ಸ್ಟೇಟಸ್ ಕತೆಗಳು (ಭಾಗ ೧೨೪೦) - ಬೈಗುಳ

ಸ್ಟೇಟಸ್ ಕತೆಗಳು (ಭಾಗ ೧೨೪೦) - ಬೈಗುಳ

ಇವತ್ತು ಅಪ್ಪನ ಸ್ವರ ತುಂಬಾ ಜೋರಾಗಿತ್ತು.ಆ ಬೆಕ್ಕು‌ನನ್ನ ಕೈಗೆ  ಸಿಗಬೇಕು. ಇರೋದಿಷ್ಟುದ್ದ. ಅದಕ್ಕೆ ಮರ ಹತ್ತೋಕೆ ಬರೋದಿಲ್ಲ ಅಂತ ಗೊತ್ತಿದ್ರೂ ಕೂಡ ಮರವನ್ನ ಕಷ್ಟಪಟ್ಟು ಹತ್ತಿದೆ. ಆಮೇಲೆ ಅದಾಗದೇ ಇಳಿಬೇಕು ತಾನೆ. ಅದು ಬಿಟ್ಟು ಮರದ ಮೇಲೆ ಕುಳಿತುಕೊಂಡು ಊರಲ್ಲಿ ಹೋಗೋ ಬರೋರ್ನೆಲ್ಲ ಕರೀತಾ ಕುಳಿತರೆ ನಾನು ಮಾಡುವುದೇನನ್ನ . ಮತ್ತೆ ನಾನು ಕಷ್ಟಪಟ್ಟು ಅದನ್ನು ಮರದಿಂದ ಇಳಿಸಬೇಕಾಯಿತು. ಮರ ಹತ್ತಿದ ಬೆಕ್ಕಿಗೆ ಇಳಿಯೋಕೆ ಬರದ ಮೇಲೆ ಹತ್ತುವ ಉಸಾಬರಿ ಅದಕ್ಕೆ ಯಾಕ್ ಬೇಕು. ಇನ್ನೊಂದು ಸಲ ಬೆಕ್ಕು ಏನಾದರೂ ಮತ್ತದೇ ಕೆಲಸ ಮಾಡಿದರೆ ನಾನು ಯಾವುದರಲ್ಲಿ ಹೊಡಿಯುತ್ತೇನೋ ಗೊತ್ತಿಲ್ಲ. ಅಪ್ಪನ ಈ ಸಿಟ್ಟಿನ ಹಿಂದಿನ ಬೈಗುಳ ಅದು ಬೆಕ್ಕಿಗಲ್ಲ ನನಗೆ ಅಂತ ಸುಲಭವಾಗಿ ಅರ್ಥವಾಗಿತ್ತು. ಇತ್ತೀಚಿಗೆ ಕೆಲವೊಂದು ಕೆಲಸಕ್ಕೆ ಕೈ ಹಾಕುವಾಗ ಅಪ್ಪ ಎರಡು-ಮೂರು ಬಾರಿ ಕೇಳಿದರು ನೀನು ಒಪ್ಪಿಕೊಂಡ ಕೆಲಸವನ್ನ ಕೊನೆಯವರೆಗೂ ತಲುಪಿಸುತ್ತೀಯಾ ತಾನೇ? ಅದಕ್ಕೊಂದು ಒಳ್ಳೆಯ ಅಂತ್ಯವನ್ನು ನೀಡುಬೇಕು.ಜವಾಬ್ದಾರಿಗಳನ್ನ ಹೆಗಲಿಗೇರಿಸಿಕೊಳ್ಳುವುದು ದೊಡ್ಡದಲ್ಲ ಕೊಟ್ಟ ಜವಾಬ್ದಾರಿಯನ್ನ ನಿಭಾಯಿಸುವುದು ಮತ್ತೆ ಅದಕ್ಕೊಂದು ಪೂರ್ಣ ವಿರಾಮವನ್ನು ನೀಡುವುದು ಮುಖ್ಯ. ಅವರು ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಿದ ನಾನು ಹಲವು ಕೆಲಸಗಳನ್ನ ಅರ್ಧದಲ್ಲಿ ನಿಲ್ಲಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದ್ದೆ. ಈ ಸಿಟ್ಟನ್ನು  ಬೆಕ್ಕಿನ ರೂಪದಲ್ಲಿ ನನ್ನಲ್ಲಿ ತೀರಿಸಿಕೊಂಡರು. ಹಾಗಾಗಿ ಅರ್ಧದಲ್ಲಿ ನಿಲ್ಲಿಸಿದ ಕೆಲಸಗಳನ್ನ ಕೊನೆಗಾಣಿಸುವುದಕ್ಕೆ ಮುನ್ನುಡಿಯಿಟ್ಟೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ