ಸ್ಟೇಟಸ್ ಕತೆಗಳು (ಭಾಗ ೧೭೭) - ಅವರು
ಕತ್ತಲೆ ಮಲಗಿತ್ತು. ಗಾಢನಿದ್ರೆಯ ಪರದೆಗಳು ಒಂದೊಂದಾಗಿ ಮುಚ್ಚುತ್ತಿದ್ದವು. ಡಬ್ ಡಬ್ ಶಬ್ದ, ಎದೆಬಡಿತವೇ ಎಂದುಕೊಂಡರೆ ಅಲ್ಲ ಬಾಗಿಲ ಬಡಿತ. ಜನರಿಲ್ಲದ ಊರಿನಲ್ಲಿ ಯಾರದು? ಏಳುವ ಮನಸ್ಸು ಇಲ್ಲದಿದ್ದರೂ ಆ ಬಡಿತದಲ್ಲೊಂದು ಕಾತುರತೆಯ ಯಾತನೆ ಕೇಳಿಸುತ್ತಿತ್ತು. ಎದ್ದು ಬಾಗಿಲು ತೆರೆದರೆ ಅಲ್ಲಿರುವವರು ನನ್ ಹಾಗೇ ಇರೋರಲ್ಲ. ಅಂದರೆ ದಿನವೂ ಕಾಣುವವರೇ ಒಂದಷ್ಟು ನೋವು ಆಕ್ರೋಶ ಬೇಡಿಕೆಗಳ ಪಟ್ಟಿಗಳನ್ನ ಇಟ್ಟುಕೊಂಡು ನಿಂತಿದ್ದರು. ವನ್ಯಜೀವಿಗಳ ಸಣ್ಣ ಹಿಂಡು ಧರಣಿಗೆ ಬಂದ ಹಾಗೆಯೇ ಕೂಡಿದ್ದವು .
ಒಂದಿನವೂ ನನ್ನ ಭಾಷೆಯಲ್ಲಿ ಮಾತನಾಡದ ಅವುಗಳಿಗೆ ಇಂದು ಮಾತು ಬಂದಿತ್ತು. ಅದು ನೋವಿನ ಕರುಳು ಕಿವುಚಿ ಉಸಿರುಕಟ್ಟಿದ್ದರಿಂದ ಉಂಟಾದ ಮಾತು ."ನೀವೇ ಹೇಳಿ, ಸಾರ್ ಇದು ಮಾತ್ರನಾ ನಾವಿರುವ ಜಾಗ, ನಮ್ಮಜ್ಜ ಹೇಳ್ತಾಯಿದ್ರು ಒಂದಾನೊಂದು ಕಾಲದಲ್ಲಿ ಅನ್ನೋ ಕತೆಯಲ್ಲಿ ಆ ಜನರಿರುವ ಊರಿಗಿಂತ ಹತ್ತು ಮೈಲಿ ಆಚೆಯವರಿಗೆ ನಮ್ಮದೇ ಜಾಗವಂತೆ. ನಮ್ಮನ್ನು ಓಡಿಸಿ ನೀವು ಅಲ್ಲಿ ನಿಂತಿರಿ. ನಾವೇನ್ ಅಂದಿಲ್ಲ. ಕಾಡ ಭೇದಿಸಿ ರಸ್ತೆ ಮಾಡಿದ್ದೀರಿ, ಒಳ ಬರುತ್ತಿದ್ದೀರಿ. ಮೌನವಾಗಿರೋದು ಎಷ್ಟು ದಿನ. ನಾವು ಊರು ನೋಡೋಕೆ ಬಂದರೆ ,ನೀವು ಬೊಬ್ಬೆ ಹೊಡೆದು ಪ್ರತಿಭಟನೆ, ನಮ್ಮನ್ನ ಸಾಯಿಸಲು ಅನುಮತಿ ಕೇಳುತ್ತಿದ್ದರಂತೆ? ನಮ್ಮನ್ನು ನೀವು ನೋಡೋಕೆ ಮೃಗಾಲಯಕ್ಕೆ ಹೋಗ್ತೀರಲ್ಲಾ ಅಲ್ಲಿ ನಾವೇನಾದರೂ ನಿಮ್ಮನ್ನು ಸಾಯಿಸಿದ್ದೆವಾ? ಪ್ರತಿಭಟನೆ ಮಾಡಿದ್ದೇವಾ? ಇಲ್ಲವಲ್ಲ.
ನಿಮ್ಮ ಊರಿನ ಬೇಲಿಗಳಲ್ಲಿ ಕರೆಂಟ್ ಬಂದಿದೆ, ಆಸೆಗಳ ಬೇಲಿ ಮುರಿದಿದೆ. ನಿಮ್ಮ ಉಪಟಳ ಹೆಚ್ಚಾದರೆ ನಾವು ನುಗ್ಗುತ್ತೇವೆ, ನೀವು ಪಲಾಯನ ಮಾಡಲೇಬೇಕು. ನಮ್ಮ ನೆಲ ನಮ್ಮ ಹಕ್ಕು!" "ಅಂಕಲ್ ನೀವಾದರೂ ನಿಮ್ಮವರಿಗೆ ಹೇಳಿ, ನಮ್ಮಮ್ಮ ಆಕ್ಸಿಡೆಂಟಲ್ಲಿ ಹೋಗಿಬಿಟ್ಟರು,
ನಿಮ್ಮ ಬೇಟೆಗೆ ಚಿಕ್ಕಪ್ಪ ಬಲಿಯಾದರು, ಬಾಂಬಿಗೆ ಪಕ್ಕದ ಮನೆ ಅಣ್ಣ? ನಾವು ಯಾವತ್ತೂ ಉಸಿರೆತ್ತಲಿಲ್ಲ. ಇನ್ನೂ ನಿಮ್ಮ ಉಸಿರು ಖಂಡಿತಾ ನಿಲ್ಲಿಸುತ್ತೇವೆ. ನಿಮ್ಮದೇ ನೆನಪಿಟ್ಟುಕೊಳ್ಳಿ. ನಮ್ಮ ಕೂಗನ್ನು ನಿಮ್ಮವರಿಗೆ ತಿಳಿಸಿ. ನೀವು ಮಲ್ಕೊಳ್ಳಿ ಸಾರ್". ಹೊರಟವು ಕ್ರಾಂತಿಯ ಕಿಡಿಗಳು, ಭಯ ಹೆಚ್ಚಾಗಿತ್ತು. ಅದೇ ಮಾತನ್ನು ಪತ್ರದ ಮೂಲಕ ನಿಮಗೆ ತಿಳಿಸಿದ್ದೇನೆ ......ಇನ್ಮು ನೀವುಂಟು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ