ಸೋಜಿಗವಲ್ಲ...

ಸೋಜಿಗವಲ್ಲ...

ಕವನ

ಒಳಕೋಣೆಯ ಬಾಗಿಲು ಜಡಿದ

ಮೇಷ್ಟ್ರು ಆನ್ಲೈನ್ ತರಗತಿಯಲ್ಲಿ

ಲಿಂಗ ಸಮಾನತೆಯ ಕುರಿತು

ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ

ಬೋಧಿಸುತ್ತಿದ್ದುದನ್ನು ಕೇಳಿದ

ಮೇಷ್ಟ್ರ ಮಡದಿ ಕಣ್ಣೀರು ಹಾಕಿದ್ದು ಸೋಜಿಗವಲ್ಲ...!

 

ಸಮಾಜದಲ್ಲಿ ಅಸಮಾನತೆಯು ತೊಲಗಿ

ಸಂಪನ್ಮೂಲಗಳ ಸಮಾನ ಹಂಚಿಕೆಯಾಗಬೇಕೆಂದು

ಹೋರಾಟದ ವೇದಿಕೆಗಳಲಿ ಕಿಡಿಕಾರುತಿದ್ದವನ

ಬೀಳು ಹೊಲದಲ್ಲಿ ಒಲೆ ಹೂಡಿದ್ದ ಅಲೆಮಾರಿ

ಕುಟುಂಬ ಜಾಗ ಖಾಲಿಮಾಡಿದ ನಂತರ

ನಾಲಿಗೆ ಬಿದ್ದುಹೋಗಿರುವುದು ಸೋಜಿಗವಲ್ಲ...!

 

ಮನದ ಮುಂದಣ ಆಸೆಯೇ ಮಾಯೆ

ಎಂಬುದನ್ನು ಸರ್ವರೂ ತಲೆದೂಗುವಂತೆ

ವಿವರಿಸುತ್ತಿದ್ದ ಬುದ್ಧಿಯವರು

ಸಿಗಬಾರದ ರೀತಿ ಸಿಕ್ಕಿಬಿದ್ದ ವಿಷಯ 

ಸವಿವರವಾಗಿ ಮಾಧ್ಯಮಗಳಲ್ಲಿ 

ಬಿತ್ತರಗೊಂಡದ್ದು ಸೋಜಿಗವಲ್ಲ...!

 

ಊರ ಮಂದಿಯ ಜಗಳ ಜಂಜಡಗಳಿಗೆ

ಒತ್ತರಿಸಿವನ ಹೊಲ ಹಾಳು

ಮಚ್ಚರಿಸಿದವನ ಮನೆ ಹಾಳು ಎಂದು

ತಿಳಿ ಹೇಳುತಿದ್ದ ಊರಿನ ಒಳೇಟು ಗೌಡರ 

ಹೊಲ ಮನೆ ಎರಡೂ ಹಾಳಾದದ್ದು ಸೋಜಿಗವಲ್ಲ...!

 

ನಮಗೆ ಗ್ರಾಹಕನೇ ದೇವರು 

ದೇವರಿಗೆ ದ್ರೋಹ ಬಗೆದವರುಂಟೇ?

ಹೀಗೆಂದು ಅಂಗಡಿಗೆ ಆಗಮಿಸಿದವರ ಹಣೆಗೆ 

ತಮ್ಮ ಹಣೆಯ ನಾಮ ವರ್ಗಾಯಿಸುತ್ತಿದ್ದ 

ಮಹಡಿ ಮನೆಯ ಶೇಟ್ ಜೀ ರೋಗಗಳ 

ಗೂಡಾಗಿ ಕೊರಗುವುದು ಸೋಜಿಗವಲ್ಲ...!

 

ಕಿಡಿಯನು ಕೆಂಡಮಾಡಿ

ಉರಿಯನು ಊರಿಗೆ ಹಚ್ಚಿ

ತಾನು ಬೆಚ್ಚಗಿದ್ದವನ ಇದ್ದೊಬ್ಬ ಮಗ

ಕಿಚ್ಚಿನಲಿ ಸುಟ್ಟು ಬೂದಿಯಾದುದು ಸೋಜಿಗವಲ್ಲ...!

 

ಮಂದಿ ಮತಿಯ ಮೇಲೆ ಮಂಕುಬೂದಿಯ ಸಿಡಿಸಿ ಮಾಯಾಜಾಲದಲಿ ಸಿಲುಕಿಸಿದೆವೆಂದು ಬೀಗಿ

ಗೆದ್ದವರಿಲ್ಲ ಸೋತವರೆ ಎಲ್ಲಾ...

ಹೆಣೆದ ಬಲೆಯೊಳಗೆ ಹೆಣವಾಗುವುದು

ಯಾವತ್ತಿಗೂ ಸೋಜಿಗವಲ್ಲ...!

ಚಿತ್ರ್