ಸ್ಟೇಟಸ್ ಕತೆಗಳು (ಭಾಗ ೧೨೫೫) - ಕತ್ತಲೆಯೊಳಗೆ

ಸ್ಟೇಟಸ್ ಕತೆಗಳು (ಭಾಗ ೧೨೫೫) - ಕತ್ತಲೆಯೊಳಗೆ

ಗಾಢವಾದ ಕತ್ತಲೆಯ ಕೋಣೆಯೊಳಗೆ ಒಬ್ಬರಿಗೊಬ್ಬರು ಕಾಣುತ್ತಿಲ್ಲ. ಅವರ್ಯಾರಿಗೂ ಇನ್ನೊಬ್ಬರ ಪರಿಚಯವೂ ಇಲ್ಲ. ಅಲ್ಲದೆ ಅಲ್ಲಿ ಬೇರೆಯವರಿದ್ದಾರೆ ಅನ್ನುವ ಮಾಹಿತಿಯೂ ಅವರಿಗಿಲ್ಲ.ಎಲ್ಲರೂ ಬೆತ್ತಲಾಗಿ ತಾವೊಬ್ಬರೇ ಇದ್ದಾರೆ ಅನ್ನೋ ತರ ಓಡಾಡುತ್ತಿದ್ದಾರೆ. ಅವರಿಗೆ ನೀನೀಗ ಬಟ್ಟೆ ಕೊಡೋಕೆ ಹೊರಟಿದ್ದೀಯಾ? ಯಾವುದಾದರೂ  ಬಟ್ಟೆಯನ್ನ ನೀಡಿದರೂ ನೀಡದೆ ಇದ್ದರೂ ಅಂತಹ ದೊಡ್ಡ ಬದಲಾವಣೆಗಳೇನು ಆಗುವುದಿಲ್ಲ. ಇದೇ ತರಹದ ವಿನ್ಯಾಸವಿರಬೇಕು, ಅನ್ನುವ ಅವಶ್ಯಕತೆಯೂ ಇಲ್ಲ. ಅವರು ಕತ್ತಲೆಯಿಂದ ಹೊರಬರುವುದಕ್ಕೆ ಇಷ್ಟಪಡದವರು.ಮತ್ತದೇ ಲೋಕದಲ್ಲಿ ತಿರುಗಾಡಿ ತಿರುಗಾಡಿ ಅಲ್ಲೇ ಉಳಿದುಕೊಳ್ಳುವವರು. ಬೆಳಕಿನ ಅವಶ್ಯಕತೆ ಇಲ್ಲದವರು. ಅವರಿಗೆ ನೀನೇನೆ ನೀಡಿದರು ಅದು ವ್ಯರ್ಥವಾಗುತ್ತದೆ. ಬೆಳಕಲ್ಲಿರುವವರಿಗೆ ಹೊಸ ದಾರಿ ತೋರಿಸಬಹುದು ಕತ್ತಲಿನಿಂದ ಬೆಳಕಿನೆಡೆಗೆ ಬರುವವರಿಗೆ ಬೆಳಕ ನೀಡಬಹುದು. ಕತ್ತಲಲ್ಲಿ ಉಳಿದುಬಿಡುತ್ತೇನೆ ಎನ್ನುವವರೆಗೆ ನೀನೇನೆ ನೀಡಿದರು ವ್ಯರ್ಥ. ಹಾಗಾಗಿ ನೀನು ಮಾಡುವ ಕೆಲಸ ವ್ಯರ್ಥವೋ ಅನರ್ಥವೊ ಉಪಯೋಗವೋ ಯೋಚಿಸಿ‌ ಹೆಜ್ಜೆ‌ ಇಡು. ಎದುರುಗೆ ಸಿಕ್ಕ ವ್ಯಕ್ತಿ ಹೇಳಿದ ಮಾತುಗಳೊಳಗೆ ಯಾವುದೋ ಗೂಡಾರ್ಥವಿದೆ. ಪ್ರಸ್ತುತ ಕಾಲಘಟ್ಟದ ಯಾವುದೋ ಸನ್ನಿವೇಶವನ್ನು ಚಿತ್ರಿಸ್ತಾ ಇದೆ. ನನ್ನೊಳಗೆ ಅರ್ಥದ ಸ್ವರೂಪವನ್ನು ರೂಪಿಸಿಕೊಂಡಿದ್ದೇನೆ. ಇದೀಗ ಆ ಸರದಿ ನಿಮ್ಮ ಪಾಲಿನದು, ನೀವು ಅರ್ಥವನ್ನ ಅರ್ಥೈಸಿಕೊಂಡು ಮುಂದುವರೆಯಿರಿ...ಅಷ್ಟೇ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ