ಸ್ಟೇಟಸ್ ಕತೆಗಳು (ಭಾಗ ೧೦೩೮)- ಪುಟ್ಟ ಹುಡುಗಿ

ಅಮ್ಮ ಏನೇನೋ ಹೇಳ್ತಾ ಇದ್ರು. ತುಂಬಾ ಚೆನ್ನಾಗಿ ವಿವರಿಸುತ್ತಿದ್ದರು. ಆದರೆ ನನಗದು ಯಾವುದು ಹೇಗೆ ಅಂತ ಅರ್ಥ ಆಗ್ತಾ ಇರಲಿಲ್ಲ. ಅಮ್ಮ ಹೇಳುವ ಬಣ್ಣ ಆಕಾರ ಇದು ಯಾವುದು ನನ್ನ ಅರಿವಿಗೆ ಬಂದಿರಲಿಲ್ಲ. ಕಾರಣ ನನಗೆ ಹುಟ್ಟಿನಿಂದಲೇ ಕಣ್ಣು ಕಾಣ್ತಾ ಇರಲಿಲ್ಲ. ನನಗೆ ಜಗತ್ತನ್ನ ತೋರಿಸುವುದಕ್ಕೆ ಅಮ್ಮ ತುಂಬಾ ಪ್ರಯತ್ನಪಟ್ಟಳು. ಅವಳು ಒಂದಷ್ಟು ಹಣ ಸಂಗ್ರಹ ಮಾಡಿ ನನ್ನ ಕಣ್ಣು ಬರೋ ಹಾಗೆ ಮಾಡುವುದಕ್ಕೆ ಹಲವು ವರ್ಷಗಳ ಪರಿಶ್ರಮದಿಂದ ಆ ದಿನ ನಾನು ಆಸ್ಪತ್ರೆಯಲ್ಲಿ ಹೋಗಿ ಮಲಗಿದ್ದೆ. ಏನಾಯ್ತು ಅಂತ ಗೊತ್ತಿಲ್ಲ ಕೆಲವು ತಿಂಗಳುಗಳ ನಂತರ ನನ್ನ ಕಣ್ಣಿನ ಪರದೆಗಳನ್ನ ಸರಿಸುವುದಕ್ಕೆ ಆರಂಭ ಮಾಡಿದ್ರು. ನಿಧಾನವಾಗಿ ರೆಪ್ಪೆಯನ್ನು ಬಿಡಿಸ್ತಾ ಹೋದ ಹಾಗೆ ಎಲ್ಲವೂ ಬದಲಾಗಿತ್ತು. ಬೆಳಕು ಕಾಣುತ್ತಿದೆ ನನ್ನ ಮುಂದೆ ಬೇರೆ ಬೇರೆ ತರಹದ ವಸ್ತುಗಳಿದ್ದಾವೆ, ಯಾರ್ಯಾರು ಎಲ್ಲ ನಿಂತುಬಿಟ್ಟಿದ್ದಾರೆ. ಅವರ ಮಾತಿನ ದನಿಯನ್ನ ಎಲ್ಲೋ ಕೇಳಿದ್ದೆ. ಅಮ್ಮನ ತೊಡೆಯ ಮೇಲೆ ಕುಳಿತು ಜಗತ್ತನ್ನು ನೋಡುವ ಅದ್ಭುತ ಸುಖವನ್ನ ಆ ಕ್ಷಣ ಅನುಭವಿಸಿದೆ. ಅಮ್ಮನ ಕಣ್ಣಲ್ಲಿ ಕಣ್ಣೀರು ನನಗೆ ಸಂಭ್ರಮದಲ್ಲಿ ಮಾತು ಹೊರಡ್ತಾ ಇಲ್ಲ. ಕತ್ತಲೆಯೇ ಬದುಕು ಅಂದುಕೊಂಡವಳಿಗೆ ಬೆಳಕು ತೋರಿದವಳು ನನ್ನಮ್ಮ. ನನಗೋಸ್ಕರ ಆಕೆ ಎಲ್ಲವನ್ನು ಕಳೆದುಕೊಂಡಿದ್ದಳು ಮನೆ ಕುಟುಂಬ ತಾನೇ ನಂಬಿಕೊಂಡಂತ ವಸ್ತುಗಳು ಯಾವುದು ಅವಳ ಬಳಿ ಇರಲಿಲ್ಲ. ನನಗೀಗ ಜಗತ್ತು ಕಾಣುವುದಕ್ಕಾರಂಭವಾಗಿದೆ ನನಗೆ ಜಗತ್ತು ತೋರಿಸಿದ ನನ್ನಮ್ಮನ ಜಗತ್ತನ್ನ ಅದ್ಬುತವಾಗಿಟ್ಟುಕೊಳ್ಳುವುದು ನಿನ್ನ ಜವಾಬ್ದಾರಿ ಹೀಗೆ ಆ ಪುಟ್ಟ ಹುಡುಗಿ ಆಸ್ಪತ್ರೆಯ ಮುಂಭಾಗದಲ್ಲಿದ್ದ ಪುಟ್ಟ ಗಣಪತಿಯ ಮುಂದೆ ನಿಂತು ಕೈಮುಗಿದು ಬೇಡುತ್ತಿದ್ದಳು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ