ಸ್ಟೇಟಸ್ ಕತೆಗಳು (ಭಾಗ ೧೨೫೨) - ಸರಿದ ಕಾಲ

ಅವಳು ಮನೆಯಲ್ಲಿ ಕಾಯ್ತಾಳೆ. ಅಕ್ಕ ದೂರಿದೂರಿನಿಂದ ರಜೆಗೆ ಒಂದು ಸಲ ಮನೆಗೆ ಬರ್ತಾರೆ. ಅಕ್ಕನ ಜೊತೆಗೆ ಇಬ್ಬರೂ ನಡೆದುಕೊಂಡು ಪೇಟೆ ಕಡೆ ಹೊರಡ್ತಾರೆ. ಅಪ್ಪ ಕೊಟ್ಟ 50 ರುಪಾಯಿಯಲ್ಲಿ ಒಂದು ಐಸ್ ಕ್ರೀಮ್ ಒಂದು ಬಾದಾಮ್ ಜ್ಯೂಸ್ ಕುಡಿಲೇಬೇಕು. ಇದು ವರ್ಷದ ಲೆಕ್ಕ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಮಾತ್ರ ಈ ಉಡುಗೊರೆ ಅವಳಿಗೆ ಸಿಗ್ತವೆ. ಇದನ್ನ ಒಂದು ವರ್ಷವೂ ತಪ್ಪಿಸಿಕೊಂಡವಳಲ್ಲ. ಇಡೀ ವರ್ಷದ ಓದಿನ ಅಂಕಗಳಿಕೆಗೆ ಕಾರಣ ಐಸ್ ಕ್ರೀಮ್ ಮತ್ತು ಬಾದಾಮ್ ಜ್ಯೂಸ್. ಹಾಗೆ ಓದುವಿಕೆ ಆರಂಭಿಸಿದವಳಿಗೆ ದೊಡ್ಡ ಹುದ್ದೆ ದೊಡ್ಡ ಪದವಿ ಕೈ ತುಂಬಾ ಸಂಬಳ ಬರುವ ದಿನವೂ ಬಂತು.ಆದರೆ ಈ ದಿನದವರೆಗೂ ವರ್ಷಕ್ಕೊಂದು ಬಾರಿ ಐಸ್ ಕ್ರೀಮ್ ಮತ್ತು ಬಾದಾಮ್ ಜ್ಯೂಸ್ ಕುಡಿಯೋದನ್ನ ಅವಳು ತಪ್ಪಿಸಿಕೊಂಡಿಲ್ಲ. ಈಗ ಊರು ಬದಲಾಗಿದೆ ಒಂದೇ ಅಂಗಡಿಯಿಂದ ಅದು ನೂರು ಅಂಗಡಿಗಳಾಗಿದೆ. ಪ್ರತಿಯೊಂದು ಅಂಗಡಿಯಲ್ಲೂ ಐಸ್ ಕ್ರೀಮ್ ಸಿಗುತ್ತೆ, ಜ್ಯೂಸ್ ಸಿಗುತ್ತೆ ಕೈಯಲ್ಲಿ ತುಂಬಾ ದುಡ್ಡು ಕೂಡ ಇದೆ. ಆದರೆ ಅಪ್ಪ ಕೊಡುತ್ತಿದ್ದ 50 ರೂಪಾಯಿ ವರ್ಷಕ್ಕೊಂದು ಬಾರಿ ಹೋಗಿ ತೆಗೆದುಕೊಳ್ಳುತ್ತಿದ್ದ ಬಾದಾಮ್ ಜ್ಯೂಸ್ ಮತ್ತು ಐಸ್ ಕ್ರೀಮ್ ನ ಬೆಲೆಯನ್ನು ಕಟ್ಟುವುದಕ್ಕೆ ಸಾಧ್ಯವಾಗಲಿಲ್ಲ ಅದರ ಸಿಹಿ ಎಲ್ಲೂ ಕೂಡ ಸಿಕ್ತಾ ಇಲ್ಲ. ಹಾಗೆ ಊರಿನ ಕಡೆಗೆ ಹಾದು ಹೋಗುವಾಗ ಆ ಪೇಟೆಯನ್ನು ನಿಂತು ತನ್ನ ನೆನಪಿನ ಬುತ್ತಿಯನ್ನು ತೆರೆದು ಎಲ್ಲವನ್ನು ಮನಃಸ್ಪೂರ್ತಿಯಾಗಿ ನಕ್ಕೋ ಮತ್ತೆ ಜಂಜಾಟದ ಬದುಕಿನ ಕಡೆಗೆ ನುಗ್ಗಿಬಿಡುತ್ತಾಳೆ. ವೇಗವಾಗಿ ಸರಿದ ಕಾಲದ ಬಗ್ಗೆ ಒಂದಷ್ಟು ನೋವನ್ನು ಪಡುತ್ತಾ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ