ಸ್ಟೇಟಸ್ ಕತೆಗಳು (ಭಾಗ ೧೧೭೬) - ದರ್ಶನ

ಯಾಕೆ ಹೀಗೆ ಅವಳಿಗೆ ತಿಳಿದಿಲ್ಲ. ಅಪ್ಪನ ಜೊತೆಗೆ ದೇವರನ್ನ ಹತ್ತಿರದಿಂದ ನೋಡುವುದ್ದಕ್ಕೆ ಬಂದವಳು. ಹಲವು ಗಂಟೆಗಳ ಸರತಿ ಸಾಲಿನಲ್ಲಿ ನಿಂತು ನೆಮ್ಮದಿಯ ದರ್ಶನಕ್ಜೆ ಊಟ, ನೀರು ನಿದ್ದೆ ಬಿಟ್ಟು ಕಾದವಳು. ಭಗವಂತನ ಹತ್ತಿರ ಬಂದ ಹಾಗೆ ಅವಳಲ್ಲಿ ಪುಳಕ. ರೋಮಾಂಚನದ ಕ್ಷಣಕ್ಕೆ ಕಾಯುತ್ತಿದ್ದಾಳೆ. ಹತ್ತಿರ ತಲುಪಿ ಕಣ್ತುಂಬಿಕೊಳ್ಳಬೇಕು ನಿರಾಕಾರನ ಪುಟ್ಟ ಆಕಾರವನ್ನ, ಮುದ್ಸು ಮೊಗವನ್ನ ಅನ್ನುವಷ್ಟರಲ್ಲಿ ಹತ್ತಿರ ನಿಂತಿದ್ದವರು ತಳ್ಲಿಯೇ ಬಿಟ್ಟರು. ತಳ್ಳುವುದಕ್ಕೆ ಅಲ್ಲಿ ಸಂಬಳ ನೀಡಿ ಜನ ನಿಲ್ಲಿಸಿದ್ದಾರೆ. ಆಕೆ ಬದಿಗೆ ಸರಿದು ಭಗವಂತನ ನೋಡಿ ಕಣ್ಣೀರು ಇಳಿಸಿ ಬೇಡುತ್ತಿದ್ದಾಳೆ. ಅಪ್ಪಾ ಇದ್ದಾವ ನ್ಯಾಯ. ಕಾಲವನ್ನ ಸರಿಸಿ ಕಾದವರನ್ನ ಬದಿಗೆ ಸರಿಸುತ್ತಾರೆ, ಅದ್ಯಾರೋ ದುಡ್ಡು ತುಂಬಿದವರು, ಚಲನಚಿತ್ರ ನಟ ನಟಿಯರು, ರಾಜಕೀಯ ನಾಯಕರು ಇವರಿಗೆ ದೇವರನ್ನೇ ಕಾಯಿಸುತ್ತಾರೆ. ಸಾಲುಗಳು ಬದಿಗೆ ಸರಿದು ದೊಡ್ಡ ಬಾಗಿಲು ತೆರದು ಭಗವಂತನನ್ನೇ ಮಾರಾಟ ಕೇಂದ್ರವಾಗಿಸುತ್ತಾರೆ. ಇದು ಸರಿಯೇ ಅಪ್ಪ. ಅಪ್ಪನ ಉತ್ತರ ಹೀಗಿತ್ತು, ಮಗಾ ಇಲ್ಲಿ ನಾವು ದರ್ಶನಕ್ಕೆ ಬಂದದ್ದಲ್ಲ, ಭಗವಂತನೇ ನಮ್ಮ ದರ್ಶನ ಮಾಡೋದು ಆಯ್ತಾ... ಅವನು ಗಮನಿಸುತ್ತಾನೆ...ನಡೀ..
ಅವಳ ಪ್ರಶ್ನೆಗಳು ಹಾಗೇ ಉಳಿದವು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ