ಸೋಮಾರಿ ಸಿಂಹದ ಪಾಡು
ಸೋಮಾರಿ ಸಿಂಹ ಮರದ ನೆರಳಿನಲ್ಲಿ ಗೊರಕೆ ಹೊಡೆಯುತ್ತಾ ಮಲಗಿತ್ತು. ಆಕಾಶದಲ್ಲಿ ಸೂರ್ಯ ಬೆಳಗುತ್ತಿದ್ದರೆ, ತನ್ನ ಬಾಲದಿಂದ ನೊಣಗಳನ್ನು ಓಡಿಸುತ್ತಾ ಅದು ಆರಾಮವಾಗಿ ಮಲಗಿತ್ತು.
ಸೋಮಾರಿ ಸಿಂಹಕ್ಕೆ ಮಲಗುವುದರ ಹೊರತಾಗಿ ಬೇರೆನನ್ನೂ ಮಾಡಲು ಇಷ್ಟವಿರಲಿಲ್ಲ. ಸಾಧ್ಯವಿದ್ದರೆ ಹಗಲುರಾತ್ರಿಯೆಲ್ಲ ಸೋಮಾರಿ ಸಿಂಹ ಮಲಗಲು ತಯಾರಿತ್ತು. ಯಾವಾಗಾದರೊಮ್ಮೆ ಏನಾದರೂ ತಿನ್ನಲಿಕ್ಕಾಗಿ ಎದ್ದರೆ ಸಾಕು ಎಂದು ಅದು ಹಗಲುಗನಸು ಕಾಣುತ್ತಿತ್ತು. ಆಗ, ಅಲ್ಲೊಂದು ಹೈನಾ ಓಡಿ ಹೋಯಿತು. ಅದು, "ಸೋಮಾರಿ ಸಿಂಹ, ಏಳು. ನಿನಗೆ ನೀರಿನಲ್ಲಿ ಈಜುವುದು ಬೇಡವಾಗಿದ್ದರೆ ಏಳು. ಯಾಕೆಂದರೆ ಇನ್ನೇನು ಮಳೆ ಸುರಿಯಲಿದೆ" ಎನ್ನುತ್ತಾ ಅಲ್ಲಿಂದ ದೂರ ಹೋಯಿತು.
ಒಂದು ಕಣ್ಣನ್ನು ತೆರೆದು, ದೂರ ಕಾಡಿನೊಳಗೆ ಓಡಿ ಹೋದ ಹೈನಾವನ್ನು ನೋಡುತ್ತಾ ಸೋಮಾರಿ ಸಿಂಹ ಹೇಳಿತು, "ತಲೆಕೆಟ್ಟ ಪ್ರಾಣಿ ಅದು. ನಾನು ಎದ್ದೇಳ ಬೇಕೆಂದು ಅದು ಮಳೆಯ ಕತೆ ಹೇಳುತ್ತಿದೆ.” ಹೀಗೆಂದು, ಸಿಂಹ ಪುನಃ ನಿದ್ದೆಗೆ ಜಾರಿತು.
ಸ್ವಲ್ಪ ಹೊತ್ತಿನಲ್ಲಿ, ಸಿಂಹವನ್ನು ಹಿಂಬದಿಯಿಂದ ಯಾರೋ ತಳ್ಳಿದರು. ಸಿಂಹ ನೋಡಿದಾಗ, ಅದನ್ನು ಜಿರಾಫೆ ಮೂತಿಯಿಂದ ತಳ್ಳುತ್ತಿತ್ತು. ಸಿಂಹಕ್ಕೆ ಎಚ್ಚರವಾದಾಗ, "ಬೇಗ ಏಳು, ಮಳೆ ಬರಲಿದೆ. ನೀನೀಗ ಮಳೆಯಿಂದ ಆಶ್ರಯ ಪಡೆಯಲು ಓಡಬೇಕು. ಇಲ್ಲಿಯ ನದಿಯಲ್ಲಿ ನೆರೆ ಬರಲಿದೆ” ಎಂದು ಜಿರಾಫೆ ಎಚ್ಚರಿಸಿತು.
“ಅಸಂಬದ್ಧ ಮಾತಾಡಬೇಡ. ಆ ಹೈನಾ ಮಳೆಯ ಕತೆಯನ್ನು ನಿನ್ನ ತಲೆಗೆ ತುಂಬಿದೆ. ಇದೊಂದು ಒಳ್ಳೆಯ ಬಿಸಿಲಿನ ದಿನ. ಮಳೆ ಎಲ್ಲಿಂದ ಬಂದೀತು?” ಎನ್ನುತ್ತಾ ಸೋಮಾರಿ ಸಿಂಹ ಪುನಃ ಕಣ್ಣುಗಳನ್ನು ಮುಚ್ಚಿಕೊಂಡು, ಗೊರಕೆ ಹೊಡೆಯತೊಡಗಿತು.
ಕೆಲವೇ ನಿಮಿಷಗಳಲ್ಲಿ ಸಿಂಹದ ಬಾಲವನ್ನು ಯಾರೊ ಎಳೆದಾಗ ಸಿಂಹಕ್ಕೆ ಪುನಃ ಎಚ್ಚರವಾಯಿತು. “ಎದ್ದೇಳು ಸೋಮಾರಿ ಸಿಂಹ. ಮಳೆ ಅಪ್ಪಳಿಸಲಿದೆ. ಬೇಗ ಎದ್ದು ಇಲ್ಲಿಂದ ಓಡು” ಎಂದಿತು ಬಾಲ ಎಳೆಯುತ್ತಿದ್ದ ಮಂಗ.
“ನೀವೆಲ್ಲರೂ ನನ್ನನ್ನು ಯಾಕೆ ಮತ್ತೆಮತ್ತೆ ನಿದ್ದೆಯಿಂದ ಎಬ್ಬಿಸುತ್ತಿದ್ದೀರಿ? ನಿಮಗೆ ಬೇರೆ ಕೆಲಸವಿಲ್ಲವೇ?”ಎಂದು ಅಬ್ಬರಿಸಿತು ಸೋಮಾರಿ ಸಿಂಹ. ಮಂಗ ಹೆದರಿ ಓಡಿ ಹೋದಾಗ ಪುನಃ ಕಣ್ಣು ಮುಚ್ಚಿ ಗೊರಕೆ ಹೊಡೆಯತೊಡಗಿತು.
ಅನಂತರ, ಯಾವುದೇ ಪ್ರಾಣಿಗೂ ಸಿಂಹದ ಹತ್ತಿರ ಹೋಗಿ ಅದನ್ನು ಎಬ್ಬಿಸಲು ಧೈರ್ಯ ಬರಲಿಲ್ಲ. ಆದ್ದರಿಂದ, ಆಕಾಶದಲ್ಲಿ ಕರಿಮೋಡಗಳು ಕವಿದು, ಮಳೆಯ ಹನಿಗಳು ಬೀಳತೊಡಗಿದಾಗ ಸಿಂಹವನ್ನು ಎಚ್ಚರಿಸಲು ಅವಕ್ಕೆ ಸಾಧ್ಯವಾಗಲಿಲ್ಲ.
ಇತರ ಪ್ರಾಣಿಗಳು ಓಡಿ ಹೋಗಿ, ಎತ್ತರದ ಗುಡ್ಡದ ಕಲ್ಲುಗಳ ಎಡೆಗಳಲ್ಲಿ, ಗವಿಗಳಲ್ಲಿ ಬಿರುಮಳೆಯಿಂದ ಆಶ್ರಯ ಪಡೆದವು. ಮಲಗಿದ್ದ ಸೋಮಾರಿ ಸಿಂಹಕ್ಕೆ ಮಳೆಯ ಹನಿಗಳು ಮೈಮೇಲೆ ಬಿದ್ದಾಗ ಚಳಿಯಾಯಿತು. ಒಂದೆರಡು ಮಳೆಹನಿಗಳು ಅದರ ಮೂಗಿನೊಳಗೇ ಬಿದ್ದವು. "ಹೌದು, ಮಳೆ ಬರುತ್ತಿದೆ. ಆದರೆ ಇದು ಸಣ್ಣ ಮಳೆ. ನಾನು ಇನ್ನೊಂದಷ್ಟು ಹೊತ್ತು ಮಲಗುತ್ತೇನೆ" ಎಂದು ಪುನಃ ಎದೆ ಮೇಲಾಗಿ ಮಲಗಿತು ಸೋಮಾರಿ ಸಿಂಹ.
ಆದರೆ ಮಳೆ ಜೋರಾಗಿ ಸುರಿಯತೊಡಗಿತು. ಸೋಮಾರಿ ಸಿಂಹದ ಮೈಯೆಲ್ಲ ಒದ್ದೆಯಾಗಿ ಅದಕ್ಕೆ ಜೋರು ಚಳಿಯಾಯಿತು. ಆದರೆ ಅದು ಎದ್ದು ಗವಿಗೆ ಹೋಗಿ ಆಶ್ರಯ ಪಡೆಯಲು ತಯಾರಿರಲಿಲ್ಲ. “ಇನ್ನೂ ಐದು ನಿಮಿಷ ಹೀಗೆಯೇ ಮಲಗುತ್ತೇನೆ" ಎಂದು ಪುನಃ ಮಲಗಿತು.
ನಿಮಿಷಗಳು ಸರಿದಂತೆ ಮಳೆಯ ದೊಡ್ಡದೊಡ್ಡ ಹನಿಗಳು ನೆಲಕ್ಕೆ ಅಪ್ಪಳಿಸತೊಡಗಿದವು. ಅಲ್ಲಿನ ನದಿಯಲ್ಲಿ ನೀರಿನ ಮಟ್ಟ ಏರತೊಡಗಿತು. ಅನಂತರ, ಭಯಂಕರ ಮಿಂಚು ಮಿಂಚಿತು ಮತ್ತು ಅದರ ಬೆನ್ನಿಗೇ ಗುಡುಗು ಗುಡುಗಿತು. ಅಷ್ಟರಲ್ಲಿ ನದಿಯ ನೀರು ದಡ ಮೀರಿ ಹರಿಯ ತೊಡಗಿತು; ಆಲ್ಲಿನ ಬಯಲಿನಲ್ಲಿ ನೆರೆ ಏರಿತು. ನೀರಿನ ಸೆಳೆತ ಸೋಮಾರಿ ಸಿಂಹವನ್ನು ಎಳೆದೊಯ್ದಿತು; ಅದು ತನ್ನ ತಲೆಯನ್ನು ನೀರಿನ ಮೇಲಕ್ಕಿರಿಸಲು ಹೆಣಗತೊಡಗಿತು.
ಇತರ ಪ್ರಾಣಿಗಳು ತಮ್ಮ ಸುರಕ್ಷಿತ ಜಾಗದಿಂದ ಸೋಮಾರಿ ಸಿಂಹದ ಪಾಡನ್ನು ಭಯದಿಂದ ನೋಡಿದವು. ಅದು ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ, ಈಜುತ್ತಾ ದಡದತ್ತ ಬರುವಾಗ ಇತರ ಪ್ರಾಣಿಗಳು ಸಂತೋಷದಿಂದ ಕೇಕೆ ಹಾಕಿದವು.
ಅಂತೂ ನದಿ ದಡಕ್ಕೆ ಬಂದು ಅಂಗಾತ ಬಿದ್ದುಕೊಂಡ ಸೋಮಾರಿ ಸಿಂಹ, “ಅಬ್ಬ, ಸಾಕೋ ಸಾಕಾಯಿತು” ಎಂದು ಉದ್ಗರಿಸಿತು. ತಾನು ಸೋಮಾರಿಯಾಗಿ ಬಿದ್ದುಕೊಳ್ಳದೆ, ಇತರ ಪ್ರಾಣಿಗಳ ಮಳೆ ಎಚ್ಚರಿಕೆಗೆ ಕಿವಿಗೊಡಬೇಕಾಗಿತ್ತು ಎಂದು ಅದಕ್ಕೆ ಈಗ ಅರ್ಥವಾಗಿತ್ತು.
ಒದ್ದೆಮುದ್ದೆಯಾಗಿದ್ದ ಸೋಮಾರಿ ಸಿಂಹ ಬಿದ್ದಲ್ಲಿಂದ ಎದ್ದು ಕಾಲೆಳೆಯುತ್ತಾ ಗುಡ್ಡವನ್ನೇರಿತು. ಇತರ ಪ್ರಾಣಿಗಳು ಅದನ್ನು ಸುತ್ತುವರಿದು, “ಏನೂ ಏಟಾಗಲಿಲ್ಲ ತಾನೇ?” ಎಂದು ಕಾಳಜಿಯಿಂದ ಕೇಳಿದವು.
“ಇಲ್ಲ, ಇಲ್ಲ. ನಾನು ಸುಸ್ತಾಗಿದ್ದೇನೆ. ಅದೇನು ಬಿಡಿ, ಒಂದು ದಿನವಿಡೀ ಮಲಗಿದರೆ ಎಲ್ಲ ಸರಿ ಹೋಗುತ್ತದೆ” ಎಂದಿತು ಸೋಮಾರಿ ಸಿಂಹ.
ಚಿತ್ರ ಕೃಪೆ: "ದ ನರ್ಸರಿ ಕಲೆಕ್ಷನ್" ಪುಸ್ತಕ