ಸೌತೆಕಾಯಿಯ ಸಂರಕ್ಷಿತ ಬೇಸಾಯ (ಭಾಗ ೨)
ಪಾಲೀಥಿನ್ ಹೊದಿಕೆ : ಏರುಮಡಿಗಳನ್ನು ಕಪ್ಪು ಬಣ್ಣದ ಪಾಲಿಥೀನ್ ಶೀಟ್‌ನಿಂದ ಮುಚ್ಚಬೇಕು. ಈ ಪಾಲಿಥೀನ್ ಶೀಟ್ ೩೦-೧೦೦ ಮೈಕ್ರಾನ್ ದಪ್ಪ ಮತ್ತು ೧.೨ ಮೀ. ಅಗಲವಾಗಿದ್ದು ಒಂದು ಬದಿ ಕಪ್ಪು ಮತ್ತು ಇನ್ನೊಂದು ಬದಿ ಬಿಳಿ ಅಥವಾ ಬೆಳ್ಳಿ ಬಣ್ಣದ್ದಾಗಿರಬೇಕು. ಈ ಹಾಳೆಯನ್ನು ಬೆಳೆಯುವ ಮಡಿಗಳಲ್ಲಿ ಹರಡಿ, ಎರಡು ಬದಿಗಳನ್ನು ಮಣ್ಣಿನಿಂದ ಮುಚ್ಚಬೇಕು. ಈ ರೀತಿ ಹೊದಿಕೆಯಿಂದ ನೀರಿನ ಪೋಲಾಗುವಿಕೆ ಮತ್ತು ಕಳೆಗಳನ್ನು ನಿಯಂತ್ರಿಸಬಹುದಲ್ಲದೆ ಕೀಟ ಮತ್ತು ರೋಗದ ಹಾವಳಿಯನ್ನು ಕಡಿಮೆಗೊಳಿಸಿ ಹೆಚ್ಚಿನ ಇಳುವರಿ ಮತ್ತು ಗುಣಮಟ್ಟದ ಹಣ್ಣುಗಳನ್ನು ಪಡೆಯಬಹುದು. ಹರಡಿದ ಪಾಲಿಥೀನ್ ಶೀಟ್‌ನಲ್ಲಿ ೫ ಸೆಂ. ಮೀ. ಸುತ್ತಳತೆಯಲ್ಲಿ ಶಿಫಾರಸ್ಸು ಮಾಡಿದ ಅಂತರದಲ್ಲಿ ಕತ್ತರಿಸಬೇಕು.
ನೀರಿನಲ್ಲಿ ಕರಗುವ ಗೊಬ್ಬರಗಳಾದ ಪೊಟ್ಯಾಷಿಯಂ ನೈಟ್ರೇಟ್ ಮತ್ತು ಕ್ಯಾಲ್ಸಿಯಂ ನೈಟ್ರೇಟನ್ನು ೨ ರಿಂದ ೩ ವಾರಗಳ ಅಂತರದಲ್ಲಿ ನಾಟಿ ಮಾಡಿದ ೨ ತಿಂಗಳುಗಳ ನಂತರ ೩ ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪರಣೆ ಮಾಡಲಾಗುತ್ತದೆ. ಇದಲ್ಲದೆ ಸಿಂಪರಣೆಯಲ್ಲಿ ತರಕಾರಿ ಮಿಶ್ರಣ (ಐ.ಐ.ಎಚ್.ಅರ್. ಬೆಂಗಳೂರು ಅಭಿವೃದ್ಧಿಪಡಿಸಿರುವ)ವನ್ನು ೩ ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣಮಾಡಿ ಸೌತೆಕಾಯಿಗೆ ಸಿಂಪಡಿಸಬಹುದು.
ಸವರುವಿಕೆ ಮತ್ತು ಹಬ್ಬಿಸುವಿಕೆ: ಸೌತೆಕಾಯಿಯಲ್ಲಿ ೨ ಕಾಂಡಗಳನ್ನು ಬಿಟ್ಟು ಸವರಲಾಗುತ್ತದೆ. ಬದಿಯ ಕೊಂಬೆಗಳನ್ನು ಎರಡು ಕಾಯಿಗಳು ಬಿಟ್ಟ ನಂತರ ಕತ್ತರಿಸಿ ಹಾಕಬೇಕು.
ಕೊಯ್ಲು ಮತ್ತು ಇಳುವರಿ: ಸೌತೆಯು ನಾಟಿ ಮಾಡಿದ ೩೫ ದಿನಗಳ ನಂತರ ಕೊಯ್ಲಿಗೆ ಬರುತ್ತದೆ. ೩೦ ಟನ್ ಪ್ರತಿ ಎಕರೆಗೆ ಇಳುವರಿ ನೀಡುತ್ತದೆ.
ಸಸ್ಯ ಸಂರಕ್ಷಣೆ
ಕೆಂಪು ಕುಂಬಳ ದುಂಬಿ: ದುಂಬಿಗಳು ಎಲೆಗಳನ್ನು ತೂತು ಮಾಡಿ ತಿನ್ನುತ್ತವೆ. ಮರಿಹುಳುಗಳು ಬೇರುಗಳನ್ನು ತಿನ್ನುತ್ತವೆ. ಅಂತಹ ಬೇರುಗಳು ಕೊಳೆತಂತಾಗಿ ಗಿಡಗಳ ಬೆಳವಣ ಗೆ ಕುಂಠಿತವಾಗುತ್ತದೆ.
ಸಸಿ ಕತ್ತರಿಸುವ ಹುಳು: ಮರಿಹುಳುಗಳು ಸಸಿಗಳ ಕಾಂಡವನ್ನು ಭೂಮಿಯ ಮೇಲ್ಭಾಗದಲ್ಲಿ ಕತ್ತರಿಸುತ್ತವೆ. ಸಸಿಗಳು ನಂತರ ಸಾಯುತ್ತವೆ.
ಹಣ್ಣು ನೊಣ: ಮರಿಹುಳುಗಳು ಕಾಯಿಗಳ ಒಳಗಡೆ ಸೇರಿ ತಿನ್ನುತ್ತವೆ. ಅಂತಹ ಕಾಯಿಗಳ ಭಾಗಗಳು ಕೊಳೆಯುತ್ತವೆ.
ಎಲೆ ಸುರಂಗ ಕೀಟ: ಮರಿಹುಳುಗಳು ಎಲೆಗಳ ಪದರಗಳ ನಡುವೆ ಸೇರಿ ಹಸಿರು ಪದಾರ್ಥವನ್ನು ಕೆರೆದು ತಿನ್ನುತ್ತದೆ. ಎಲೆಗಳ ಮೇಲೆ ಬಿಳಿ ಹಾವಿನಾಕೃತಿಯ ಮಚ್ಚೆಗಳನ್ನು ಕಾಣಬಹುದು, ನಂತರ ಎಲೆಗಳು ಒಣಗುತ್ತವೆ.
ಕೆಂಪು ಕುಂಬಳ ದುಂಬಿ ಹಾನಿಯ ಲಕ್ಷಣಗಳು (ಹಾನಿ)
ನಿರ್ವಹಣೆ : ಬಿತ್ತನೆಯಾದ ೩ ವಾರಗಳ ನಂತರ ಬೆಳೆಗೆ ೪ ಗ್ರಾಂ. ಕಾರ್ಬಾರಿಲ್ ಶೇ. ೫೦. ೧ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಬೆಳೆಯಲ್ಲಿ ಕೀಟಗಳ ಬಾದೆ ಮುಂದುವರೆದರೆ ಬಿತ್ತನೆಯಾದ ೫, ೮ ಮತ್ತು ೧೧ ವಾರಗಳ ನಂತರ ೨ ಮಿ. ಲೀ. ಮೆಲಾಥಿಯಾನ್ ೫೦ ಇ.ಸಿ. ಅಥವಾ ೧ ಮಿ.ಲೀ. ಮಿಥೈಲ್ ಪ್ಯಾರಾಥಿಯನ್ ೫೦ ಇ.ಸಿ. ೧ ಲೀಟರ್ ನೀರಿನಲ್ಲಿ ಸೇರಿಸಿ ಸಿಂಪಡಿಸಬೇಕು (ಹಣ್ಣು ನೊಣಕ್ಕೆ: ಪ್ರತೀ ಲೀಟರ್ ೧೦ಗ್ರಾಂ ಸಕ್ಕರೆ/ ಬೆಲ್ಲ ಸೇರಿಸಬೇಕು).
ರೋಗಗಳು
ದುಂಡಾಣು ಸೊರಗು ರೋಗ: ಗಿಡಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಗಿಡ ಪೂರ್ತಿ ಒಣಗುತ್ತದೆ.
ನಿರ್ವಹಣೆ: ೨ ವರ್ಷಕ್ಕೊಮ್ಮೆ ಬೆಳೆ ಪರಿವರ್ತನೆ ಮಾಡಬೇಕು (ರಾಗಿ/ಮೆಕ್ಕೆಜೋಳ/ಜೋಳದೊಂದಿಗೆ) ಬಿತ್ತನೆ ಪೂರ್ವದಲ್ಲಿ ಹೆಕ್ಟೇರಿಗೆ ೧೫ ಕಿ.ಗ್ರಾಂ. ಬ್ಲೀಚಿಂಗ್ ಪುಡಿಯನ್ನು ಮಣ್ಣಿಗೆ ಸೇರಿಸಿ ನೀರು ಹಾಯಿಸಬೇಕು.
ಚಿಬ್ಬು ರೋಗ: ಎಲೆಯ ಮೇಲೆ ಮೊದಲಿಗೆ ಸಣ್ಣನೆಯ ತೇವಾಂಶಯುಕ್ತ ಚುಕ್ಕೆಗಳು ಕಾಣಿಸುತ್ತವೆ. ಆಮೇಲೆ ಕಪ್ಪನೆ ಬಣ್ಣಕ್ಕೆ ತಿರುಗುತ್ತವೆ.
ನಿರ್ವಹಣೆ: ೧ ಗ್ರಾಂ ಥೈಯೋಫೆನೇಟ್ ಮಿಥೈಲ್ ಅಥವಾ ೦.೫ ಗ್ರಾಂ ಬೆನೊಮಿಲ್ ೫೦ ಡಿ.ಪಿ. ಒಂದು ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು. ಇದೇ ಸಿಂಪರಣೆಯನ್ನು ೧೫ ದಿವಸಗಳ ನಂತರ ಪುನರಾವರ್ತಿಸಿ. ಪ್ರತಿ ಹೆಕ್ಟೇರಿಗೆ ೪೫೦ ರಿಂದ ೫೩೦ ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು.
ಬೂಜು ತುಪ್ಪಟ ರೋಗ: ಎಲೆ ಮೇಲ್ಭಾಗದಲ್ಲಿ ಕೋನಾಕಾರದ ಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಕೆಳಗಿನ ಭಾಗವು ನೇರಳೆ ಬಣ್ಣದಿಂದ ಕೂಡಿರುತ್ತದೆ. ಆಮೇಲೆ ಒಂದಕ್ಕೊಂದು ಸೇರಿಕೊಂಡು ಎಲೆಗಳು ಒಣಗುತ್ತವೆ.
ನಿರ್ವಹಣೆ: ಈ ರೋಗದ ನಿರ್ವಹಣೆಗಾಗಿ ೩ ಗ್ರಾಂ ಸಿಮಾಕ್ಸಿಲ್ (ಶೇ.೮) ಮತ್ತು ಮ್ಯಾಂಕೋಜೆಬ್ (ಶೇ.೬೮) ಶಿಲೀಂದ್ರನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ರೋಗ ಕಂಡ ಕೂಡಲೇ ಒಂದು ಸಲ ಹಾಗೂ ೧೫ ದಿನಗಳ ನಂತರ ಇನ್ನೊಂದು ಸಲ ಸಿಂಪರಣೆ ಮಾಡಬೇಕು.
ಬೂದಿ ರೋಗ: ಬೂದು ಬಣ್ಣದ ಶಿಲೀಂದ್ರದ ಬೆಳವಣಿಗೆ ಎಲೆ ಮತ್ತು ಕಾಂಡದಲ್ಲಿ ಕಾಣಿಸುತ್ತದೆ. ರೋಗದ ತೀವ್ರತೆ ಹೆಚ್ಚಾದಾಗ ಎಲೆಗಳು ಒಣಗುತ್ತವೆ.
ನಿರ್ವಹಣೆ: ೧.೦ ಗ್ರಾಂ ಕಾರ್ಬಂಡೈಜಿಮ್‌ನ್ನು ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಣೆ ಕೈಗೊಳ್ಳಬೇಕು.
ಗಂಟು ಬೇರು / ಜಂತು ರೋಗ: ರೋಗಕ್ಕೆ ತುತ್ತಾದ ಗಿಡಗಳ ಬೆಳೆವಣ ಗೆ ಕುಂಠಿತಗೊಂಡು ಹಳದಿಬಣ್ಣಕ್ಕೆ ತಿರುಗುತ್ತವೆ. ಬೇರುಗಳು ಗಂಟಿನಿಂದ ಕೂಡಿರುತ್ತವೆ.
ನಿರ್ವಹಣೆ: ಬೇವಿನ ಹಿಂಡಿ ಹಾಗೂ ಕಾಂಪೋಸ್ಟ್ ಗೊಬ್ಬರಗಳನ್ನು ಹಾಕಬೇಕು.
ಚಿತ್ರಗಳು:
ಚಿತ್ರ ೨: ಕೆಂಪು ಕುಂಬಳ ದುಂಬಿ
ಚಿತ್ರ ೩ : ಚಿಬ್ಬು ರೋಗ
ಚಿತ್ರ ೪ : ಬೂದಿ ರೋಗ
ಚಿತ್ರ ೫: ಗಂಟು ಬೇರು / ಜಂತು ರೋಗ
ಚಿತ್ರ ೬: ಹಣ್ಣು ನೊಣ
ಮಾಹಿತಿ ಸಹಕಾರ: ಮಂಜುನಾಥ್ ಜೆ ಶೆಟ್ಟಿ ಮತ್ತು ಅನಿಲ್‌ಕುಮಾರ್ ಜಿ ಎಸ್, ತೋಟಗಾರಿಕಾ ಮಹಾವಿದ್ಯಾಲಯ, ಬೆಂಗಳೂರು