ಸ್ಟೇಟಸ್ ಕತೆಗಳು (ಭಾಗ ೧೦೭೬)- ಪ್ರೀತಿ
ಪ್ರೀತಿ ಇದ್ದರೆ ಅಷ್ಟೇ ಬದುಕು ಮುಂದೆ ಸಾಗುವುದಕ್ಕೆ ಸಾಧ್ಯ. ಪ್ರತಿಯೊಂದು ಕೆಲಸದಲ್ಲೂ ಮನಃಸ್ಪೂರ್ತಿಯಾಗಿ ಪ್ರೀತಿ ಇದ್ರೆ ಆ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮುತುವರ್ಜಿಯಿಂದ ಎಲ್ಲರೂ ಒಪ್ಪುವ ಹಾಗೆ ಮಾಡುವುದಕ್ಕೆ ಸಾಧ್ಯ ಇದೆ. ಮೊದಲು ನಾವು ಕೆಲಸವನ್ನು ಪ್ರೀತಿಸಬೇಕು. ಆಗ ಆ ಕೆಲಸವನ್ನು ಇನ್ನೊಂದಷ್ಟು ನೂತನವಾಗಿ ಹೇಗೆ ಮಾಡಬಹುದು ಅನ್ನುವ ಯೋಚನೆ ನಮ್ಮ ಮನಸ್ಸಿನೊಳಗೆ ಮೂಡುತ್ತದೆ. ಕೆಲಸ ಮಾಡಬೇಕಲ್ಲ ಅನ್ನುವ ಕಾರಣಕ್ಕೆ ಮಾಡುವ ಕೆಲಸ ಅದು ಯಾವುದೇ ರೀತಿಯ ಅದ್ಭುತಗಳನ್ನ ಸೃಷ್ಟಿಸುವುದಿಲ್ಲ. ನಮ್ಮದು ಅಂದುಕೊಂಡು ಒಳಗೆ ಕುಳಿತ ಆತ್ಮನಿಗೆ ಒಪ್ಪಿತವಾಗುವ ಹಾಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸಗಳು ಖಂಡಿತವಾಗಿಯೂ ನಿನ್ನನ್ನ ಅದ್ಭುತವಾದ ಗುರಿಯ ಕಡೆಗೆ ಕೊಂಡೊಯ್ಯುತ್ತದೆ. ಇಷ್ಟೆಲ್ಲಾ ಗಟ್ಟಿ ಮಾತುಗಳು ಅವನಿಗೆ ಬೇಕಿತ್ತು. ಕಾರಣ ಆತ ಕೆಲಸ ಮಾಡುತ್ತಿದ್ದಾಗ ಸುತ್ತಮುತ್ತ ತನ್ನಂತವರು ಯಾರು ಕಾಣಲೇ ಇಲ್ಲ. ಈ ಕೆಲಸವನ್ನ ಮುಂದುವರಿಸಬೇಕೋ ನಿಲ್ಲಿಸಬೇಕೋ ಅನ್ನುವ ಯೋಚನೆಯಲ್ಲಿದ್ದ. ಇದನ್ನು ಕಂಡ ಆತನನ್ನು ಪ್ರತಿದಿನ ನೋಡ್ತಾ ಇದ್ದ ಹಿರಿಯರ ಒಬ್ಬರು ಈ ಮಾತನ್ನ ಹೇಳಿ ಬೆನ್ನು ತಟ್ಟಿ ಮುಂದೆ ಕಳಿಸಿದ್ರು .ಆತನಿಗೆ ತನ್ನ ಪ್ರೀತಿಯ ಕೆಲಸದ ಕಡೆಗೆ ಇನ್ನೊಂದಷ್ಟು ಹೆಚ್ಚು ಶ್ರದ್ಧೆ ವಹಿಸಿ ವಹಿಸುವುದಕ್ಕೆ ಅವಕಾಶ ಆಯಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ