಾರೆ. ಆದರೆ ವಾಸ್ತವದಲ್ಲಿ ಅದಕ್ಕೆ ವಿರುದ್ಧ ನಿಲುವು ಹೊಂದಿರುತ್ತಾರೆ. ಅಂದರೆ ದೇವರು ಧರ್ಮ ಕೇವಲ ಭಾವನೆಗೆ ಸೀಮಿತಗೊಳಿಸಿ ತಮ್ಮ ರಕ್ಷಣೆಗಾಗಿ ಕೊಲ್ಲುವ ಪರಿಣಿತರಾದ ಸೈನಿಕರ ಮೇಲೆಯೇ ಅವಲಂಬಿಸಿರುತ್ತಾರೆ. ಇದು ಬಹುದೊಡ್ಡ ವೈರುದ್ಯವಲ್ಲವೇ. ತನ್ನ ‌ದೇಶವನ್ನು ಕಾಯಲು ದೇವರಿಗಿಂತ ಸೈನಿಕರೇ ಮುಖ್ಯ ಎಂದಾಯಿತಲ್ಲವೇ...

ಏನೇ ಆಗಲಿ ವಾಸ್ತವ‌ ದೃಷ್ಟಿಯಿಂದ ನೋಡಿದರೆ ‌ಸೈನಿಕರು ಅನಿವಾರ್ಯ ಬಲಿಪಶುಗಳು ಎಂದೆನಿಸುವುದಿಲ್ಲವೇ? ಸೈನಿಕರನ್ನು ನೋಡಿದಾಗ ಅವರ ಮೇಲೆ ಸರಿದಾಡುತ್ತಿರುವ ಸಾವಿನ ಛಾಯೆ ಮತ್ತು ಕೊಲ್ಲುವ ಕ್ರೌರ್ಯ ಒಟ್ಟಿಗೆ ಕಾಣುತ್ತಿತ್ತು. ಅವರನ್ನು ಅದರಿಂದ ಮುಕ್ತಗೊಳಿಸಿ ‌ಬದುಕಿನ ಸಹಜ ವಾತಾವರಣಕ್ಕೆ ಕರೆತಂದು ಉಪಯೋಗಕಾರಿ ಸಾಧನೆಯ ಸಂಪನ್ಮೂಲವಾಗಿ ಪರಿವರ್ತಿಸಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಕಾಡಿದಾಗ ಬಹುಶಃ ಅದು‌ ಅಸಾಧ್ಯ ಎಂಬ ಉತ್ತರವೇ ಕಾಣುತ್ತಿದೆ. ಆದರೂ ವಿಶ್ವದ ಎಲ್ಲಾ ಸೈನಿಕರಿಗೂ ತಮ್ಮ ಕರ್ತವ್ಯ ನಿಷ್ಠೆಗಾಗಿ ಒಂದು ಸಲಾಂ‌ ಹೇಳುತ್ತಾ...

ನಾವು ವಿಶ್ವ ಮಾನವರು ಎಂಬ ಪರಿಕಲ್ಪನೆ ಕೇವಲ ಘೋಷಣೆ ಮಾತ್ರ. ವಾಸ್ತವದಲ್ಲಿ ಮನುಷ್ಯರು ಅತ್ಯಂತ ಅಲ್ಪ ಮಾನವರು ಮತ್ತು ಅನಾಗರಿಕರು ಹಾಗು ಸ್ವಾರ್ಥಿಗಳು. ಕೊಲ್ಲುವ ಆಟದಲ್ಲಿ ಪರಿಪೂರ್ಣತೆ ‌ಸಾಧಿಸಲು ಪ್ರಯತ್ನಿಸುತ್ತಾ ಜೀವಿಸುತ್ತಿರುವ ನರ ರಾಕ್ಷಸರು. ಇದು ಕೇವಲ ಇತಿಹಾಸದಲ್ಲಿ ಮಾತ್ರವಲ್ಲ ವರ್ತಮಾನದ ರಷ್ಯಾ ಉಕ್ರೇನ್ ಯುದ್ದ ನಡೆಯುತ್ತಿರುವ ಸಂದರ್ಭದಲ್ಲಿ ವಿಶ್ವದ ಎಲ್ಲಾ ದೇಶಗಳ ವರ್ತನೆಯನ್ನು ನೋಡಿದಾಗ ಮನುಷ್ಯರ ರಾಕ್ಷಸ ರೂಪ ಸ್ಪಷ್ಟವಾಗಿ ಕಾಣಬಹುದು.

ಎಲ್ಲಾ ಜೀವರಾಶಿಗಳು ಬಹುತೇಕ ತಮ್ಮ ಮೂಲ ಗುಣ ಸ್ವಭಾವಗಳಲ್ಲಿ‌ ಸಹಜತೆ ಕಾಪಾಡಿಕೊಂಡಿವೆ. ಮನುಷ್ಯ ಪ್ರಾಣಿ ಮಾತ್ರ ಜಗತ್ತು ಮುಂದುವರೆದಂತೆ ತನ್ನ ಮೂಲ ಸ್ವರೂಪದಲ್ಲಿ ಅಸಹಜತೆ ತುಂಬಿಕೊಂಡು ವಿನಾಶದತ್ತ ಚಲಿಸುತ್ತಿರುವ ಲಕ್ಷಣಗಳು ಗೋಚರಿಸುತ್ತಿದೆ. ಮುಂದೆ...

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ