ಸ್ಟೇಟಸ್ ಕತೆಗಳು (ಭಾಗ ೧೧೭೧) - ಒಮ್ಮೆ ಯೋಚಿಸಿ

ಸ್ಟೇಟಸ್ ಕತೆಗಳು (ಭಾಗ ೧೧೭೧) - ಒಮ್ಮೆ ಯೋಚಿಸಿ

ಪತ್ರಿಕೆಗಳಲ್ಲಿ ದೊಡ್ಡದಾಗಿ ಸುದ್ದಿಯಾಗಿದೆ, ಕಾಡಿನಲ್ಲಿ ಬಿಳಿ ಹುಲಿಗಳು ಇನ್ನು ಕೇವಲ ಎರಡೇ ಉಳಿದಿವೆ. ನಾವು ಅವುಗಳನ್ನ ರಕ್ಷಿಸಬೇಕು, ಅದಕ್ಕಾಗಿ ಹೋರಾಟಗಳಾದವು, ಜಾಗೃತಿಯ ಸಂದೇಶದ ರಥಗಳನ್ನ ಎಳೆಯಲಾಯಿತು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಾಷಣಗಳಾದವು ಡಾಕ್ಯುಮೆಂಟರಿ ಚಲನಚಿತ್ರಗಳಾದವು, ಆದರೆ ಇದ್ಯಾವುದೂ ಕೂಡ ಉಳಿದಿರುವ ಆ ಹುಲಿಗೆ ತಿಳಿದೇ ಇಲ್ಲ. ಹೆಚ್ಚೇಕೆ ಆ ಹುಲಿಗೆ ತನ್ನನ್ನು ಹುಲಿ ಎಂದು ಕರೆಯುತ್ತಿದ್ದಾರೆ ಅನ್ನೋದು ಕೂಡ ತಿಳಿದಿಲ್ಲ. ಪ್ರತಿದಿನದ ಬದುಕಂತೆ ಬೆಳಗ್ಗೆ ಎದ್ದು ತನ್ನ ದೈನಂದಿನ ಕೆಲಸವನ್ನ ಪೂರೈಸಿಕೊಂಡು ಆಹಾರವನ್ನು ಬೇಟೆಯಾಡಿ ವಿಶ್ರಾಂತಿ ಪಡೆದು ತನ್ನ ಕೌಟುಂಬಿಕ ಜೀವನವನ್ನು ನಡೆಸಿಕೊಂಡು ಬದುಕುತ್ತಿದೆ. ಆ ಹುಲಿಗೆ ಸುತ್ತಮುತ್ತಲಿನ ಸಮಾಜದಲ್ಲಾಗುತ್ತಿರುವ ಯಾವುದೇ ಕಾರ್ಯಕ್ರಮದ ಅರಿವು ಇಲ್ಲ. ಹುಲಿ ಅದರ ಪಾಡಿಗೆ ಅದು ಬದುಕುತಿದೆ. ಸಮಾಜದ ಪ್ರತಿಸ್ಪಂದನೆ ಯಾಕೆ ಹೇಗೆ ಏನು ಎಲ್ಲಿ ಅನ್ನೋದನ್ನ ಯಾವುದರ ಗೊಡವೆ ಇಲ್ಲದೆ ಅದು ಜೀವಿಸುತ್ತಿದೆ. ನೀನು ಹಾಗೆ ಇದ್ದುಬಿಡು. ಅವರೇನಂದುಕೊಳ್ಳುತ್ತಾರೆ ಅವರೇನು ಹೇಳ್ತಾರೆ, ಯಾಕೆ ಹೀಗೆ ಎಲ್ಲ ಪ್ರಶ್ನೆಗಳನ್ನು ತೊರೆದು ನಿನ್ನ ಬದುಕನ್ನ ಬದುಕಿಸು. ನಿನಗೆ ಅವರಿಟ್ಟಿರುವ ಹೆಸರೇನು ಅವರು ನಿನಗೆ ಏನು ಸ್ಥಾನ ಕೊಟ್ಟಿದ್ದಾರೆ ಎಲ್ಲ ಪ್ರಶ್ನೆಗಳನ್ನ ದೂರ ಸರಿಸಿ ನಿನ್ನ ಬದುಕನ್ನ ಅದ್ಭುತವಾಗಿ ಇರುವಷ್ಟು ಸಮಯ ನೆಮ್ಮದಿಯಿಂದ ಜೀವಿಸು... ಅರ್ಥವಾಯಿತಾ.‌ ಆತನ ಸ್ವರ ಗಂಭೀರವಾಗಿದ್ದ ಕಾರಣವೋ ಏನೋ ನಾನು ಒಪ್ಪಿಕೊಂಡೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ