ಸ್ಟೇಟಸ್ ಕತೆಗಳು (ಭಾಗ ೧೪೨) - ನೀವಾದರೂ ಸಹಾಯ ಮಾಡಿ
ಸಿಟ್ಟು ಬೇಸರವೂ ನಾನರಿಯೆ? ಈ ದಿನ ಕಥೆಯೊಳಗೆ ಬನ್ನಿ ಅಂತ ಕೇಳಿದರೂ ಒಬ್ಬರದೂ ಸುದ್ದಿ ಇಲ್ಲ. ಕೊನೆಗೆ ಬೇಡಿದರೂ ಯಾರೂ ಬರೋಕೆ ತಯಾರಿಲ್ಲ. ಕಾರಣವೇನೆಂದು ಹೇಳೋಕೂ ತಯಾರಿಲ್ಲ. "ಇವನೇನು ದಿನಕ್ಕೆ ನಾಲ್ಕು ಗೆರೆ ಗೀಚುತ್ತಾನೆ" ಅಂತಾನ, ನಮ್ಮೊಳಗಿನ ಮಾತನ್ನು ಬಿಟ್ಟು ಅವನಿಗನ್ನಿಸಿದನ್ನ ಬರಿತಾನೆ ಅಂತಾನಾ, ಯಾರು ನೋಡಿರದ ನಮ್ಮನ್ನು ಸುಮ್ಮನೆ ಪ್ರಚಾರ ಮಾಡಿದ ಅಂತಾನೆ, ಯಾವುದು ಅಂತಾನೂ ಗೊತ್ತಾಗುತ್ತಿಲ್ಲ. ನಿರರ್ಗಳವಾದ ಪದಪುಂಜಗಳಿಗೆ ಸೇರಿ ಹಾಳೆಯ ಮೇಲೆ ಉರುಳಾಡುತ್ತಿದ್ದವ ಈ ದಿನ ಹಾಳೆಯಿಂದ ಜಾರಿ ಬದಿಗೆ ಸರಿದಿದ್ದಾನೆ, ಒಂದು ಕಡೆ ಕೂತು ಮಾತನಾಡಲೇ ಬೇಕು. ಸಮಸ್ಯೆಗಳನ್ನು ಅಲ್ಪವಿರಾಮ ಬಿಟ್ಟು ಮುಂದುವರಿಸುವುದಕ್ಕಿಂತ ಪೂರ್ಣವಿರಾಮ ನೀಡಿ ಮುಕ್ತಾಯ ಹಾಡುವುದೇ ಒಳ್ಳೆಯದು. ಪದಗಳಿಲ್ಲದ ಹಾಳೆ ಬಿಕೋ ಎಂದಿದೆ, ಮತ್ತಿಳಿದು ನರ್ತನ ಮಾಡಿ ಓದುಗನೊಳಗೆ ತಲುಪಬೇಕಿದೆ ಅಕ್ಷರ. ನೀವಾದರೂ ಅವನಿಗೆ ನನ್ನ ಕಥೆಯೊಳಗೆ ಬರೋಕೆ ಹೇಳ್ತೀರಾ? ನಿಮ್ಮ ಮಾತನ್ನಾದರೂ ಆಲಿಸಬಹುದು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ