ಸ್ಟೇಟಸ್ ಕತೆಗಳು (ಭಾಗ ೧೩೫) - ನನ್ನವಳು

ಸ್ಟೇಟಸ್ ಕತೆಗಳು (ಭಾಗ ೧೩೫) - ನನ್ನವಳು

ಪಟ್ಟಿಯ ಮೇಲೆ ಗಾಲಿಗಳುರುಳುತ್ತಿವೆ. ಬೋಗಿಗಳು ಒಂದೊಂದು ಜೊತೆಗೂಡುತ್ತವೆ ಗಮ್ಯ ತಲುಪಲು ಧಾವಿಸುತ್ತಿವೆ. ಒಂದು ಬೋಗಿಯ ಕಿಟಕಿ ಪಕ್ಕದ ಸೀಟಲ್ಲಿ ಅಂಡೂರಿದ್ದೆ. ಗಾಳಿಗೆ ಮುಖವೊಡ್ಡಿ ಹಾರುತ್ತಿರುವ ಕೇಶದೊಳಕ್ಕೆ ಕೈಯಾಡಿಸುತ್ತಾ ಕುಳಿತಿದ್ದವನ ದೃಷ್ಟಿ ಮುಂದಿನ ಸೀಟಿನ ಕಡೆಗೋಡಿತು. ದಂಪತಿಗಳವರು. ಬಾಂಧವ್ಯ ಬೆಸೆದು 60 ವರ್ಷಗಳೇ ದಾಟಿರಬಹುದು. ಸುಕ್ಕುಗಟ್ಟಿರುವ ಬೆಸೆದ ಕೈಗಳು, ನೆರಿಗೆಯ ರೇಖಾವಿನ್ಯಾಸ ಮೂಡಿಸಿದ ಮುಖಗಳಿಂದ ಇವಿಷ್ಟನ್ನು ತಿಳಿಯಬಹುದಾಗಿತ್ತು. ಭಯವೇ ಕಣ್ಣೊಳಗಿಂದ ಇಣುಕಿದ ಹಾಗೆ ಕಣ್ಣೀರು ತುಂಬುತ್ತಲೇ ಇತ್ತು. ಅವರ ವಸ್ತು ಸ್ಥಿತಿ ರೈಲಿನ ಮೊದಲ ಪಯಣದ ಹಾಗೆಯೇ ಕಂಡುಬರುತ್ತಿತ್ತು. ಹಲವಾರು ಪ್ರಶ್ನಾರ್ಥಕ ಚಿಹ್ನೆಗಳಿದ್ದರೂ ಪ್ರಶ್ನೆ ನನ್ನೊಳಗಿಂದ ಅವರ ಬಳಿಗೆ ದಾಟಲೇ ಇಲ್ಲ. ದೇಹದ ಸುಸ್ತಿಗೋ, ಗಾಳಿಯ ತಂಪಿಗೋ ಅಲ್ಲೇ ಕಣ್ಮುಚ್ಚಿದೆ. ಏಕತಾನತೆಗೆ ರೋಸಿಹೋಗಿ ಬಾಗಿಲು ತೆರೆದಾಗ ಎದುರಿನ ಜಾಗ ಖಾಲಿಯಾಗಿತ್ತು. ಬೇರೆ ಜಾಗ ಹುಡುಕಿದರೋ, ಇಳಿದು ಹೊರಟರೋ  ಗೊತ್ತಿಲ್ಲ? ಜೊತೆಯಾದ ಸ್ನೇಹ ಇನ್ನೂ ಬಿಗಿಗೊಳಿಸಿಕೊಂಡು ಸಾಗಿರಬಹುದು. ಹಿನ್ನೆಲೆಯ ಬಗ್ಗೆ ಯೋಚಿಸುವುದಿಲ್ಲ. ನಂಬಿಕೆಯ ಬಂಧನ ಬಿಸಿಯಾಗಿದೆ. ನನ್ನ ಬ್ಯಾಗಿನೊಳಗೆ ಇದ್ದ ವಿಚ್ಛೇದನದ ಪತ್ರ ಚೂರು ಚೂರಾಗಿ ಅಲ್ಲಲ್ಲಿ ಚದುರಿ ಹೋಗಿದೆ. ಅವಳಿಗೊಂದು ಸೀರೆ ಖರೀದಿಸುವ ಯೋಚನೆ ಬಲವಾಗಿದೆ ಬಂಡಿ ಸಾಗುತ್ತಿದೆ ವರ್ತಮಾನದಲ್ಲೂ ಜೀವನದಲ್ಲಿ...

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ