ಸ್ಟೇಟಸ್ ಕತೆಗಳು (ಭಾಗ ೧೪೨೦) - ಕೋಳಿ

ಇವತ್ತು ಬಿಡುವಾಗಿದ್ದಾಗ ಮನೆಯಲ್ಲಿ ಕುಳಿತಿದ್ದೆ ಅಪ್ಪ ಕೋಳಿ ಅಂಕಕ್ಕೆ ತೆಗೆದುಕೊಂಡು ಹೋಗುವ ಕೋಳಿ ಮನೆಯಲ್ಲಿ ಯಾರೂ ಇಲ್ಲದನ್ನ ನೋಡಿ ನನ್ನ ಜೊತೆಗೆ ಮಾತನಾಡಲು ಶುರು ಮಾಡಿತು. ನೋಡು ಮಾರಾಯ, ನಿನ್ನ ಜೀವನಕ್ಕೆ ಒಂದು ಅರ್ಥ ಇದೆಯಾ? ನಮ್ಮಷ್ಟು ಶ್ರೇಷ್ಠ ಜನ್ಮ ನಿಮ್ಮದಾಗುವುದಕ್ಕೆ ಸಾಧ್ಯವೇ ಇಲ್ಲ. ಬದುಕಿದ್ದ ಕ್ಷಣದಲ್ಲೂ ನಮ್ಮ ಮೌಲ್ಯ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಹೋಗುತ್ತೆ ನಮ್ಮ ಮೌಲ್ಯ ಕಡಿಮೆಯಾಗುವುದಿಲ್ಲ. ನಮ್ಮ ಖಾದ್ಯಗಳಿಗೆ ಹೆಚ್ಚು ಹೆಚ್ಚು ಮೌಲ್ಯಗಳು ಸಿಕ್ತಾನೆ ಹೋಗುತ್ತೆ. ನಮ್ಮನ್ನ ವಿವಿಧ ಹೆಸರುಗಳ ಮೂಲಕ ಖಾದ್ಯ ತಯಾರಿಸಿ ಚಪ್ಪರಿಸಿಕೊಂಡು ತಿಂತಾರೆ. ನಮ್ಮ ಮೌಲ್ಯ ಹುಟ್ಟಿನಿಂದ ಸಾಯುವವರೆಗೆ ಕೊನೆಯಾಗುವುದೇ ಇಲ್ಲ ಮೊಟ್ಟೆಯಿಂದ ದೊಡ್ಡವರಾಗಿ ಸತ್ತ ಮೇಲೂ ಕೂಡ. ಆದರೆ ನೀವು ಸಾಯುವವರೆಗೆ ಮಾತ್ರ ಒಂದಷ್ಟು ಮೌಲ್ಯ ಸಂಪಾದಿಸಿಕೊಳ್ಳುತ್ತೀರಿ ಸತ್ತ ಮೇಲೆ ನಿಮ್ಮನ್ನ ನಿಮ್ಮ ಮನೆಯೊಳಗೆ ಇಡುವುದಿಲ್ಲ. ಹೂತು ಹಾಕ್ತಾರೆ ಅಥವಾ ಸುಟ್ಟು ಹಾಕ್ತಾರೆ. ಹಾಗಾಗಿ ಪ್ರತಿದಿನ ನನಗೆ ಕಾಳು ಹಾಕ್ತಾ ಇದಿಯಲ್ಲ ಇನ್ನಾದ್ರೂ ಸ್ವಲ್ಪ ಗೌರವದಿಂದ ಕಾಳು ಹಾಕು. ಯಾಕೆಂದರೆ ನಿನಗಿಂತ ಹೆಚ್ಚು ಮೌಲ್ಯವನ್ನು ನಾನು ಸಂಪಾದಿಸಿದ್ದೇನೆ ಅರ್ಥವಾಯಿತಾ... ನನಗೆ ಏನೂ ಉತ್ತರ ಕೊಡುವುದಕ್ಕೆ ಆಗಲಿಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ