ಸ್ಟೇಟಸ್ ಕತೆಗಳು (ಭಾಗ ೧೨೩೧) - ನೋವು ಕೇಳಿ

ಸ್ಟೇಟಸ್ ಕತೆಗಳು (ಭಾಗ ೧೨೩೧) - ನೋವು ಕೇಳಿ

ನನಗೆ ಬೇರೆ ಅಪ್ಪ ಬೇಕು. ನನ್ನ ಅಪ್ಪ ಒಳ್ಳೆಯವರಲ್ಲ. ಅವರಿಗೂ ನಮ್ಮೂರಲ್ಲಿ ಯಾರೂ ಗೌರವ ಕೊಡೋದಿಲ್ಲ. ಎಲ್ಲರೂ ಹಿಯಾಳಿಸುವವರೇ, ನನಗೆ ಬೇರೆ ಅಪ್ಪ ಬೇಕು. ನನ್ನೆಲ್ಲಾ ಗೆಳೆಯರಂತೆ ನನ್ನ ಅಪ್ಪನೂ ಕೂಡಾ ನನ್ನ ಪ್ರೀತಿಸಬೇಕು, ಹೆಗಲ ಮೇಲೆ ಹೊತ್ತು ಊರು ಸುತ್ತಿಸಬೇಕು, ನನ್ನ ಆಸೆಗಳನ್ನ ಕೇಳಬೇಕು, ಕೈ ತುತ್ತು ತಿನ್ನಿಸಬೇಕು, ಮುದ್ದ ಮಾಡಿ ಜೋಗುಳ ಹಾಡಬೇಕು. ಹೀಗೆ ಆಸೆಗಳ ಪಟ್ಟಿ ದೊಡ್ಡದಿದೆ. ಆದರೆ ಅದ್ಯಾವುದು ನನ್ನ ಜೀವನದಲ್ಲಿ ಕೈಗೂಡುತ್ತನೇ ಇಲ್ಲ. ಅಪ್ಪ ಒಂದು ದಿನವೂ ಪ್ರೀತಿ ತೋರಿಸಿದವರಲ್ಲ. ದಿನವೂ ಕಣ್ಣು ಕೆಂಪಗೆ ಮಾಡಿ ರಾತ್ರಿ ಅಮ್ಮನಿಗೆ ನನಗೆ ಕೆಟ್ಟ ಮಾತುಗಳನ್ನಾಡುತ್ತಾ ಬರಿಯ ಒದೆಗಳೇ ನಮ್ಮ ಹೊಟ್ಟೆ ತುಂಬಿಸುತ್ತಿವೆ. ದಿನವೂ ಕುಡಿದು ಬಂದು ನಮ್ಮ ನೆಮ್ಮದಿ ಕೊಲ್ಲುತ್ತಿದ್ದೀರಾ. ಎಲ್ಲೂ ದಾರಿಯಲ್ಲಿ ಬಿದ್ದು, ಎಲ್ಲರಿಂದಲೂ ಬೈಗುಳ ತಿಂದು ನಾನು ಶಾಲೆಯಲ್ಲಿ ಕುಡುಕನ ಮಗನಾಗಿದ್ದೇನೆ. ಇಂತಹ ಅಪ್ಪ ನನಗೆ ಬೇಡ.  ನನಗೆ ಬೇರೆ ಅಪ್ಪ ಬೇಕು. ಪ್ಲೀಸ್...  ಶಾಲೆಯಲ್ಲಿ ಆ ಮಗು ನನ್ನ ಮುಂದೆ ಕೈ ಮುಗಿದು ಕಣ್ಣೀರು ತುಂಬಿ ಹೇಳಿದ ಮಾತು ಈಗಲೂ ಕಾಡುತ್ತಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ