ಸ್ಟೇಟಸ್ ಕತೆಗಳು (ಭಾಗ ೧೩೦೧) - ಹವ್ಯಾಸ

ಅವನೊಬ್ಬ ವಿಚಿತ್ರಗುಪ್ತ. ಅಲ್ಲಿ ಮೇಲೆ ಕುಳಿತು ಅವನ ಬಳಿ ಇರುವ ಪುಸ್ತಕದಲ್ಲಿ ಕೆಲವರ ದಾರಿಯನ್ನ ನಿರ್ಧರಿಸುತ್ತಾನೆ. ವ್ಯಕ್ತಿ ಸಾಧನೆಯ ಶಿಖರವೇರದೆ ಅಲ್ಲೇ ಉಳಿದು ಬಿಡುಬೇಕು. ಆದರೆ ಅದು ಯಾವತ್ತೂ ಆ ವ್ಯಕ್ತಿಗೆ ಅರ್ಥನೇ ಆಗಬಾರದು. ಹೀಗೆ ಅದಕ್ಕೆ ಪೂರಕವಾಗುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡೆ ಕಾಯ್ತಾ ಇರುತ್ತಾನೆ. ಆ ವಿಚಿತ್ರ ಪುಸ್ತಕದಲ್ಲಿ ಒಂದಷ್ಟು ಉಪಾಯಗಳನ್ನ ಕೆತ್ತಿದ್ದಾನೆ. ಅದರಲ್ಲಿ ಮೊದಲನೆಯದು ವ್ಯಕ್ತಿಗೆ ಹವ್ಯಾಸಗಳನ್ನು ನೀಡಬೇಕು. ಆ ಹವ್ಯಾಸಗಳನ್ನು ವ್ಯಕ್ತಿ ಮಾಡ್ತಾ ತಾನೇ ಅದ್ಭುತವನ್ನು ಸಾಧಿಸ್ತಾ ಇದ್ದೇನೆ ಅನ್ನಿಸಬೇಕು, ಆದರೆ ಅದರಿಂದ ಆತ ಯಾವತ್ತೂ ಅದ್ಭುತವಾದ ಸಾಧನೆಯ ಶಿಖರವನ್ನೇ ಏರಬಾರದು. ವ್ಯಕ್ತಿಗೆ ಗೊತ್ತಿಲ್ಲದೆ ಆತ ಸಾಧನೆಯ ಶಿಖರದ ಬುಡದಲ್ಲೇ ಉಳಿದು ಬಿಡಬೇಕು. ಇದು ವಿಚಿತ್ರಗುಪ್ತನ ಮೊದಲನೇ ಉಪಾಯ. ಇಂತಹ ಹಲವು ಉಪಾಯಗಳಿವೆ, ಅವನ ಪುಸ್ತಕ ನನಗೆ ಸಿಕ್ಕಿದ ಕಾರಣ ನಿಮ್ಮ ಬಳಿಗೆ ವಿಷಯ ತಿಳಿಸುತ್ತಿದ್ದೇನೆ. ನಾನು ಹೇಳಿರುವ ವಿಚಾರ ದಯವಿಟ್ಟು ವಿಚಿತ್ರಗುಪ್ತನ ಬಳಿ ಹೇಳಬೇಡಿ. ಹಾಗಾಗಿ ನೋಡಿಕೊಳ್ಳಿ ನಿಮ್ಮ ಹವ್ಯಾಸಗಳು ನಿಮ್ಮನ್ನ ಯಾವ ಕಡೆಗೆ ಕೊಂಡೊಯ್ಯುತ್ತದೆ ಎಂದು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ