ಸ್ಟೇಟಸ್ ಕತೆಗಳು (ಭಾಗ ೧೨೬೭) - ಅರ್ಥ

ಸ್ಟೇಟಸ್ ಕತೆಗಳು (ಭಾಗ ೧೨೬೭) - ಅರ್ಥ

ಹಸಿವಿಲ್ಲದಿದ್ದರೆ ಬದುಕು ಅರ್ಥವಾಗುವುದಿಲ್ಲ. ಇದನ್ನು ಸಣ್ಣವನಿರುವಾಗಲೇ ಅಪ್ಪ ಹೇಳ್ತಾ ಇದ್ರು. ನನಗೆ ಅದು ಏನು ಅಂತ ಅರ್ಥ ಆಗ್ತಾ ಇರಲಿಲ್ಲ. ಈಗ ಬೆಳೆದು ದೊಡ್ಡವನಾಗಿದ್ದೇನೆ ಗಡ್ಡ ಮೀಸೆಗಳು ಜಗತ್ತು ನೋಡಲಾರಂಬಿಸಿದೆ. ಆ ದಿನ ಮಧ್ಯರಾತ್ರಿ ದಾಟಿತ್ತು, ಮನೆ ತಲುಪಬೇಕು ಕಾರಣ ಆಟೋ ಒಂದಕ್ಕೆ ಕೈ ಹಿಡಿದೆ. ನನ್ನ ಅಜ್ಜನ ವಯಸ್ಸಿನವರು ಕಣ್ಣುಗಳಲ್ಲಿ ನಿದ್ರೆ ತುಳುಕಿದ್ದರೂ ಮನಸ್ಸು ಬದುಕಿನ ಅನಿವಾರ್ಯತೆಯನ್ನ ಕೂಗಿ ಕೂಗಿ ಎಚ್ಚರಿಸಿ ಆಟೋ ಓಡುವಂತೆ ಮಾಡಿದ್ದರು. ಅಲ್ಲಿಯೇ ಇಟ್ಟುಕೊಂಡಿದ್ದ ಬುತ್ತಿಯೊಳಗಿಂದ ಮುಸುಂಬಿ ಹಣ್ಣುಗಳ ತುಂಡನ್ನ ತಿಂದು ಹೊಟ್ಟೆ ತುಂಬಿಸಿಕೊಂಡ ಬದುಕು  ಅನಿವಾರ್ಯತೆಯಾಗಿತ್ತು. ಆ ದಿನ ಮಧ್ಯರಾತ್ರಿ ಹೋಟೆಲ್ ಒಂದರಲ್ಲಿ ಊಟ ಮಾಡಿ ಎದ್ದಾಗ ಟೇಬಲ್ ಒರೆಸಿದವರ ವಯಸ್ಸು 60 ದಾಟಿತ್ತು ದೇಹ ಬೇಡ ಹೇಳಿದ್ರು ಮನಸ್ಸು ಅನಿವಾರ್ಯತೆಯನ್ನು ಕೇಳ್ತಾ ಇತ್ತು. ಬಾಡಿಗೆ ಮನೆಯ ಪಕ್ಕದಲ್ಲಿದ್ದ ಹುಡುಗ ದೊಡ್ಡ ಪರೀಕ್ಷೆ ಒಂದರಲ್ಲಿ ಸತತ ಮೂರು ಬಾರಿ ಅನುತ್ತೀರ್ಣನಾಗಿದ್ದ ಆದರೆ ಆತ ಉತ್ಸಾಹ ಕಳೆದುಕೊಳ್ಳಲಿಲ್ಲ ಮತ್ತೆ ಮತ್ತೆ ಸತತ ಪರಿಶ್ರಮ ಹಾಕಿ ಪರೀಕ್ಷೆಯಲ್ಲಿ ಜಯಗಳಿಸಿಬಿಟ್ಟ ಆತನಿಗೆ ಬದುಕು ಅನಿವಾರ್ಯವಾಗಿತ್ತು. ಹೀಗೆ ಕಣ್ಣ ಮುಂದೆ ಉದಾರಣೆ ಕಂಡದ್ದಕ್ಕೆ ಅಪ್ಪನ ಮಾತನ್ನು ಒಪ್ಪಿಕೊಂಡಿದ್ದೆ. ನಾವು ಹಾಗೆ ಅಲ್ವಾ, ಕಣ್ಣ ಮುಂದೆ ಉದಾರಣೆ ಸೃಷ್ಟಿಯಾಗುವವರೆಗೂ ನಂಬದವರು ನಾವು ಹಾಗಾಗಿ ಬೇಡಿಕೊಳ್ಳುವುದೇ ಒಳಿತು ಆಗಾಗ ಉದಾಹರಣೆಗಳು ಕಣ್ಣ ಮುಂದೆ ಕಾಣಿಸಿ ಬಿಡಲಿ ಎಂದು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ