ಸ್ಟೇಟಸ್ ಕತೆಗಳು (ಭಾಗ ೧೩೬) - ಉತ್ತರ
ಮರಳು ಒಣಗಬೇಕು ಎಂದುಕೊಂಡರೂ ಅಲೆಗಳು ತುಂಬು ಉತ್ಸಾಹದಿಂದ ಜಿಗಿದು ಮರಳನ್ನು ಒದ್ದೆ ಮಾಡಿ ಮರಳುತ್ತಿತ್ತು. ಹಸಿಮರಳಿನ ಮೇಲೆ ಹೆಜ್ಜೆ ತೆಗೆಯುತ್ತಾ ಮನೆಯ ಕಡೆಗೆ ಹೊರಟಿದ್ದ ಸಿಂಚನ ಪ್ರಶ್ನೆ ಕೇಳಲಾರಂಭಿಸಿದಳು "ಮನುಷ್ಯರಾಗಿ ಹುಟ್ಟಿದ ನಮಗೆ ಜಾತಿ ಅಂಟಿದ್ದು ಯಾವಾಗ? ನೀರು, ನೆಲ, ಗಾಳಿ ಒಂದೇ ಅನ್ನುವವರು ಮನುಷ್ಯರೆಲ್ಲ ಒಂದೇ ಅನ್ನೋದಿಲ್ಲವೇಕೆ? ಫೋಟೋದಲ್ಲಾಗಲಿ, ಬಿಡಿಸುವ ಚಿತ್ರದಲ್ಲಾಗಲಿ ಸುಂದರ ಪ್ರಕೃತಿಯನ್ನು ಕಂಡು ಆಸ್ವಾದಿಸುವ ನಾವು ನಮ್ಮ ಮನೆಯ ಮುಂದಿನ ಗದ್ದೆ, ಊರಿನ ನದಿ, ಗುಡ್ಡದ ಮೇಲಿನ ಕಾಡನ್ನು ಅಂದವಾಗಿ ಉಳಿಸಿಕೊಂಡಿಲ್ಲವೇಕೆ?. ಮನೆಯಲ್ಲಿ ನಾಲ್ಕು ನಾಯಿ, ಎರಡು ಬೆಕ್ಕು ಇದರ ಲಾಲನೆ-ಪಾಲನೆಗಳನ್ನು ಸಂಭ್ರಮದಿಂದ ಮಾಡುವವರು ಅಪ್ಪ-ಅಮ್ಮನನ್ನು ಆಶ್ರಮ ಸೇರಿಸಿದ್ದೇಕೆ? ಸಮಾನತೆ ಬಗ್ಗೆ ಪಾಠ ಮಾಡುವ ಟೀಚರ್ ಮನೆಯಲ್ಲಿ ಮಗಳನ್ನು ಕಡೆಗಣಿಸಿ ಮಗನಿಗೆ ಮಾತ್ರ ವಿಶೇಷವಾದ ತಿಂಡಿ ನೀಡೋದು ಯಾಕೆ? ಯಾರೂ ಕೃಷಿ ಬಗ್ಗೆ ಮನಸ್ಸು ಮಾಡ್ತಿಲ್ಲ ಅನ್ನೋ ಚಿಕ್ಕಪ್ಪ ಅಣ್ಣನನ್ನು ಒತ್ತಾಯದಿಂದ ಪಟ್ಟಣ ಕಳುಹಿಸಿದ್ಯಾಕೆ?
ನನ್ನಲ್ಲಿ ಮೌನವೊಂದು ಉಳಿದಿತ್ತು. ಬಿಸಿಲಿನ ತಾಪಕ್ಕೆ ಪಾದ ಮರಳಿನಿಂದ ಸುಡುತ್ತಿದೆ, ಮನಸ್ಸಿನ ಹಾಗೆ. ನನ್ನೊಳಗೆ ಬಿಟ್ಟ ಸ್ಥಳವಿದೆ ಮಾತ್ರ, ನಿಮ್ಮ ಬಳಿ ಉತ್ತರ ಇರಬಹುದೆಂದು ವಿಳಾಸ ನೀಡಿದ್ದೇನೆ ಸಿಕ್ಕರೆ ಉತ್ತರ ನೀಡುವಿರೆಂದು ನಂಬಿದ್ದೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ