ಸ್ಟೇಟಸ್ ಕತೆಗಳು (ಭಾಗ ೧೩೦೨) - ಕರಗಿದೆ ಮಂಜು

ಮಂಜಿನ ಮೇಲೆ ಬಿದ್ದ ರಕ್ತದ ಹನಿಗಳು ನೀರಿನೊಂದಿಗೆ ಕರಗಿ ಇಳಿಯಲಾರಂಭಿಸಿದವು. ಮಂಜುಗಳು ಎಷ್ಟೇ ಕರಗಿದರು ಕೂಡ ರಕ್ತದ ಕಲೆ ಅಲ್ಲೇ ಉಳಿದುಕೊಂಡುಬಿಟ್ಟಿತ್ತು. ಮಂಜು ನೋವಿನಿಂದ ಕರಗಲಾರಂಬಿಸಿತು. ಕ್ಷಣಗಳ ಹಿಂದೆ ಸ್ವರ್ಗದಂತಿದ್ದ ಸ್ಥಳವು ನರಕದ ಬಾಗಿಲಾಯಿತು. ಆಸೆಗಳನ್ನ ಹೊತ್ತುಕೊಂಡಿದ್ದ ದೇಹದಲ್ಲೆಲ್ಲಾ ಮದ್ದು ಗುಂಡುಗಳು ತುಂಬಿ ದೇಹ ಒದ್ದಾಡಿ ಒದ್ದಾಡಿ ಸತ್ತುಹೋಗಿತ್ತು. ಕನಸುಗಳನ್ನು ಕಟ್ಟಿಕೊಂಡು ಪ್ರೀತಿಯನ್ನು ಹಂಚಿಕೊಂಡು ಪರಿಚಯವಿಲ್ಲದ ಯಾವುದೋ ದೂರದ ಊರಿನಿಂದ ಸಂಭ್ರಮ ಅನುಭವಿಸುವುದಕ್ಕೆ ಬಂದವರು ಮಸಣ ಸೇರುವಂತಾಗಿತ್ತು. ತಲೆಯೊಳಗೆ ಧರ್ಮದ ಅಮಲು ತುಂಬಿ ಕೊಂಡವರು ಯಾರದೋ ಸಾವಿನಿಂದ ತಮ್ಮ ಧರ್ಮದ ಹೆಸರನ್ನ ಮೇಲಕ್ಕೆ ಏರಿಸಬೇಕು ಎನ್ನುವವರು, ಅಮಾಯಕರನ್ನ ಕೊಂದು ಹರ್ಷಪಟ್ಟರು. ಅವರ ಮುಖದಲ್ಲಿ ಸಾಧಿಸಿದ ಹುಂಬತನ ಎದ್ದು ಕಾಣುತ್ತಿತ್ತು. ತಾವು ಮಾಡಿದ ಕೆಲಸದ ಬಗ್ಗೆ ಪ್ರಾಯಶ್ಚಿತವಿಲ್ಲದ ವಿಕೃತ ಸಂತೋಷ ಅಲ್ಲಿತ್ತು. ಸತ್ತವರ ನೋವಿನ ಕೂಗು ಅವರ ಎದೆಗೆ ಇಳಿಯಲೇ ಇಲ್ಲ. ಮನುಷ್ಯತ್ವವಿಲ್ಲದ ಧರ್ಮ ನಾಶವಾಗುವುದೆ ಒಳಿತು ಎನ್ನುವುದು ಅಲ್ಲಿ ಉಸಿರಾಡಿದ ಗಾಳಿ ಆಡುತ್ತಿದ್ದ ಮಾತು. ನರಮೇಧ ಸೃಷ್ಟಿಸಿದವರು ಜಗತ್ತಿನ ಅದ್ಭುತ ಸಾಧನೆ ತಮ್ಮದೆಂಬಂತೆ ಬೀಗುತ್ತಿದ್ದರು. ಅವರ ಪ್ರಕಾರ ಸ್ವರ್ಗದಲ್ಲೊಂದವರಿಗೆ ವಿಶೇಷ ಸ್ಥಾನವಿತ್ತಂತೆ, ಸುತ್ತಮುತ್ತಲೇ ಬದುಕಲರ್ಹತೆ ಇಲ್ಲದವರಿಗೆಲ್ಲ ಸ್ವರ್ಗದಲ್ಲೇ ಸ್ಥಾನ ಸಿಗುವುದು ಹುಚ್ಚುತನವಲ್ಲವೇ? ರಕ್ತದ ರಾಶಿಯ ನಡುವೆ ಇಳಿದ ಕಣ್ಣೀರು ಎದೆಯೊಳಗಿನ ನೋವು ಯಾವುದು ಯಾರಿಗೂ ಗೋಚರಿಸದೇ ಹೋಯಿತು... ಮಂಜು ಕರಗಿದರೂ ಅದು ಅನುಭವಿಸಿದ ನೋವು ಕರಗಲಿಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ