ಸ್ಟೇಟಸ್ ಕತೆಗಳು (ಭಾಗ ೧೨೯೨) - ಹೆಜ್ಜೆ

ಸ್ಟೇಟಸ್ ಕತೆಗಳು (ಭಾಗ ೧೨೯೨) - ಹೆಜ್ಜೆ

ಸಾಗುವ ದಾರಿ ಒಂದೇ. ದಾರಿಯಲ್ಲಿ ಒಂದಷ್ಟು ಬದಲಾವಣೆಗಳಾಗಿದ್ದವು ಮಾತ್ರ. ಮೊದಲು ಆ ಊರಿಗೆ ಆ ದಾರಿಯಲ್ಲಿ ಸಾಗುವಾಗ ಶಿಕ್ಷಣ ಪಡೆಯುವ ಹಂಬಲ ಹೆಜ್ಜೆಗಳಲ್ಲಿತ್ತು. ಹೊಸದೇನಾದ್ರು ಸಾಧಿಸಬೇಕು ಅನ್ನುವ ಆಸೆ ಇತ್ತು. ಹಾಗೆ ಹೆಜ್ಜೆಗಳು ತುಂಬಾ ಧೈರ್ಯದಿಂದ ಉತ್ಸಾಹದಿಂದ ಸಾಗಿದ್ದವು. ಶಿಕ್ಷಣ ಮುಗಿದು ಮತ್ತೆ ಅದೇ ದಾರಿಯಲ್ಲಿ ಕೆಲಸ ಹುಡುಕುವುದಕ್ಕೆ ಹೆಜ್ಜೆಗಳನ್ನ ಇಡಬೇಕಾಯಿತು. ಹೆಜ್ಜೆಗಳು ಭರವಸೆಯಿಂದ, ಯಾತನೆಯ ಕಡೆಗೆ ಸಾಗಿತು. ಎಷ್ಟೇ ಹೆಜ್ಜೆ ಸವೆಸಿದರೂ ಕೆಲಸ ಸಿಗುವ ಲಕ್ಷಣ ಆ ದಾರಿಯಲ್ಲಿ ಕಾಣಲೇ ಇಲ್ಲ. ಹೆಜ್ಜೆಗಳು ನಿಧಾನವಾಗಿ ಮುಂದುವರಿದವು, ಎಡವಿದವು. ಮತ್ತೆ ಕಾಲ ಒಂದಷ್ಟು ದಾಟಿದ ಮೇಲೆ ಮತ್ತದೇ ದಾರಿಯಲ್ಲಿ ಹೆಜ್ಜೆ ಇಡುವ ಅವಕಾಶ ಸಿಕ್ಕಿತು. ಈಗ ಮನಸ್ಥಿತಿಗಳು ವ್ಯಕ್ತಿಯ ಸ್ಥಿತಿಗಳು ಎಲ್ಲವೂ ಬದಲಾಗಿದ್ದವು. ಆತನ ಕೈಯಲ್ಲಿ ದೊಡ್ಡ ಉದ್ಯೋಗವಿತ್ತು. ಇಂದು ಅದೇ ಊರಿಗೆ ಕಾರ್ಯಕ್ರಮ ಒಂದಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಅದೇ ದಾರಿಯಲ್ಲಿ ಹೆಜ್ಜೆ ಇಡ್ತಾ ಇದ್ದ. ತುಂಬಾ ಭರವಸೆ ಇತ್ತು. ಬದುಕಿನ ಪಾಠ ಹೇಳಿಕೊಟ್ಟದ್ದಕ್ಕೆ ಆ ದಾರಿಗೆ ಧನ್ಯವಾದಗಳನ್ನು ಹೇಳುತ್ತಾ ನಡೆದ. ಸಾಗುವ ದಾರಿಯಲ್ಲಿ ಉತ್ಸಾಹವಿತ್ತು. ಇನ್ನೊಂದಷ್ಟು ಹೊಸತನ ಸಾಧಿಸುವ ನಂಬಿಕೆ ಇತ್ತು. ಕಾಲ ಬದಲಾಗಿತ್ತು. ಹೆಜ್ಜೆಗಳ ಮೇಲಿನ ಶಕ್ತಿಯು ಬದಲಾಗಿತ್ತು. ಆತನಿಗೆ ತುಂಬಾ ತುಂಬಾ ಚೆನ್ನಾಗಿ ಅರ್ಥವಾಯಿತು ಕಾಲ ಬದಲಾಗುತ್ತೆ ನಾವು ಹೆಜ್ಜೆಗಳನ್ನ ಗಟ್ಟಿಯಾಗಿ ಇಡುತ್ತಾ ಸಾಗಬೇಕು ಅಂತ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ