ಸ್ಟೇಟಸ್ ಕತೆಗಳು (ಭಾಗ ೧೨೩೨) - ಕುಡಿತ

ಸ್ಟೇಟಸ್ ಕತೆಗಳು (ಭಾಗ ೧೨೩೨) - ಕುಡಿತ

ಮನೆ ಗಟ್ಟಿಯಾಗುತ್ತಿಲ್ಲ. ಮನಸ್ಸುಗಳು ಒಡೆದು ಹೋಗುತ್ತಿವೆ, ಕನಸುಗಳೆಲ್ಲವೂ ಹಾಗೆ ಉಳಿದುಕೊಂಡು ಬಿಟ್ಟಿದೆ. ಮನೆಗೊಂದು ಆಧಾರ ಸ್ಥಂಬವಾಗಿದ್ದವರು ಮನೆಯೊಳಗೆ ಸರಿಯಾಗಿ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಕೆಲಸ ಮುಗಿಸಿ ಮನೆಯ ಕಡೆಗೆ ಹೆಜ್ಜೆಯನ್ನಿಡುತ್ತಿಲ್ಲ. ಸಾರಾಯಿ ಅಂಗಡಿ ಮುಂದೆ ನಿಂತು ಆ ದಿನದ ದುಡಿಮೆಯನ್ನೆಲ್ಲ ಅಲ್ಲೇ ಸುರಿದು ಬರಿಗೈಯಲ್ಲಿ ಮನೆಗೆ ಮರುಳುತ್ತಿದ್ದಾರೆ. ಮನೆಯೊಳಗೆ ಹಸಿವಿನಿಂದ ನರಳಿದ ಮುಖಗಳು ಕಣ್ಣೀರಿಳಿಸುತ್ತಾ ಪ್ರತಿದಿನ ಬದಲಾವಣೆಗಾಗಿ ಕಾಯುತ್ತಿದ್ದಾವೆ. ಮನೆಯ ಮಗುವಿನ ಮನಸ್ಸು ಒಡೆದು ಹೋಗಿದೆ. ಭಯವಾಗಿದೆ, ದೇಹದ ತುಂಬೆಲ್ಲ ಗಾಯವಾಗಿದೆ. ನೆಮ್ಮದಿ ಅನ್ನೋದು ಅವರ ಮನೆಯನ್ನು ತೊರೆದು ಹೋಗಿಬಿಟ್ಟಿದೆ. ಮನೆಯ ಯಜಮಾನನೊಬ್ಬನ ಕುಡಿತ ಇಡೀ ಮನೆಯನ್ನ ಸ್ಮಶಾನವಾಗಿಸಿದೆ. ಅವರ್ಯಾರಿಗೂ ಬದುಕುವ ಆಸೆ ಇಲ್ಲ. ಸಾವೊಂದು ಆದಷ್ಟು ಬೇಗ ಬರಲಿ ಎನ್ನುವ ಆಸೆಯೊಂದೇ ಅವರನ್ನು ಇವತ್ತಿನವರೆಗೂ ಉಳಿಸಿಬಿಟ್ಟಿದೆ. ಮನೆಯ ಯಜಮಾನನ ಮನಸು ಬದಲಾಗಬೇಕು ಆತನ ನಂಬಿದವರು ಹಲವರಿದ್ದಾರೆ ಅನ್ನುವ ಅರಿವು ಮೂಡಬೇಕು ಇಲ್ಲವಾದರೆ ಪುಟ್ಟ ಕನಸುಗಳೆಲ್ಲವೂ ಕೊರಗಿ ಕರಗಿ ಸಾಯುತ್ತವಷ್ಟೇ. ಹೀಗೆ ರಾಜೀವನ ಕಣ್ಣ ಮುಂದೆ ಗಟ್ಟಿಯಾಗಿ ನಿಲ್ಲಲಾಗದೆ ಕುಸಿಯುತ್ತಿರುವ ಹಲವು ಮನೆಗಳನ್ನು ಕಂಡು ಮನಸು ಚಟಪಡಿಸುತ್ತಿದೆ. ಈ ಕುಡಿತವೆಂಬ ದುರಭ್ಯಾಸವನ್ನು ನಿಲ್ಲಿಸುವುದು ಹೇಗೆ ಎನ್ನುವ ಚಿಂತೆಯಲ್ಲೇ ದಿನ ದೂಡುತ್ತಿದ್ದಾನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ