ಸ್ಟೇಟಸ್ ಕತೆಗಳು (ಭಾಗ ೧೨೭೧) - ಸಾಯುತ್ತದೆ

ಸ್ಟೇಟಸ್ ಕತೆಗಳು (ಭಾಗ ೧೨೭೧) - ಸಾಯುತ್ತದೆ

ಜೀವನವನ್ನ ದಾಟಿಸಬೇಕಿತ್ತು. ಬದುಕು ಅವರೊಂದು ಕೊಂಡಂತೆ ಎಂದು ಕೂಡ ಆಗಲೇ ಇಲ್ಲ. ಬೇರೆ ಬೇರೆ ಕೆಲಸಗಳನ್ನ ಮುಗಿಸ್ತಾ ಮುಗಿಸ್ತಾ ಯಾವ ಕೆಲಸವೂ ಕೈ ಹಿಡಿಲೇ ಇಲ್ಲ. ಜೀವನದ ದಡ ತಲುಪುವುದಕ್ಕೆ ಮತ್ತೆ ಪರದಾಟವೇ ಆಗ್ತಾ ಹೋಯ್ತು. ಕೊನೆಗೆ ಕಷ್ಟಪಟ್ಟು ಸಾಲಸೋಲ ಮಾಡಿ ಮೂರು ಚಕ್ರದ ಗಾಡಿ ಜೀವನ ಅನ್ನೋ ಮೂರು ಅಕ್ಷರವನ್ನು ಬದಲಾಯಿಸಿತು. ಮೊದಮೊದಲು ಚಕ್ರ ತಿರುಗಿದ ಹಾಗೆ ಜೀವನವೇನೂ ತಿರುಗುತ್ತಾ ಇರಲಿಲ್ಲ. ದಿನ ಕಳೆದಂತೆ ಆ ಮೂರು ಚಕ್ರಗಳು ಇವರ ಬದುಕಿನ ಎಲ್ಲಾ ಕಷ್ಟಗಳನ್ನು ಪರಿಹಾರ ಮಾಡುತ್ತ ಹೋಯಿತು. ರಾತ್ರಿ ಹಗಲೆನ್ನದೆ ದುಡಿದ ಕಾರಣಕ್ಕೆ ಮನೆಯ ಪರಿಸ್ಥಿತಿ ಬದಲಾಯಿತು. ಮಕ್ಕಳ ವಿದ್ಯಾಭ್ಯಾಸಕೊಂದು ದಾರಿಯಾಯಿತು. ಕನಸುಗಳಿಗೆಲ್ಲ ನಂಬಿಕೆ ಉಳಿಸಿಕೊಂಡ ಕಾರಣಕ್ಕೆ ಎಲ್ಲರೂ ಇವನನ್ನೇ ಆಶ್ರಯಿಸಿದರು ಆತ ಅಲ್ಲಿಯವರೆಗೂ ನಂಬಿಕೊಂಡು ಬಂದಿದ್ದ ಸಿದ್ಧಾಂತವನ್ನು ಬದಲಿಸಿಬಿಟ್ಟ. ಕಷ್ಟಗಳು ಜೀವನವನ್ನು ರೂಪಿಸ್ತಾ ಹೋಗ್ತಾವೆ ಜೀವನದ ಕೊನೆಯವರೆಗೂ ಕಷ್ಟಗಳು ಇರುತ್ತವೆ. ರಿಕ್ಷಾ ಬಂದಮೇಲೆ ಆತನ ಯೋಚನಾ ಲಹರಿಗಳು ಬದಲಾಗತೊಡಗಿದವು. ಕಾಯಬೇಕು ಕಷ್ಟಗಳು ಸಾಯುತ್ತವೆ ಅನ್ನೋದು ಆತನ ಸಿದ್ಧಾಂತವಾಯಿತು. ಹಾಗಾಗಿ ಅದನ್ನು ರಿಕ್ಷಾದ ಹಿಂದೆ ದೊಡ್ಡದಾಗಿ ಬರೆದುಕೊಂಡುಬಿಟ್ಟ. ಕಾಯಬೇಕು ಮಗೂ ಕಷ್ಟಗಳು ಸಾಯ್ತವೆ ಅಂತ. ಇಂದಿನವರೆಗೂ ಅದನ್ನೇ ನಂಬಿಕೊಂಡಿದ್ದಾನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ