ಸ್ಟೇಟಸ್ ಕತೆಗಳು (ಭಾಗ ೧೨೩೦) - ಕಾಯುವಿಕೆ

ಸ್ಟೇಟಸ್ ಕತೆಗಳು (ಭಾಗ ೧೨೩೦) - ಕಾಯುವಿಕೆ

ಮಣ್ಣನ್ನ ಸಾಲು ಮಾಡಿ ತರಕಾರಿ ಗಿಡವನ್ನು ಬೆಳೆಸಬೇಕು ಅನ್ನುವ ಯೋಚನೆ ಇಟ್ಟುಕೊಂಡು ಬೇರೆ ಬೇರೆ ತರಕಾರಿ ಬೀಜಗಳನ್ನ ಹಾಕಿದ್ದೆ. ಬೀಜಗಳು ಮೇಲೆ ಬಂದು ದೊಡ್ಡ ಗಿಡಗಳಾಗಿ ಬೆಳೆದು ವಿವಿಧ ತರಕಾರಿಗಳನ್ನ ನೋಡುವ ಖುಷಿಯನ್ನ ಅನುಭವಿಸಬೇಕು ಅನ್ನೋದು ನನ್ನ ಆಸೆ. ಪ್ರತಿದಿನ ಬೆಳಗ್ಗೆ ಅದಕ್ಕೆ ನೀರುಣಿಸುವ ಕೆಲಸವನ್ನು ಮಾಡ್ತಾ ಇದ್ದೆ. ವಾರಗಳು ಎರಡು ದಾಟಿ ಮೂರು ವಾರ ಹತ್ತಿರವಾದರೂ ಕೂಡ ಒಂದು ಸಣ್ಣ ಮೊಳಕೆಯೂ ಕಾಣಲೇ ಇಲ್ಲ. ತುಂಬಾ ನೋವಾಯ್ತು ಇಷ್ಟು ಪರಿಶ್ರಮಕ್ಕೆ ಬೆಲೆ ಸಿಕ್ಕಿಲ್ವಲ್ಲ ಅನ್ನೋದು ವ್ಯಥೆಯಾಯಿತು. ನೀರು ಹಾಕುವ ಕೆಲಸವನ್ನು ಮುಂದುವರಿಸಿದ್ದೆ. ನೀರು ಉಣಿಸುವಾಗ ಅಷ್ಟೇನು ಮನಸಲ್ಲಿ ಉತ್ಸಾಹ ಇರಲಿಲ್ಲ. ಒಂದು ದಿನ ಸಣ್ಣ ಚಿಗುರನ್ನ ನೋಡಿದಾಗ ನೀರುಣಿಸುವ ಕೆಲಸ ಮತ್ತಷ್ಟು ಹೆಚ್ಚಾಯಿತು. ಯಾವುದೋ ಒಂದು ತರಕಾರಿ ಗಿಡ ನಿಧಾನವಾಗಿ ಬೆಳೆಯುವುದಕ್ಕೆ ಆರಂಭವಾಯಿತು. ನೀರು ಹೆಚ್ಚು ಹೆಚ್ಚಾಗಿ ನೀಡೋದಕ್ಕೆ ಆರಂಭ ಮಾಡಿದೆ. ಉಳಿದ ಯಾವ ಬೀಜದ ಕಡೆಗೂ ಗಮನವನ್ನು ಹರಿಸಲಿಲ್ಲ. ಪಕ್ಕದಲ್ಲಿ ಬೇರೆ ಯಾವುದಾದರೂ ಗಿಡ ನೆಡುವ ಅನ್ನುವ ಕಾರಣಕ್ಕೆ ಎಲ್ಲವನ್ನು ಅಗೆದು ತೆಗೆದಾಗ ಸಣ್ಣ ಚಿಗುರೊಡೆಯುತ್ತಿದ್ದ ಬೀಜಗಳೆಲ್ಲವೂ ಒಣಗಿದ್ದವು. ನಾನು‌ ನೀರುಣಿಸದೆ ಎಲ್ಲವೂ ಸತ್ತಿದ್ದವು.  ನೀರುಣಿಸುವ ಕೆಲಸವು ನಮ್ಮದು, ಫಲ ಖಂಡಿತವಾಗಿಯೂ ದೊರೆಯುತ್ತದೆ ಕಾಯಬೇಕು.... ಅರ್ಥವಾಯಿತು ತಾನೆ...ಅಪ್ಪನ ಮಾತು ಗಟ್ಟಿಯಾಗಿತ್ತು

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ