ಸ್ಟೇಟಸ್ ಕತೆಗಳು (ಭಾಗ ೧೭೬) - ಸೌಂದರ್ಯ

ಸ್ಟೇಟಸ್ ಕತೆಗಳು (ಭಾಗ ೧೭೬) - ಸೌಂದರ್ಯ

ಯಾಕೋ ಎಲ್ಲರ ಮೊಬೈಲ್ ನಲ್ಲಿ ಅವರವರ ಚಂದದ ಫೋಟೋಗಳ ಸಾಲು ಚಿತ್ರಗಳು. ಅದಕ್ಕೊಂದಿಷ್ಟು ವರ್ಣಾಲಂಕಾರ, ಹಾಡುಗಳು ಹಿನ್ನೆಲೆಗೆ. ನನ್ನ ಪೋಟೋ ತೆಗೆಯೋರು ಇಲ್ಲ. ತೆಗೆದರೆ ನಾನಷ್ಟು ಅಂದವಾಗಿಯೂ ಕಾಣುವುದಿಲ್ಲ. ಇದೇ ಬೇಸರದಲ್ಲಿ ಜಗಲಿಯಲ್ಲಿ ಕೂತಿದ್ದಾಗ ಅಜ್ಜಿ ಬಂದು ಎಲೆ ಅಡಿಕೆ ಹಾಕ್ತಾ "ಏನೋ ಯಾವಾಗಲೂ ಮಂಗನ ತರಹ ಆಡ್ತಾ ಇದ್ದೆ. ಇವತ್ತೇನು ಮುಖ ಮಗನ ಕುಂಡೆ ಹಾಗಾಗಿದೆ " ಅಂದ್ರು ಕೇಳೋರು ಸಿಕ್ಕಾಗ ಹೇಳೋದನ್ನ ಬಿಡ್ತೀವಾ. ನನ್ನ ನೋವನ್ನ ಹೇಳಿದೆ. ಅದಕ್ಕೆ ಅಜ್ಜಿ ,"ಮಂಗ ಕೇಳು ನಾನು ನಿನ್ನ ವಯಸ್ಸಿಗೆ ಸುಂದರಿನೇ ಗುಳಿ ಬೀಳ್ತಿತ್ತು ಕೆನ್ನೆ ಮೇಲೆ. ಈಗ ನೋಡು ನೆರಿಗೆಗಳು ಸ್ಪರ್ಧೆಗಿಳಿದು ಬಿಟ್ಟಿದೆ. ಅವರದೆಲ್ಲ ಸೌಂದರ್ಯ ಅಲ್ಲ. ಅದು ವಯಸ್ಸಿನದು. ಚರ್ಮ ಮತ್ತು ಅದರ ಬಣ್ಣ ಸತ್ಯ ಅಲ್ಲ ಮಗ. ಕೊನೆಗೆ ನಿನಗೆ ಬೇಕಾಗಿರುವುದು ಕೈ ಹಿಡಿಯೋರು, ಕೊನೆವರೆಗೂ ಜೊತೆಯಾಗಿನ ನಡೆಯೋರು. ಸೌಂದರ್ಯ ಅಲ್ವಲ್ಲಾ? ಅವರವರು ಅವರವರಿಗೆ ಅಂದಾನೇ. ತೆಳ್ಳಗೆ, ಸಣ್ಣ, ಉದ್ದ, ಬಿಳಿ, ಕಪ್ಪು, ಕುರೂಪಿ, ದಪ್ಪ ಇದ್ಯಾವುದೂ ನೀನಲ್ಲ. ನಿನ್ನನ್ನು ಇದು ಗುರುತಿಸುವುದು ಇಲ್ಲ.  ನೀನು ನೀನಾಗೇ  ಬದುಕು. ನಿನಗಾಗಿಯೇ ಬದುಕು".

ಅಜ್ಜಿ ಮಾತು ಕೇಳಿ ಒಮ್ಮೆಲೆ ಮೈ ಜುಮ್ಮಂತು. ನನಗೆ ನಾನೇ ಚಂದ ಸಾಕಲ್ವಾ? ಸರಿ, ಮಳೆ ಬರೋಕೆ ತಯಾರಾಗಿದೆ ಕಟ್ಟಿಗೆ ಒಳಗೆ ಹಾಕಬೇಕು. ಅಮೇಲೆ ಅಮ್ಮ ಬೈತಾರೆ. ನಾನೇ ರಾಜಕುಮಾರ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ