ಸ್ಟೇಟಸ್ ಕತೆಗಳು (ಭಾಗ ೧೪೧೫) - ನೋಡುತ್ತಾರೆ

ಸ್ಟೇಟಸ್ ಕತೆಗಳು (ಭಾಗ ೧೪೧೫) - ನೋಡುತ್ತಾರೆ

ಸಂಜೆ ಹೊತ್ತು ತಿನ್ನೋದಕ್ಕೆಂದಲೇ ಸಾಲು ಅಂಗಡಿಗಳು ರಸ್ತೆ ಬದಿಯಲ್ಲಿ ನಿಂತಿರುತ್ತವೆ, ಆ ದಿನ ತಾಯಿ ಮಗಳು ಆ ರಸ್ತೆ ಬದಿಯಲ್ಲಿದ್ದ ತಿಂಡಿ ತಿಂದಾದ ಮೇಲೆ ಅಮ್ಮ ಕೈಯೊರೆಸಿದ ದಿನಪತ್ರಿಕೆಯ ತುಂಡನ್ನು ಅಲ್ಲೇ ಎಸೆದುದನ್ನ ಕಂಡು ಮಗಳು ಅದೇ ಕೆಲಸವನ್ನು ಮುಂದುವರಿಸಿದಳು, ತಾಯಿ ಮಾಡಿದ್ದೆ ಸರಿ ಎಂದುಕೊಂಡಳು, ಬಸ್ಸಿನಲ್ಲಿ ಪಯಣಿಸುತ್ತಿದ್ದ ಅಪ್ಪ ಕಿಟಕಿಯ ಹೊರಗೆ ಕಾಣುವ ಜಗತ್ತನ್ನು ಕಾಣುವುದನ್ನು ಬಿಟ್ಟು ಕೈಯಲ್ಲಿ ದ ಮೊಬೈಲ್ ಒಳಗೆ ಮುಳುಗಿದ್ದನ್ನ ಕಂಡು ಮಗ ಅಮ್ಮನ ಕೈಯಲ್ಲಿ ಇರುವ ಮೊಬೈಲ್ ಅನ್ನು ಕಿತ್ತುಕೊಂಡು ತಾನು ಮೊಬೈಲ್ ನೋಡೋದಕ್ಕೆ ಆರಂಬಿಸಿದ, ಪ್ರತಿದಿನ ಸಂಜೆ ಆದರೆ ಸಾಕು ಶಾಲೆಯ ಪಕ್ಕದಲ್ಲಿರುವ ಕಂಪ್ಯೂಟರ್  ಆಟದ ಅಂಗಡಿಗೆ ಓಡುತ್ತಿದ್ದ ಮಗ ಈಗ ಅಪ್ಪ ಅಮ್ಮ ಪ್ರತಿದಿನ ಗ್ರಂಥಾಲಯದಲ್ಲಿ ಸಮಯ ಕಳೆಯುವುದನ್ನು ಕಂಡು ತಾನೂ ಅಭ್ಯಾಸ ಶುರುವಿಟ್ಟುಕೊಂಡಿದ್ದಾನೆ. ಶಾಲೆಗೆ ಹೋಗುತ್ತಿದ್ದ ಹುಡುಗನ ಬಾಯಲ್ಲಿ ಅಪ್ಪ-ಅಮ್ಮ ಪ್ರತಿದಿನ ರಾತ್ರಿ ಆಡುತ್ತಿದ್ದ ಕೆಟ್ಟ ಮಾತುಗಳು ದಿನವೂ ಉದುರಲು ಪ್ರಾರಂಭಿಸಿದೆ. ಮೌನದಿಂದ ಎಲ್ಲರ ಮಾತನ್ನ ಆಲಿಸುತ್ತಿದ್ದ ಅಮ್ಮನ ಗುಣವನ್ನು ಕಂಡು ಮಗಳು ಅದನ್ನೇ ಅನುಸರಿಸಿದ್ದಾಳೆ ಇದೆಲ್ಲವನ್ನು ಕಂಡಾಗ ನಮ್ಮ ದೇಶದ ಭವಿಷ್ಯ ಪ್ರಸ್ತುತ ಹೆತ್ತವರ ಕೈಯಲಿದೆ ಅವರನ್ನೇ ಅನುಸರಿಸುವ ಮಕ್ಕಳು ಮುಂದೆ ಅವರಂತೆ ಆಗಿಬಿಡುತ್ತಾರೆ ಅನ್ನೋದು ಅರ್ಥವಾಯಿತು... ಇನ್ನು ಪ್ರತೀ ದಿನ‌ ಎಚ್ಚರವಾಗಿರಬೇಕು ಅನ್ನೋದು  ರಾಜೇಶನಿಗೆ ಅರ್ಥವಾಯಿತು
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ