ಸ್ಟೇಟಸ್ ಕತೆಗಳು (ಭಾಗ ೧೦೭೮)- ಅರ್ಥ
ಒಬ್ಬನೇ ಕುಳಿತಿದ್ದಾಗ ಗಣೇಶ ಮಾತನಾಡಿದ. ನೋಡು ಬದುಕೇ ಹೀಗೆ. ಸಂಭ್ರಮ ಕೆಲವು ದಿನ. ನಿನ್ನ ಜೀವನದ ಅದ್ಭುತ ಕ್ಷಣಗಳನ್ನು ಆ ಕ್ಷಣ ಇದ್ದು ಅನುಭವಿಸಿ ಹೊರಟು ಹೋಗಬೇಕು, ಅಂದರೆ ನಾನು ನೀಡಿರುವ ಈ ಬದುಕನ್ನ ನೀನು ಸಂಭ್ರಮದಿಂದ ಮಹೋತ್ಸವದ ಥರ ಆಚರಿಸಬೇಕು. ನಿನ್ನ ಆಸೆಗಳನ್ನ ಈಡೇರಿಸುವುದರ ಕಡೆಗೆ ಪ್ರಯತ್ನ ಪಡಬೇಕು, ನಿನ್ನನ್ನ ಹೊತ್ತು ಎತ್ತಿ ಮೆರೆಸಿ ಕೊಂಡಾಡಿ ಸಂಭ್ರಮದಿಂದ ಕಳಿಸಿಕೊಡುತ್ತಾರೆ. ನನ್ನನ್ನು ಸ್ವಾಗತಿಸಿ ಪ್ರತಿಷ್ಠಾಪನೆ ಮಾಡುವ ಸಂದರ್ಭದಲ್ಲಿರುವ ಜನಕ್ಕಿಂತ ಹೊರಗಡೆ ಕಳಿಸುವಾಗ ಹೆಚ್ಚು ಜನ ಸೇರಿರುತ್ತಾರೆ. ಪ್ರತಿಯೊಬ್ಬರಿಗೂ ಇನ್ನೊಬ್ಬರನ್ನು ಕಳಿಸುವುದು ಅಂದ್ರೆ ಸಂಭ್ರಮ. ನಿನ್ನನ್ನು ಹಾಗೆ ಇರುವ ಜಾಗದಿಂದ ಇನ್ನೊಂದು ಕಡೆ ಕಳುಹಿಸುವುದಕ್ಕೆ ಕಾಯ್ತಾ ಇರ್ತಾರೆ. ನೀನು ಇದ್ದಲ್ಲಿ ಮೆರೆದ ಹಾಗೆ ಹೋಗುವಾಗಲೂ ಮೆರವಣಿಗೆ ನಡೆಸಬೇಕು. ನಿನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬೇಕು. ನಿನ್ನ ಕಾರಣದಿಂದ ಜನರಲ್ಲೊಂದಷ್ಟು ಸಂಘಟನೆ ಬದಲಾವಣೆ ರೂಪಿತವಾಗಬೇಕು. ಅರ್ಥ ಆಯ್ತು ತಾನೇ. ನನ್ನದು ಹೊರಡುವ ದಿನ ಆಗಿದೆ ನಾನು ಹೊರಡುವನಿದ್ದೇನೆ. ನೀನು ನಿನ್ನ ಮನಸ್ಸಿನ ಇಷ್ಟಾರ್ಥಗಳನ್ನು ನೆರವೇರಿಸುವುದರ ಕಡೆಗೆ ದೊಡ್ಡ ಹೆಜ್ಜೆಗಳನ್ನು ಇಟ್ಟು ಹೊರಟುಬಿಡು. ಗಣಪತಿಯ ಮೌನದ ಮಾತು ಹೀಗಿರಬಹುದು ಅಂತ ನಾನರ್ಥೈಸಿಕೊಂಡು ಅಲ್ಲಿಂದ ಹೊರಟುಬಿಟ್ಟೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ