ಸೌತೇಕಾಯಿ ಕೂಲರ್
ಮಧ್ಯಮ ಗಾತ್ರದ ಸೌತೇಕಾಯಿ (ಮುಳ್ಳು ಸೌತೆ) ೧, ಬೆಲ್ಲ ೧ ಕಪ್, ತೆಂಗಿನ ಕಾಯಿ ತುರಿ ೧ ಕಪ್, ಏಲಕ್ಕಿ ೩, ಸಕ್ಕರೆ ೨ ಚಮಚ.
ಸೌತೇಕಾಯಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು, ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಈ ಕತ್ತರಿಸಿದ ತುಂಡುಗಳನ್ನು ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿರಿ. ಇದನ್ನು ಒಂದು ಪಾತ್ರೆಗೆ ಹಾಕಿ. ಅದೇ ಮಿಕ್ಸಿ ಜಾರಿಗೆ ಬೆಲ್ಲವನ್ನು ಹಾಕಿ ನೀರು ಹಾಕದೇ ರುಬ್ಬಿಕೊಳ್ಳಿರಿ. ಈ ಮಿಶ್ರಣವನ್ನು ಮೊದಲು ಮಾಡಿ ಇಟ್ಟಿದ್ದ ಸೌತೇಕಾಯಿ ಮಿಶ್ರಣಕ್ಕೆ ಸೇರಿಸಿ. ನಂತರ ತೆಂಗಿನ ಕಾಯಿ ತುರಿಯನ್ನು ಬೆಲ್ಲವನ್ನು ರುಬ್ಬಿದ ಮಿಕ್ಸಿ ಜಾರಿಗೇ ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿರಿ. ಈ ರುಬ್ಬಿದ ಮಿಶ್ರಣದಿಂದ ತೆಂಗಿನ ಕಾಯಿ ಹಾಲನ್ನು ಸೋಸಿ ತೆಗೆಯಿರಿ. ಈ ಹಾಲನ್ನೂ ಮೊದಲಿನ ಬೆಲ್ಲ-ಸೌತೇಕಾಯಿ ಮಿಶ್ರಣಕ್ಕೆ ಸೇರಿಸಿ. ನಂತರ ಏಲಕ್ಕಿ ಹಾಗೂ ಸಕ್ಕರೆಯನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಿ. ಈ ಹುಡಿಯನ್ನು ಸಹ ಮೊದಲಿನ ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ಕಲಸಿ, ಬೆಲ್ಲವು ಸರಿಯಾಗಿ ಕರಗಿ ಮಿಶ್ರವಾಗುವಂತೆ ಕಲಸಿರಿ. ಈಗ ನಿಮ್ಮ ಸೌತೇಕಾಯಿ ಕೂಲರ್ ಅಥವಾ ಕುಕುಂಬರ್ ಕೂಲರ್ ತಯಾರು. ಇದನ್ನು ನೀವು ನೇರವಾಗಿ ಅಥವಾ ಐಸ್ ಸೇರಿಸಿ ತಂಪು ಮಾಡಿ ಕುಡಿಯಬಹುದು. ಬೇಸಿಗೆ ಕಾಲದಲ್ಲಿ ಇದು ಬಹಳ ಹಿತಕರವಾದ ಪಾನೀಯ. ಆರೋಗ್ಯಕ್ಕೂ ಉತ್ತಮ, ಬಾಯಾರಿಕೆಯನ್ನು ತಣಿಸಲೂ ಸ್ವಾದಿಷ್ಟ ಪಾನೀಯ.
-ವಾಣಿಶ್ರೀ ವಿನೋದ್, ಪೇರ್ಲಗುರಿ