ಸ್ಟೇಟಸ್ ಕತೆಗಳು (ಭಾಗ ೧೮೪) - ಭ್ರೂಣ

ಸ್ಟೇಟಸ್ ಕತೆಗಳು (ಭಾಗ ೧೮೪) - ಭ್ರೂಣ

ಮಾಂಸದ ಮುದ್ದೆಯಾಗಿದ್ದೆ. ಹಸಿವು ರುಚಿ ವಾಸನೆಗಳ ಅರಿವಿತ್ತೋ ಇಲ್ಲವೋ ಗೊತ್ತಿಲ್ಲ. ಅಲ್ಲಿನ ಬೆಚ್ಚಗಿನ ಜಾಗ ಹಿತವೆನಿಸಿತ್ತು. ಇಲ್ಲೇ ಇರೋಣ ಎಂದರೆ ಬಿಡಲಿಲ್ಲ. ಬಲವಂತದಿಂದ ಹೊರತಂದರು. ನಾನು ಕಂಡಿರದ ರೂಪಗಳು  ಎದುರಿದ್ದವು. ಭಯವೆನಿಸಿತು. ಜೋರಾಗಿ ಅತ್ತೆ. ಎಲ್ಲರೂ ನಕ್ಕರು ಸಂಭ್ರಮಿಸಿದರು. ನನ್ನ ಬರಿಯ ದೇಹಕ್ಕೆ ಬಟ್ಟೆ ಬಂತು, ಮಾಂಸದ ಮುದ್ದೆಗೆ ಕೈಕಾಲು ತಲೆ ಅಂಗಾಂಗಗಳು ಇದ್ದರೆ ಸಾಕಾಗೋದಿಲ್ಲವೇನು ಅನಿಸಿತು. ಅದಿಕ್ಕೆ ಜಾತಿಯೊಂದರ ಹೆಸರಿಟ್ಟರು. ಮನೆತನದ ಹೆಸರು ಬಂತು. ಜೊತೆಗೆ ಭಾಷೆಯೊಂದು ನಾಲಿಗೆಗೆ ಹತ್ತಿರವಾಯಿತು. ಖಾಲಿ ಮನಸ್ಸಿನೊಳಗೆ ಕೋಪ ಸಿಟ್ಟು ಪ್ರೀತಿ-ದ್ವೇಷ ಎಲ್ಲವೂ ತುಂಬಿಸಿದರು. ಖಾಲಿ ಮಾಡೋದನ್ನ ಯಾರು ಕಲಿಸಲಿಲ್ಲ. ಎಲ್ಲರೂ ತುಂಬಿಸುವವರೇ ಆದರು . ನನಗೆ ಉಪದೇಶವಾಯಿತು ಅದು ಕೆಟ್ಟದ್ದು, ಅಲ್ಲಿಗೆ ಹೋಗಬೇಡ, ಮುಟ್ಟಬೇಡ, ತಿನ್ನಬೇಡ, ಬೇಡಗಳ ಪಟ್ಟಿ ಬೆಳೆಯುತ್ತಿದೆ. ನೀನು ಮೌಲ್ಯಯುತ ಮಾನವನನ್ನು ನಿರ್ಮಿಸಬೇಕಾಗಿದೆ. ಮೌಲ್ಯಗಳನ್ನು ನಿನ್ನೊಳಗೆ ಬೆಳೆಸಿಕೊಳ್ಳಬೇಕಾಗಿದೆ ಅಂದರು.

ಹಾಗಾದ್ರೆ ಇಷ್ಟರವರೆಗೆ ಯಾರು ಮೌಲ್ಯಯುತ ಮಾನವನನ್ನು ನಿರ್ಮಿಸಲೇ ಇಲ್ಲವಾ ? ಅದ್ಯಾಕೆ ನಮ್ಮ ಹುಟ್ಟುಗುಣ ವಾಗದೆ ಹೊರಗಡೆಯಿಂದ ತುಂಬಿಸಿಕೊಳ್ಳುತ್ತಿದ್ದೇವೆ. ಸಣ್ಣವನಿದ್ದಾಗ ಕಲಿಯದ ನನ್ನ ತಪ್ಪಾ, ಕಲಿಸದ ಅವರ ತಪ್ಪಾ ಗೊತ್ತಿಲ್ಲ. ಈಗ ಹಸಿವು ರುಚಿ ವಾಸನೆಗಳು ಒಂದೊಂದು ತರದ ಪಾಠವನ್ನೇ ಕಲಿಸುತ್ತಿವೆ. ಬೆತ್ತಲೆ ದೇಹ ಸಿಂಗಾರಗೊಂಡಿದೆ , ಬಟ್ಟೆ ಧರಿಸಿ ಮೆರೆಯುತ್ತಿದೆ, ಹಾರುತಿದೆ, ಮತ್ತೆ ಬೆತ್ತಲೆಯಾಗಿ ಬೂದಿಯಾಗುವ ಯೋಚನೆಯೂ ಇಲ್ಲದೆ ಉರಿಯುತ್ತಿದೆ ಜೀವಂತವಾಗಿ ಅಹಂಕಾರದಿಂದ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ