ಸ್ಟೇಟಸ್ ಕತೆಗಳು (ಭಾಗ ೧೧೨೦)- ಬಲೆ

ಸ್ಟೇಟಸ್ ಕತೆಗಳು (ಭಾಗ ೧೧೨೦)- ಬಲೆ

ಅದೊಂದು ಪುಟ್ಟ ಕೋಣೆ. ಆ ಕೊಣೆಯೊಳಗಡೆ ಒಂದು ಮೂಲೆಯಲ್ಲಿ ಆತ ಕುಳಿತಿದ್ದಾನೆ. ಆ ಕೋಣೆಯಿಂದ ಹೊರಬರಲಾಗುತ್ತಿಲ್ಲ ಎಂದು ಚಡಪಡಿಸುತ್ತಿದ್ದಾನೆ. ಹೊರಗೆ ನಿಂತವರು ಬಾಗಿಲು ತೆಗೆಯುತ್ತೇನೆ ಎಂದರು ಆತ ಒಂದು ಹೆಜ್ಜೆ ಮುಂದಡಿ ಇಡುತ್ತಿಲ್ಲ. ಆತನ ಸುತ್ತ ಆತನೇ ಬಣ್ಣ ಬಣ್ಣದ ಪೆನ್ಸಿಲ್ ಗಳನ್ನು ಹಿಡಿದುಕೊಂಡು ವಿವಿಧ ರೀತಿಯ ಚಿತ್ರಗಳನ್ನು ಬಿಡಿಸಿದ್ದಾನೆ. ದೂರದಿಂದ ನೋಡುವವರಿಗೆ ಅದು ಆತನನ್ನು ಬಂಧಿಸಿದಂತೆ ಕಾಣುತ್ತಿದೆ. ಆತನೇ ಬಿಡಿಸಿದ ಚಿತ್ರವಾದ ಕಾರಣ ಅವೆಲ್ಲವನ್ನ ತೊಡೆದುಹಾಕಿ ಅಲ್ಲಿಂದ ಆತ ಮುಂದೆ ಹೆಜ್ಜೆ ಇಡಬಹುದು ಆದರೆ ಆತನಿಗೆ ಭಯ ಕಾಡ್ತಾ ಇದೆ .ಯಾವುದೋ ಒಂದು ಅವ್ಯಕ್ತವಾದ ಬಲೆ ಒಳಗೆ ಸಿಲುಕಿದಂತೆ ಆತ ಭಯಪಡುತ್ತಿದ್ದಾನೆ, ಬೆವರುತ್ತಿದ್ದಾನೆ, ಹೆದರುತ್ತಿದ್ದಾನೆ. ತನ್ನಿಂದ ಹೊರಬರಲು ಸಾಧ್ಯವೇ ಇಲ್ಲವೆಂದು ಕುಸಿದು ಕುಳಿತಿದ್ದಾನೆ ಕಣ್ಣೀರುಳಿಸುತ್ತಾ ತನ್ನ ತಪ್ಪಿಗೆ ತಾನೇ ಪಶ್ಚಾತಾಪ ಪಡುತ್ತಿದ್ದಾನೆ. ಅಲ್ಲಿಂದ ಹೊರಬರುವ ಪ್ರಯತ್ನವನ್ನು ಪಡ್ತಾ ಇಲ್ಲ. ಸಾಧ್ಯವಿದ್ದರೂ ಕೂಡ ಮೌನವಾಗಿದ್ದುಕೊಂಡು ತನ್ನನ್ನ ಶಪಿಸಿಕೊಂಡು ತನ್ನ ಕೊನೆಯ ಕ್ಷಣಗಳಿಗೆ ಎದುರು ನೋಡುತ್ತಿದ್ದಾನೆ. ಇದನೊಮ್ಮೆ ನಮ್ಮ ಬದುಕಿಗೂ ಅನ್ವಯಿಸಿ ನೋಡಿದರೆ ಒಳಿತೇನೋ ಅನ್ನಿಸ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ