ಸ್ಟೇಟಸ್ ಕತೆಗಳು (ಭಾಗ ೧೨೮೪) - ಬೆಲೆ

ಸ್ಟೇಟಸ್ ಕತೆಗಳು (ಭಾಗ ೧೨೮೪) - ಬೆಲೆ

ಮನೆಗಿಂತ ಒಂದು ಪರ್ಲಾಂಗು ದೂರದಲ್ಲಿ ಒಂದು ಸಣ್ಣ ಗದ್ದೆ. ಅದು ನಮ್ಮದಲ್ಲ ಯಾರಿಗೂ ಆ ಗದ್ದೆ ಬಗ್ಗೆ ತಿಳಿದು ಇಲ್ಲ. ಆದರೆ ಅಲ್ಲಿ ನೆಟ್ಟ ಎರಡು ಮಾವಿನ ಮರಗಳ ಬಗ್ಗೆ ಇಡೀ ಊರಲ್ಲಿ ಮಾತನಾಡಿಕೊಳ್ಳುತ್ತಾರೆ. ಒಂದು ಎತ್ತರವಾಗಿ ಬೆಳೆದು ನಿಂತದ್ದು ಇನ್ನೊಂದು ಕೈಗೆಟುಕುವಂತದ್ದು. ಎರಡು ಮಾವಿನ ಮರಗಳು ಹೂ ಬಿಟ್ಟು ಹಣ್ಣುಗಳನ್ನು ಕೊಡುತ್ತಾ ಬಂದಿದೆ. ಆದರೆ ಕೈಗೆಟುಕುವ ಮರವಿದೆಯಲ್ಲ ಅದು ಎಲ್ಲರಿಗೂ ಪ್ರಿಯವಾಗಿರೋದು ಬಂದವರೆಲ್ಲರೂ ಕೈಗೆ ಸಿಕ್ಕಿದ್ದನ್ನು ಕಿತ್ತು ಕಿತ್ತು ಆ ಮರದಲ್ಲಿ ದೊಡ್ಡ ಹಣ್ಣುಗಳಾಗುವ ಅವಕಾಶವನ್ನು ನೀಡಲೇ ಇಲ್ಲ. ಕೈಗೆ ಸಿಕ್ಕ ಕಲ್ಲು ಕೋಲುಗಳನ್ನು ಬಡಿದು ಮರಕ್ಕೆ ವಿಪರೀತ ಹಾನಿ ಮಾಡಿದ್ದಾರೆ. ಎಲ್ಲರಿಗೂ ಹಣ್ಣು ಇಷ್ಟವೇ ಆದರೆ ಅದರ ಬಗ್ಗೆ ವಿಶೇಷ ಗಮನವೇನು ಇಲ್ಲ. ಅದರ ಪಕ್ಕದಲ್ಲಿ ನಿಂತು ತುಂಬಾ ಎತ್ತರವಾದ ಮರದ ಮೇಲೆ ಮಾವಿನಹಣ್ಣು ಬಿಡುತ್ತವೆ ಆದರೆ ಅದು ಕೈಗೆಟುಕುವುದಲ್ಲ ಸತತ ಪರಿಶ್ರಮಪಟ್ಟು ಪ್ರಯತ್ನಪಟ್ಟರೆ ಆ ಎತ್ತರವನ್ನು ಏರಬಹುದು ಹಲವು ಜನ ಪ್ರಯತ್ನಪಟ್ಟು ಸೋತು ಹೋದ ಕಾರಣ ಯಾರು ಅದರ ಸುದ್ದಿಗೆ ಹೋಗಲಿಲ್ಲ. ಮಾವಿನ ಹಣ್ಣುಗಳು ಹಣ್ಣಾಗಿ ಕೆಳಕ್ಕೆ ಬಿದ್ದಾಗ ಅದನ್ನು ತಿನ್ನುವುದಕ್ಕೆ ಜನ ಓಡೋಡಿ ಬರ್ತಾರೆ ಅದರ ರುಚಿಯನ್ನು ಆಸ್ವಾದಿಸುತ್ತಾರೆ ಇಡೀ ಊರಿನಲ್ಲಿ ಆ ಹಣ್ಣಿನ ಮರದ ಬಗ್ಗೆ ಸುದ್ದಿಗಳು ಹಬ್ಬುತ್ತಿದೆ, ಸಣ್ಣ ಮಾವಿನ ಮರಕ್ಕೆ ತುಂಬಾ ಬೇಸರವಿದೆ ನಾನು ಕೈಗೆಟಕಿದ ಕಾರಣ ಮೌಲ್ಯ ಕಳೆದುಕೊಂಡಿದ್ದೇನೆ ನನಗೆ ಸಿಗಬೇಕಾದ ಗೌರವ ಎಲ್ಲೂ ಸಿಕ್ತಾ ಇಲ್ಲ ವಿಪರೀತ ನೋವಿನಲ್ಲಿ ದಿನದೊಡುತ್ತಿದ್ದೇನೆ ಅದಕ್ಕಾಗಿ ಮನುಷ್ಯರಲ್ಲಿ ಕೇಳಿಕೊಳ್ಳುವುದಿಷ್ಟೇ ನೀವ್ಯಾರು ಸುಲಭಕ್ಕೆ ಕೈಗೆ ಎಟುಕುವುದ್ದಕ್ಕೆ ಹೋಗಬೇಡಿ. ನಿಮ್ಮ ಮೌಲ್ಯ ಕಡಿಮೆಯಾಗುತ್ತದೆ ಎತ್ತರವನ್ನೇರಿ ನಿಮ್ಮ ಅಗತ್ಯವನ್ನು ರುಜು ಪಡಿಸಿ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ