ಸ್ಟೇಟಸ್ ಕತೆಗಳು (ಭಾಗ ೧೧೦೫)- ಆಲಾಪ

ಸ್ಟೇಟಸ್ ಕತೆಗಳು (ಭಾಗ ೧೧೦೫)- ಆಲಾಪ

ನಾವು ಇಲ್ಲೇಕೆ ಬಂದಿದ್ದೇವೆ ಅನ್ನೋದು ಗೊತ್ತಿಲ್ಲ. ನಮ್ಮನ್ನ ಇವರು ಏನು ಮಾಡಬೇಕಂತ ಇದ್ದಾರೆ ಅನ್ನೋದು ಗೊತ್ತಿಲ್ಲ . ನಮ್ಮ ಬದುಕಿಗೆ ಯಾವ ರೀತಿ ಅರ್ಥವೂ ಸಿಕ್ತಾ ಇಲ್ಲ. ತಿನ್ನುವುದಕ್ಕೆ ಕುಡಿಯುವುದಕ್ಕೆ ಅಲ್ಲೇ ಇಡುತ್ತಾರೆ. ಹೆಚ್ಚು ದೂರ ಚಲಿಸುವಂತಿಲ್ಲ. ಅಲ್ಲೇ ಓಡಾಡ್ತಾ ಇರಬೇಕು. ಇದೊಂದು ತುಂಬಾ ಜನ ಸೇರುವ ಜಾಗ, ಬಂದವರೆಲ್ಲ ನಮ್ಮನ್ನ ನೋಡುತ್ತಾ ನೋಡುತ್ತಾ ಮುಂದುವರಿಯುತ್ತಿದ್ದಾರೆ. ನಮ್ಮ ಕುರಿತು ಏನೇನೋ ಮಾತನಾಡುತ್ತಿದ್ದಾರೆ. ಆದರೆ ನಮಗೆ ಆ ಪರಿಸ್ಥಿತಿಯಲ್ಲಿ ನೋವಿನಿಂದ ಕಿರುಚಿದರು ಕೂಡ ಅವರದನ್ನ ಸಂಭ್ರಮ ಎಂದುಕೊಳ್ಳುತ್ತಾರೆ .ಒಟ್ಟಿನಲ್ಲಿ ಈ ಬಂದಿಯಾಗಿರುವ ಬದುಕು ನಮಗೆ ಅರ್ಥವಾಗಿಲ್ಲ. ನಮ್ಮಂತೆ ಹಲವಾರು ಬೇರೆ ಬಣ್ಣದವರು ಸುತ್ತಮುತ್ತ ಹಾರಾಡ್ತಾರೆ ಓಡಾಡ್ತಾರೆ ಖುಷಿಯಿಂದ ಮೇಲೆ ಕೆಳಗೆ ಕುಣಿದಾಡುತ್ತಾರೆ .ಆದರೆ ನಾವು ಸ್ವಲ್ಪ ಹೆಚ್ಚು ಬಣ್ಣ ಹೊಂದಿದ್ದೇವೆ ನೋಡುವುದಕ್ಕೆ ಚೆನ್ನಾಗಿದ್ದೇವೆ ಅನ್ನುವ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದೇವೆ. ಸಣ್ಣವರಾಗಿರುವಾಗ ಈ ಸೌಂದರ್ಯ ನಮಗೆ ತುಂಬಾ ಖುಷಿ ಕೊಟ್ಟಿತ್ತು ಆದರೆ ಈಗ ತುಂಬಾ ನೋವು ಕೊಡ್ತಾ ಇದೆ. ಸೌಂದರ್ಯ ಹೊಂದಿರುವುದು ನಮ್ಮ ತಪ್ಪೋ. ನಮ್ಮ ಸೌಂದರ್ಯವನ್ನು ಬಳಸಿಕೊಳ್ಳುತ್ತಾ ಇರೋ ಮನುಷ್ಯರ ತಪ್ಪೋ ಗೊತ್ತಾಗ್ತಾ ಇಲ್ಲ. ಈ ನಾಲ್ಕು ಗೋಡೆಗಳ ಸರಳಿನೊಳಗಿಂದ ಮುಗಿಲೇತ್ತರದ ಆಕಾಶವನ್ನು ಕಣ್ತುಂಬಿಸಿಕೊಳ್ಳುವುದೇ ಜೀವನವಾಗಿ ಉಳಿದುಬಿಡುತ್ತೋ ಅನ್ನುವ ಭಯ ಕಾಡುತ್ತಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ