ಸ್ಟೇಟಸ್ ಕತೆಗಳು (ಭಾಗ ೧೦೫೯)- ಧ್ವಜ

ಸ್ಟೇಟಸ್ ಕತೆಗಳು (ಭಾಗ ೧೦೫೯)- ಧ್ವಜ

ಸಮಯವಾಯಿತೆಂದು ದೊಡ್ಡ ಮೈದಾನದ ಕಡೆಗೆ ಓಡುತ್ತಿವೆ ಪುಟ್ಟ ಕಾಲುಗಳು. ಮೈತುಂಬ ಬಣ್ಣ ಬಣ್ಣದ ಆಭರಣಗಳನ್ನ ಧರಿಸಿ, ಕಿವಿಯೋಲೆಗಳನ್ನ ನೇತುಹಾಕಿ, ಕೈಯೆಲ್ಲೊಂದು ಪುಟ್ಟ ಬಾವುಟವನ್ನು ಹಿಡಿದು ಮುಖದಲ್ಲಿ ನಗುವ ತುಂಬಿ ಮೈದಾನದ ಕಡೆಗೆ ಧಾವಿಸುತ್ತಿದ್ದಾವೆ. ಬಾನೆತ್ತರದಲ್ಲಿ ಹಾರುವ ಧ್ವಜದ ಮುಂದೆ ಅವರ ಪುಟ್ಟ ನೃತ್ಯವಿದೆ. ಅದು ಜಗತ್ತಿನ ಬೇರೆ ಬೇರೆ ಕಡೆ ತಲುಪುತ್ತದೆ. ಹಲವು ದಿನಗಳ ಅಭ್ಯಾಸವು ನಡೆದಿತ್ತು. ಅವರು ಓಡಿ ಬರುತ್ತಿರುವ ರಸ್ತೆಯಲ್ಲಿ ಅವರದೇ ವಯಸ್ಸಿನ ಇನ್ನೊಂದಷ್ಟು ಮಕ್ಕಳು ಪುಟ್ಟ ಬಾವುಟವನ್ನು ಹಿಡಿದು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಅವರಿಗೂ ಆ ಬಾವುಟವನ್ನು ಕಂಡರೆ ಖುಷಿ. ಬೇರೆಯವರ ಬಳಿಗೆ ಅದು ಹೆಚ್ಚು ಹೆಚ್ಚು ತಲುಪಿದಷ್ಟು ಅವರ ಮುಖದಲ್ಲಿ ನಗುವರಳುತ್ತಿದೆ. ಅವರಿಗೆ ದೇಶಪ್ರೇಮ ಸ್ವಾತಂತ್ರ್ಯ ಇದ್ಯಾವುದರ ಯೋಚನೆಯು ಇಲ್ಲ. ಮೂರು ಬಣ್ಣ ಹೊಂದಿರುವ ಬಾವುಟ ಮಾರಾಟವಾಗಬೇಕು. ಉಳಿದ ಒಂದಷ್ಟು ಕೈಯಲ್ಲಿ ಹಿಡಿದು ಅಂಗಳದ ತುಂಬೆಲ್ಲ ಓಡಾಡುತ್ತಿರುವ ಪುಟ್ಟ ಮಕ್ಕಳ ಸಂಭ್ರಮವನ್ನು ದೂರದಲ್ಲಿ ನೋಡಿ ಕಣ್ಣು ತುಂಬಿಕೊಳ್ಳುತ್ತಿದ್ದಾರೆ. ಅವರಿಗೂ ಮುಂದೊಂದು ದಿನ ಬರುತ್ತದೆ. ಈ ಹಾರುತ್ತಿರುವ ಧ್ವಜ ಅವರ ಕೆಲಸವನ್ನ ಕಂಡು ಹೆಮ್ಮೆಪಡುವ ದಿನ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ