ಸೋಮಾರಿ ಟೆಡ್ಡಿ ಕರಡಿ
ಸೋಮಾರಿ ಟೆಡ್ದಿ ಕರಡಿಗೆ ಭಾರೀ ಖುಷಿ ಕೊಡುವುದು ಯಾವುದು ಗೊತ್ತೇ? ಗುಂಡಣ್ಣನ ಹಾಸಿಗೆಯಲ್ಲಿ ಬೆಚ್ಚಗೆ ಮಲಗುವುದು. ಪ್ರತಿ ದಿನ ಬೆಳಗ್ಗೆ ಗಡಿಯಾರದ ಅಲಾರಮ್ ಸದ್ದು ಮಾಡಿದೊಡನೆ ಗುಂಡಣ್ಣ ಹಾಸಿಗೆಯಿಂದ ಜಿಗಿದು, ಕಿಟಕಿಯ ಪರದೆಗಳನ್ನು ಪಕ್ಕಕ್ಕೆ ಸರಿಸುತ್ತಿದ್ದ.
ಸೂರ್ಯನ ಬೆಳಕು ಕಿಟಕಿಯಿಂದ ತೂರಿ ಬಂದು ಕೋಣೆಯನ್ನೆಲ್ಲ ಬೆಳಗುತ್ತಿದ್ದಂತೆ, “ಆಹಾ, ಎಷ್ಟು ಸುಂದರ ಮುಂಜಾನೆ" ಎಂದು ಹೇಳುತ್ತಾ ಅವನು ತನ್ನ ಕೈಗಳನ್ನು ಮೇಲಕ್ಕೆತ್ತಿ ಜೋರಾಗಿ ಉಸಿರೆಳೆದುಕೊಳ್ಳುತ್ತಿದ್ದ. "ನಿನಗೆ ತಲೆಕೆಟ್ಟಿದೆ” ಎಂದು ಗೊಣಗುತ್ತಾ ಟೆಡ್ಡಿ ಕರಡಿ ಗುಂಡಣ್ಣನ ಹಾಸಿಗೆಯ ಕ್ವಿಲ್ಟಿನೊಳಗೆ ಇನ್ನಷ್ಟು ತೂರಿಕೊಳ್ಳುತ್ತಿತ್ತು. ನಂತರ ಬಿಸಿಲೇರುವ ವರೆಗೂ ಟೆಡ್ಡಿ ಕರಡಿ ಆ ಹಾಸಿಗೆಯಲ್ಲಿಯೇ ಗೊರಕೆ ಹೊಡೆಯುತ್ತಾ ಬಿದ್ದುಕೊಳ್ಳುತ್ತಿತ್ತು.
“ಸೋಮಾರಿ ಟೆಡ್ಡಿ ಕರಡಿ ಗೊಂಬೆಯೇ, ಏಳು. ಹಾಸಿಗೆಯಿಂದ ಎದ್ದು ಬಂದು ಆಟವಾಡು" ಎಂದು ಗುಂಡಣ್ಣ ಕರೆಯುತ್ತಿದ್ದ. ಆದರೆ, ಸೋಮಾರಿ ಟೆಡ್ಡಿ ಕರಡಿ ಇನ್ನಷ್ಟು ಜೋರಾಗಿ ಗೊರಕೆ ಹೊಡೆಯುತ್ತಿತ್ತು.
ತನ್ನ ಗೆಳೆಯರ ಟೆಡ್ದಿ ಕರಡಿಗಳಂತೆ ತನ್ನ ಟೆಡ್ಡಿ ಕರಡಿಯೂ ಚುರುಕಾಗಿ ಇರಬೇಕೆಂದು ಗುಂಡಣ್ಣ ಬಯಸುತ್ತಿದ್ದ. ಆಟ-ತುಂಟಾಟ ಎಂದರೆ ಗುಂಡಣ್ಣನಿಗೆ ಇಷ್ಟ. ಆಗೆಲ್ಲ ತನ್ನ ಜೊತೆಗೆ ಟೆಡ್ಡಿ ಕರಡಿಯೂ ಇದ್ದರೆ ಚೆನ್ನ ಎಂಬುದವನ ಆಶೆ.
ಅದೊಂದು ದಿನ, ರಾತ್ರಿ ಮಲಗುವ ಮುನ್ನ ಗುಂಡಣ್ಣ ಟೆಡ್ಡಿ ಕರಡಿಯೊಂದಿಗೆ ಮಾತನಾಡಿದ. ತನ್ನ ಹಲವು ಗೆಳೆಯರು ಮತ್ತು ಅವರ ಟೆಡ್ಡಿ ಕರಡಿಗಳೊಂದಿಗೆ ಆ ದಿನ ಮೀನು ಹಿಡಿಯಲು ಹೋದದ್ದನ್ನು ಗುಂಡಣ್ಣ ತಿಳಿಸಿದ.
“ಅದೆಲ್ಲ ಎಷ್ಟು ಮಜವಾಗಿತ್ತು ಗೊತ್ತಾ? ನೀನೂ ಜೊತೆಗಿದ್ದರೆ ಚೆನ್ನಾಗಿರುತ್ತಿತ್ತು. ಇನ್ನಾದರೂ ನೀನು ಸೋಮಾರಿತನ ಬಿಡು. ನಾಳೆ ನನ್ನ ಹುಟ್ಟುಹಬ್ಬ. ನಾನು ಒಂದು ಪಾರ್ಟಿ ಮಾಡುತ್ತೇನೆ. ಆಟಗಳು, ಉಡುಗೊರೆಗಳು, ಐಸ್-ಕ್ರೀಮ್ ಎಲ್ಲ ಇರುತ್ತವೆ. ನೀನೂ ಬರುತ್ತಿ ಎಂದು ಮಾತು ಕೊಡು” ಎಂದ ಗುಂಡಣ್ಣ. “ಓ, ಅದೆಲ್ಲ ಎಷ್ಟು ಗಮ್ಮತ್ತು. ನಾನು ಖಂಡಿತ ಬರುತ್ತೇನೆ. ನಾಳೆ ಬೇಗ ನಿದ್ದೆಯಿಂದ ಏಳುತ್ತೇನೆ” ಎಂದಿತು ಗುಂಡಣ್ಣನ ಟೆಡ್ಡಿ ಕರಡಿ.
ಮರುದಿನ ಬೆಳಗ್ಗೆ ಗುಂಡಣ್ಣ ಬೇಗನೇ ನಿದ್ದೆಯಿಂದ ಎದ್ದ. ತನ್ನ ಕೋಣೆಯಲ್ಲಿ ಸುತ್ತು ಹೊಡೆಯುತ್ತಾ “ಓಹೋ, ಇವತ್ತು ನನ್ನ ಹುಟ್ಟಿದ ಹಬ್ಬ" ಎಂದು ಕೂಗಿದ ಗುಂಡಣ್ಣ. “ಎದ್ದೇಳು ಟೆಡ್ದಿ ಕರಡಿ, ಬಾ" ಎಂದು ಟೆಡ್ಡಿ ಕರಡಿ ಹೊದೆದಿದ್ದ ಕ್ವಿಲ್ಟನ್ನು ಎಳೆದ.
“ಇನ್ನು ಐದೇ ನಿಮಿಷ ಮಲಗುತ್ತೇನೆ" ಎನ್ನುತ್ತಾ ಟೆಡ್ಡಿ ಕರಡಿ ಅಲ್ಲೇ ಹೊರಳಿ ಗೊರಕೆ ಹೊಡೆಯತೊಡಗಿತು. ಗುಂಡಣ್ಣ ಮುಖ ತೊಳೆದು, ಬೆಳಗ್ಗಿನ ಉಪಾಹಾರ ಮುಗಿಸಿ ತನ್ನ ಕೋಣೆಗೆ ಬಂದಾಗಲೂ ಟೆಡ್ಡಿ ಕರಡಿ ಮಲಗಿಕೊಂಡೇ ಇತ್ತು. ಈಗ ಗುಂಡಣ್ಣನಿಗೆ ಬಹಳ ಅಸಮಾಧಾನವಾಯಿತು. ಅವನು ಟೆಡ್ಡಿ ಕರಡಿಯ ಹೊಟ್ಟೆಗೆ ಕೈಯಿಂದ ತಿವಿದ. ಅದು ಒಂದು ಕಣ್ಣು ತೆರೆದು ಗುರುಗುಟ್ಟಿತು. “ಏಳು, ಬೇಗ ಏಳು. ನಿನ್ನೆ ರಾತ್ರಿ ನನಗೆ ಮಾತು ಕೊಟ್ಟದ್ದನ್ನು ಮರೆತೆಯಾ?” ಎಂದು ಕೇಳಿದ ಗುಂಡಣ್ಣ.
ಟೆಡ್ಡಿ ಕರಡಿ ಎದ್ದು ಆಕಳಿಸಿತು. “ಓ, ನಾನು ಬರಲೇ ಬೇಕೆಂದಾದರೆ ಸರಿ" ಎಂದು ಗೊಣಗಾಡುತ್ತಾ ಅದು ಹಾಸಿಗೆಯಿಂದ ಎದ್ದಿತು. ಅನಂತರ ಮುಖ ತೊಳೆದು, ತನ್ನ ಚಂದದ ಕೆಂಪು ಕೋಟನ್ನು ಹಾಕಿಕೊಂಡಿತು. "ನಾನು ರೆಡಿ” ಎಂದಿತು.
ಆಗಲೇ ಬಾಗಿಲಿನ ಕರೆಗಂಟೆ ಸದ್ದು ಮಾಡಿತು. “ಇಲ್ಲೇ ಇರು. ಒಂದೇ ನಿಮಿಷದಲ್ಲಿ ಬರುತ್ತೇನೆ” ಎನ್ನುತ್ತಾ ಗುಂಡಣ್ಣ ಬಾಗಿಲು ತೆರೆಯಲು ಓಡಿದ. ಆತ ವಾಪಾಸು ಬಂದು ನೋಡಿದಾಗ ಟೆಡ್ಡಿ ಕರಡಿ ಕಾಣಿಸಲಿಲ್ಲ. ಹಾಸಿಗೆಯ ಬುಡದಿಂದ ಸಣ್ಣಗೆ ಗೊರಕೆಯ ಸದ್ದು ಮಾತ್ರ ಕೇಳಿಸುತ್ತಿತ್ತು.
ಗುಂಡಣ್ಣನಿಗೆ ಎಷ್ಟು ಬೇಸರವಾಯಿತೆಂದರೆ, ಟೆಡ್ದಿ ಕರಡಿಯನ್ನು ಅಲ್ಲೇ ಬಿಟ್ಟು ಹೋಗಲು ನಿರ್ಧರಿಸಿದ. “ಕೊಟ್ಟ ಮಾತು ಉಳಿಸಿಕೊಳ್ಳದ ಟೆಡ್ದಿ ಕರಡಿ ನನ್ನ ಪಾರ್ಟಿಗೆ ಬರೋದೇ ಬೇಡ" ಎನ್ನುತ್ತಾ ಹೊರ ನಡೆದ.
ಗುಂಡಣ್ಣ ತನ್ನ ಹುಟ್ಟು ಹಬ್ಬದ ಪಾರ್ಟಿಯನ್ನು ಗೆಳೆಯರೊಂದಿಗೆ ಖುಷಿಯಿಂದ ಆಚರಿಸಿದ. ಆ ದಿನ ರಾತ್ರಿ ಮಲಗಿದಾಗ, ತಲೆದಿಂಬಿನಲ್ಲಿ ಮುಖ ಮುಚ್ಚಿಕೊಂಡು ಗುಂಡಣ್ಣ ಅಳತೊಡಗಿದ.
ಟೆಡ್ಡಿ ಕರಡಿಗೆ ಇನ್ನೂ ನಿದ್ದೆ ಬಂದಿರಲಿಲ್ಲ. ತಾನು ಕೊಟ್ಟ ಮಾತು ತಪ್ಪಿದ್ದಕ್ಕಾಗಿಯೇ ಗುಂಡಣ್ಣ ಅಳುತ್ತಿದ್ದಾನೆ ಎಂದು ಟೆಡ್ಡಿ ಕರಡಿಗೆ ಗೊತ್ತಿತ್ತು; ಇದರಿಂದಾಗಿ ಅದಕ್ಕೆ ಬಹಳ ಪಶ್ಚಾತ್ತಾಪವಾಯಿತು. “ನನ್ನನ್ನು ಕ್ಷಮಿಸು" ಎಂದು ಪಿಸುನುಡಿಯಿತು ಟೆಡ್ಡಿ ಕರಡಿ. ಅದು ಗುಂಡಣ್ಣನ ಮುಖದ ಪಕ್ಕದಲ್ಲೆ ಕುಳಿತು, ಅವನಿಗೆ ನಿದ್ದೆ ಬರುವ ತನಕ ಅವನನ್ನು ಕೈಯಿಂದ ತಟ್ಟಿತು.
ಮರುದಿನ ಬೆಳಗ್ಗೆ ಅಲಾರಮ್ ಸದ್ದು ಮಾಡಿದಾಗ ಗುಂಡಣ್ಣ ಹಾಸಿಗೆಯಿಂದ ಯಾವಾಗಿನಂತೆ ಜಿಗಿದು ಎದ್ದ. ಅದೇನು ಅಚ್ಚರಿ? ಟೆಡ್ದಿ ಕರಡಿ ಕೂಡಾ ಹಾಸಿಗೆಯಿಂದ ಜಿಗಿದು ಎದ್ದಿತು! ಅದು ತನ್ನ ಕೈಗಳನ್ನು ಮೇಲಕ್ಕೆ ಚಾಚುತ್ತಿದ್ದಂತೆ ಗುಂಡಣ್ಣ ಅದರ ಕಡೆಗೆ ಆಶ್ಚರ್ಯದಿಂದ ನೋಡಿದ.
"ಇವತ್ತು ನಾವೇನು ಮಾಡೋಣ?” ಎಂದು ಕೇಳಿತು ಟೆಡ್ದಿ ಕರಡಿ. “ಇವತ್ತು ಪ್ರವಾಸ ಹೋಗಲಿದ್ದೇವೆ. ನೀನೂ ಬರುತ್ತೀಯಾ?” ಎಂದು ಅಚ್ಚರಿಯಿಂದಲೇ ಕೇಳಿದ ಗುಂಡಣ್ಣ.
“ಖಂಡಿತ ಬರುತ್ತೇನೆ” ಎನ್ನುತ್ತಾ ಟೆಡ್ಡಿ ಕರಡಿ ಮುಖ ತೊಳೆಯಲು ನಡೆಯಿತು. ಅವತ್ತಿನಿಂದ ಪ್ರತಿ ದಿನವೂ ಟೆಡ್ದಿ ಕರಡಿ ಮುಂಜಾನೆ ಬೇಗನೇ ಏಳುತ್ತಿತ್ತು ಮತ್ತು ದಿನವಿಡೀ ಗುಂಡಣ್ಣನೊಡನೆ ಆಟೋಟಗಳಲ್ಲಿ ಪಾಲ್ಗೊಳ್ಳುತ್ತಿತ್ತು. ಅನಂತರ ಟೆಡ್ದಿ ಕರಡಿ ಯಾವತ್ತೂ ಗುಂಡಣ್ಣನಿಗೆ ಕೊಟ್ಟ ಮಾತು ತಪ್ಪಲಿಲ್ಲ.
ಚಿತ್ರ ಕೃಪೆ: "ದ ನರ್ಸರಿ ಕಲೆಕ್ಷನ್" ಪುಸ್ತಕ