ಸ್ಟೇಟಸ್ ಕತೆಗಳು (ಭಾಗ ೧೨೦೦) - ಬರವಣಿಗೆ
ಅವನು ಬರೆಯುತ್ತಿದ್ದಾನೆ. ಬೆಳಗ್ಗೆ ಸೂರ್ಯ ಹುಟ್ಟುವಾಗ ಅಲ್ಲಿ ಕುಳಿತು ಬರೆಯೋದಕ್ಕೆ ಆರಂಭ ಮಾಡಿದವ ಸೂರ್ಯ ನೆತ್ತಿಯ ಮೇಲೆ ಬಂದು ತನ್ನ ಪ್ರಖರವಾದ ಬಿಸಿಲನ್ನ ನೆಲಕ್ಕೆ ಬಡಿದಪ್ಪಳಿಸಿದಾಗಲೂ ಆತ ಅಲ್ಲಿಂದ ಏಳುತ್ತಿಲ್ಲ. ಸೂರ್ಯ ಸಂಜೆ ತನ್ನ ಮನೆ ಕಡೆ ಹೊರಟಾಗಲು ಆತ ಬರೆಯುತ್ತಲೇ ಇದ್ದಾನೆ. ಹಿಡಿದ ಪುಸ್ತಕದ ಪುಟಗಳು ಬದಲಾಗಿವೆ. ಬರೆಯುತ್ತಿದ್ದ ಪೆನ್ನಿನ ಶಾಯಿ ಖಾಲಿಯಾಗಿದೆ ಆದರೂ ಆತ ಬರೆಯುತ್ತಲೇ ಇದ್ದಾನೆ. ಸ್ವಾಸ್ಥ್ಯ ಕಳೆದುಕೊಂಡ ಮನಸ್ಸು, ನೀರೇ ಕಾಣದ ದೇಹ, ಕಲ್ಮಶವಾಗುವುದಕ್ಕೆ ಸ್ಥಳವೇ ಇಲ್ಲದಂತಹ ಬಟ್ಟೆ ಧರಿಸಿದ್ದರೂ ಬರೆಯುತ್ತಿದ್ದಾನೆ. ಬಿಸಿಲಿನ ಬೇಗೆಗೆ ಬೆವರು ಇಳಿಯುತ್ತಿದ್ದರೂ ಬರೆಯುತ್ತಿದ್ದಾನೆ. ಭಗವಂತ ಬರೆದ ಹಣೆಬರಹದಲ್ಲಿ ಏನಿದೆಯೋ ಗೊತ್ತಿಲ್ಲ ಅದರ ಕಾರಣಕ್ಕಾಗಿ ಈತ ಬರೆಯುತ್ತಿದ್ದಾನೋ ಅದು ತಿಳಿದಿಲ್ಲ. ಮನೆಯವರೆಲ್ಲರಿಂದ ತೊರೆದು ಬಂದಿದ್ದಾನೋ ಅಥವಾ ಅವರು ತುಳಿದು ಹಾಕಿದ್ದಾರೋ ಅದು ತಿಳಿಯುತ್ತಿಲ್ಲ. ಆತ ಬರೆದದ್ದನ್ನು ನಮಗೆ ಯಾರಿಗೂ ಓದೋದಕ್ಕೂ ಸಾಧ್ಯವಿಲ್ಲ. ಆದರೆ ಆತನಿಗೆ ಅರ್ಥವಾಗುತ್ತಿದೆ ಆತನ ಭಾವನೆಗಳೆಲ್ಲವೂ ಕಣ್ಣೀರ ಮೂಲಕ ಹೊರ ಬರುತ್ತಿದೆ. ಆತ ಬರೆಯುತ್ತಿದ್ದಾನೆ. ತನ್ನ ಜೀವನದ ಎಲ್ಲ ಕಥೆಗಳನ್ನ ಬರೆದು ಪುಸ್ತಕವನ್ನು ಬದಿಗಿಟ್ಟು ಸೂರ್ಯ ಮುಳುಗುವುದನ್ನು ನೋಡಿ ಹೊರಟಿದ್ದಾನೆ. ಪುಟ ಎಷ್ಟೇ ಬಿಡಿಸಿದರು ಆತನ ಜೀವನದ ಕಥೆ ಯಾರಿಗೂ ಅರ್ಥವಾಗಿಲ್ಲ. ನೋಡುವ ಒಂದೊಂದು ಕಣ್ಣುಗಳು ಒಂದೊಂದು ಅರ್ಥವನ್ನು ಪರಿಭಾವಿಸಿ ಅವರವರ ಮನೆಯ ದಾರಿ ಹಿಡಿದಿದ್ದಾರೆ... ಆತ ನಡೆಯುತ್ತಿದ್ದಾನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ