ಸೋಮಾರಿ ಸಂಡೇ ಮೂರ್ತಗೊಂಡ ಬಗೆ..

ಸೋಮಾರಿ ಸಂಡೇ ಮೂರ್ತಗೊಂಡ ಬಗೆ..

ನೀಲಿ ತುಂಬಿದ ಬಟ್ಟಲು. ಸಂಡೇ ಎಂಬ ಸೋಮಾರಿಯ ದಿನ ಹಾಗೆ ನೀಲಿ ತುಂಬಿದ ಬಟ್ಟಲಿನಿಂದ ಪ್ರಾರಂಭವಾಗಿದೆ. ಕ್ರಿಸ್ ಮಸ್ ಮುನ್ನಾದಿನ ಸಂತಾಕ್ಲಾಸ್ ತನ್ನ ಗೋಣಿಚೀಲದಿಂದ ಬಗೆಬಗೆಯ ಆಟಿಕೆಗಳನ್ನು ನಿಧಾನವಾಗಿ ತೆಗೆದಂತೆ ಪೋರನೊಬ್ಬ ತನ್ನ ಪಾಟಿ ಚೀಲದಿಂದ ಬಗೆಬಗೆಯ ಸಾಮಗ್ರಿಗಳನ್ನು ಅತೀ ಎಚ್ಚರಿಕೆಯಿಂದ ತೆಗೆಯುತ್ತಿದ್ದಾನೆ.ಜಗದ ಊಹೆಗೆ ನಿಲುಕದ ಯಾವುದೋ ಮಹತ್ತರ ಕಾರ್ಯವನ್ನು ತಾನೊಬ್ಬನೇ ಸಾಧಿಸುವ ಹಮ್ಮಿನಲ್ಲಿ ಇರುವಂತೆ ತೋರುತ್ತಿದ್ದಾನೆ. ಆದರೆ ಪೋರನ ಈ ಕಾರ್ಯಕ್ಕೆ ಮನೆಯಲ್ಲಿನ ಜನರ್ಯಾರೂ ಗಮನ ಕೊಟ್ಟಂತಿಲ್ಲ. ಇಷ್ಟಕ್ಕೂ ಏನೇನು ತೆಗೆಯುತ್ತಿದ್ದಾನೆ ಆತ? ಮೊದಲಿಗೆ ಮಗ್ಗಿ ಪುಸ್ತಕ.ನಂತರ ಭಾಷಾಂತರ ಮಾಲೆ. ನಿನ್ನೆ ಕೊಂಡ ಹೊಸ ನೋಟಬುಕ್ಕು.ಇದು ನೋಡಿ,ಕೆಲವೇ ದಿನಗಳ ಹಿಂದಷ್ಟೇ ಮೂರು ತೂತುಗಳನ್ನು ಮಾಡಿ ರಟ್ಟಿನ ಮೇಲೆ ಹೊಲಿಗೆ ಹಾಕಿಸಿಕೊಂಡು ಬೈಂಡಿಂಗ್ ಮಾಡಿಸಿಕೊಂಡಿರುವ ಸರಕಾರಿ ಪಾಠಪುಸ್ತಕ.. ಅದೋ,ಈಗ ಬರುತ್ತಿದೆ,ಬ್ರಹ್ಮಾಂಡದ ಅದ್ಭುತಗಳನ್ನೆಲ್ಲ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಪೆಟ್ಟಿಗೆ! ಏನೇನಿಲ್ಲ ಅದರಲ್ಲಿ? ಕೆಂಪು,ಹಸಿರು,ನೀಲಿ ಮತ್ತು ಕಪ್ಪು ಬಣ್ಣದ ರೀಫಿಲ್ಲುಗಳು ಸೇರಿದಂಥ ಒಂದೇ ಪೆನ್ನು.ಅಕಸ್ಮಾತ್, ಒಂದು ರೀಫಿಲ್ಲು ಮುಗಿದೇ ಹೋದರೆ ಹೊಸತನ್ನು ಹ್ಯಾಗೆ ಮತ್ತೇ ಅದರಲ್ಲಿ ಸೇರಿಸೋದು ಅಂತ ಪೋರನಿಗೂ ಗೊತ್ತಿಲ್ಲ.ಇದೇ ಭಯದಿಂದಾಗಿ ಆತ ಆ ಪೆನ್ನನ್ನೇ ಉಪಯೋಗಿಸುತ್ತಿಲ್ಲ.ಇದು ನೋಡಿ: ಪ್ಲಾಜಾ ಪೆನ್ನು,ಹೀರೋ ಪೆನ್ನು,ಇಂಚುಪಟ್ಟಿ ,ತ್ರಿಜ್ಯ,ಕೋನಮಾಪಕ,ಒಂದೆರಡು ಸತ್ತು(?)ಹೋದ ನವಿಲುಗರಿ,ಒಣಗಿದ ಅಶ್ವತ್ಥವೃಕ್ಷದ ಎಲೆ,ಮೂಲೆ ತಿಕ್ಕಿಸಿಕೊಂಡು ಸವೆದುಹೋದ ರಬ್ಬರು, ಹೆಚ್ ಬಿ ಪೆನ್ಸಿಲ್ಲು,ಪುಸ್ತಕದ ರಟ್ಟಿನ ಮೇಲೆ ಅಂಟಿಸಬಲ್ಲಂಥ ಖಾಲಿ ಲೇಬಲ್ಲುಗಳು,ಒಂದು ಬರೆಯಬಲ್ಲ ಸ್ಕೆಚ್ ಪೆನ್ನು;ಇನ್ನೊಂದು ಕೆಟ್ಟು ಹೋದ ಸ್ಕೆಚ್ ಪೆನ್ನು.. ಅದುವೇ ಕಂಪಾಸ್ ಬಾಕ್ಸ್! ಅದರೊಳಗಿಂದ ಪ್ಲಾಜ ಪೆನ್ನನ್ನು ಹೊರ ತೆಗೆದಿದ್ದಾನೆ ಈ ಪೋರ.ಎಚ್ಚರಿಕೆಯಿಂದ ತುಟಿಯುಬ್ಬಿಸಿಕೊಂಡು ಅದರ ಬಿಡಿಭಾಗಗಳನ್ನು ಬಿಚ್ಚುತ್ತಿದ್ದಾನೆ.ಬಿಚ್ಚುವಾಗ ಇಂಕು ಬಿದ್ದರೆ? ಯಾವುದಕ್ಕೂ ಇರಲಿ ಅಂತ ಚಾಕ್ ಪೀಸನ್ನು ಹತ್ತಿರವೇ ಇಟ್ಟುಕೊಂಡಿದ್ದಾನೆ.ಇಂಕುಪೆನ್ನಿನ ಮುಚ್ಚಳ,ನಿಬ್ಬು,ನಾಲಿಗೆ ಎಲ್ಲವೂ ವೇಷ ಕಳಚಿಟ್ಟ ಪಾತ್ರಧಾರಿಗಳಂತೆ ಅನಾಥರಾಗಿ ಬಟ್ಟಲಿನಲ್ಲಿ ಬಿದ್ದುಬಿಟ್ಟಿವೆ. ಬಟ್ಟಲಿನ ತುಂಬ ಈಗ ನೀಲಿ ನೀಲಿ.ಕೆಂಪು ಬಣ್ಣದ ಮುಚ್ಚಳ,ಬಂಗಾರ ವರ್ಣದ ನಿಬ್ಬು,ಕಪ್ಪನೆಯ ನಾಲಿಗೆ- ಎಲ್ಲವೂ ನೀಲಿಯಲ್ಲಿ ನೀಲಿಮಗೊಂಡಿವೆ. ಪೋರನಿಗೆ ದಿಢೀರಂತ ಏನೋ ನೆನಪಾಗಿ ಅಮ್ಮನ ಕಡೆ ಓಡಿದ್ದಾನೆ.ಕ್ಷಣಮಾತ್ರದಲ್ಲಿ ಅಲ್ಲಿಂದ ಸೂಜಿ ಮತ್ತು ಬ್ಲೇಡುಗಳನ್ನು ಹಿಡಿದು ಮತ್ತೇ ತಾನಿದ್ದ ಜಾಗಕ್ಕೆ ಬಂದು ಕುಳಿತಿದ್ದಾನೆ. "ಹುಶಾರೂ..." ಅಂತ ಅಡುಗೆ ಮನೆಯಿಂದ ಕೂಗಿದ ಕೂಗು ಇವನಿಗೆ ಕೇಳಿಸಿಯೇ ಇಲ್ಲ! ಬ್ಲೇಡು ನಿಧಾನವಾಗಿ ನಿಬ್ಬಿನ ಮಧ್ಯೆ ಸೀಳತೊಡಗಿದೆ.ಸೂಜಿ ನಾಲಿಗೆಯನ್ನು ಸ್ವಚ್ಚಗೊಳಿಸುತ್ತಿದೆ. ಆಗಾಗ ಬ್ಲೇಡನ್ನು ನಿಬ್ಬಿನ ಮಧ್ಯೆ ಇಟ್ಟು ಪೆನ್ನನ್ನು ಮೇಲೆ ಕೆಳಗೆ ಝಾಡಿಸುತ್ತಿದ್ದಾನೆ.ಈಗ ಕೊಳೆಯೆಲ್ಲ ನೆಲಕ್ಕೆ ಬಿದ್ದೇ ಬಿದ್ದಿರುತ್ತದೆಂಬ ನಂಬಿಕೆಯಲ್ಲಿರುವಂತಿದೆ. ಅಷ್ಟರಲ್ಲಿ ಹೊರಗಿನಿಂದ ಇನ್ಯಾರೋ ಪೋರನ ಹೆಸರನ್ನಿಡಿದು ಕೂಗು ಹಾಕಿದ್ದಾರೆ.ಗೋಲಿಯಾಟಕ್ಕೆ ಕರೆದಿದ್ದಾರೆ.ಪೋರ ಕುಳಿತಲ್ಲಿಂದಲೇ "ಇಲ್ಲ,ಇಲ್ಲ.." ಅಂತ ಮರುಕೂಗು ಹಾಕಿ ಉಫ್ ಉಫ್ ಅಂತ ನಾಲಿಗೆಯನ್ನು ಊದಿ ಸ್ವಚ್ಚಗೊಳಿಸಿದ್ದಾನೆ.ಇಂಕು ಈಗ ಸರಾಗವಾಗಿ ಹರಿದೀತೆ?ಅಂತ ಮತ್ತೇ ಮತ್ತೇ ತನ್ನಷ್ಟಕ್ಕೆ ತಾನೇ ಕೇಳಿಕೊಂಡಿದ್ದಾನೆ.ಅಂತೂ ಇಂತೂ ವೇಷ ಕಳಚಿಟ್ಟ ಪಾತ್ರಧಾರಿಗಳು ಸ್ನಾನ ಮುಗಿಸಿಯೇ ಬಿಟ್ಟಿದ್ದಾರೆ;ಲಕಲಕ ಹೊಳೆದಿದ್ದಾರೆ. ಎಲ್ಲ ಮುಗಿದಾದ ಮೇಲೆ ಕೊನೆಯದಾಗಿ ಬ್ರಹ್ಮಾಸ್ತ್ರ ಬಂದಿದೆ.ಎಲ್ಲ ಜೋಡಿಸಿಟ್ಟ ಪೋರ,ಖಾಲಿ ಪೆನ್ನನ್ನು ಕನ್ನಡಿಯ ಮೇಲೆ ಸುಮ್ಮನೇ ಗೀಚತೊಡಗಿದ್ದಾನೆ. ಪೋರನ ಈ ಕಾರ್ಯಕ್ಕೆ ಕನ್ನಡಿಯೂ ನಕ್ಕಂತಿದೆ; ಸಾಥ್ ಕೊಟ್ಟಂತಿದೆ.ಪರಿಣಾಮವಾಗಿ,ಕನ್ನಡಿ ಮತ್ತು ಪೋರನ ಪ್ರೀತಿಗೆ ನಿಬ್ಬೇ ಸೋತು ಹೋಗಿದೆ! ಮೊದಲಿಗೆ "ಕೀರ್.." ಎಂದು ಗುಡುಗಿ ಚೀವ್.. ಅನ್ನುತ್ತ ಸೋಲೊಪ್ಪಿಕೊಂಡಿದೆ.. ಅತ್ತ,ನಿಬ್ಬು ಪಾಲಿಶ್ ಆದಂತೆ ಕಂಡು ಕೆಲಸ ಮುಗಿಸಿದ ಖುಷಿ ಪೋರನ ಕಣ್ಣಲ್ಲಿ ಪ್ರತಿಫಲಿಸಿದೆ. ಇತ್ತ,ವಿಷ ಕುಡಿಯದೇ ಬಟ್ಟಲೊಂದು ನೀಲಿನೀಲಿಯಾಗಿದೆ.. ***