ಸ್ಟೇಟಸ್ ಕತೆಗಳು (ಭಾಗ ೧೮೫) - ನರ್ಸ್

ಸ್ಟೇಟಸ್ ಕತೆಗಳು (ಭಾಗ ೧೮೫) - ನರ್ಸ್

"ಲೇ ನಿನಗೆ ಹೇಳೋದು ಇಷ್ಟು ದಿನ 8000 ಸಂಬಳಕ್ಕೆ ಕೆಲಸ ಮಾಡ್ತೀಯಾ? ಇದಕ್ಕಿಂತ ದೊಡ್ಡ  ಕೆಲಸ ಇದೆ ಅದನ್ನು ಮಾಡು. ಇದರಲ್ಲಿ ಎಲ್ಲ ರೋಗಿಗಳು ಜೊತೆ ಇರಬೇಕು, ನಿಮ್ಮ ದುಡಿಮೆಗೆ ಸರಿಯಾದ ಸಂಬಳ ಸಿಗೋದಿಲ್ಲ. ಅವರ ಬೈಗುಳ ಕೇಳಬೇಕು, ಎಲ್ಲ ಕೆಲಸ ಮಾಡಬೇಕು. ಅದಕ್ಕಿಂತ ನಮ್ಮ ಕಂಪನಿಲಿ ಕೆಲಸ ನೋಡುತ್ತೇನೆ. ಅಲ್ಲಿ 15 ಸಾವಿರ ಕೊಡುತ್ತಾರೆ ಆರಾಮಾಗಿ ಇರಬಹುದು. 

"ನೋಡು ಏನು ಬೇಕಾದರೂ ಹೇಳು, ಆದರೆ ನಾನು ನನ್ನ  ಈ ನರ್ಸ್ ಕೆಲಸ ಬಿಟ್ಟು ಬರುವುದಿಲ್ಲ. ಎಲ್ಲರನ್ನೂ ಮನುಷ್ಯರಾಗಿ ನೋಡುವ ಏಕೈಕ ಕೆಲಸ ಅಂದರೆ ನಮ್ಮದು. ಅವರು 8000 ಕೊಟ್ರೂ ಮನಸ್ಸಿಗೆ ನೆಮ್ಮದಿ ಇದೆ. ಹೆಣ್ಣು-ಗಂಡು, ಸಣ್ಣವರು ದೊಡ್ಡವರು, ಅಜ್ಜ-ಅಜ್ಜಿ ಯಾರೇ ಬಂದರೂ ಅವರು ನಮಗೆ ಕೇವಲ ಮನುಷ್ಯರು. ನಿನಗನಿಸಬಹುದು ಮಲಮೂತ್ರ ತೆಗಿಬೇಕು, ಗಾಯ ಒರೆಸಬೇಕು ಅಂತ. ಆದರೆ ನಾವು ನಿಮ್ಮ ಹಾಗೆ ಜಾತಿ, ಲಿಂಗ, ದುಡ್ಡು, ಇದ್ಯಾವುದರ ಕನ್ನಡಕ ಹಾಕಿಕೊಂಡು ಕೆಲಸ ಮಾಡುವುದಿಲ್ಲ. ಅವನೊಬ್ಬ ಮನುಷ್ಯ ಅನ್ನೋದನ್ನ ನಂಬಿಕೊಂಡು ಕೆಲಸ ಮುಂದುವರೆಸುತ್ತೇವೆ. ನಿಮ್ಮ ಆರೋಗ್ಯ ವೃದ್ಧಿಗೆ ಸಹಕರಿಸುತ್ತೇವೆ. ಕೊನೆ ಕ್ಷಣದ ಉಸಿರು ನಿಲ್ಲುವ ಸಂದರ್ಭದಲ್ಲಿ ಕೈಹಿಡಿದು ಜೊತೆಗಿರುತ್ತೇವೆ. ಧೈರ್ಯ ತುಂಬುತ್ತೇವೆ. ಯಾರೂ ಇಲ್ಲದಿದ್ದಾಗ ಜೊತೆಗಿರುತ್ತೇವೆ. ದಿನಕ್ಕೆ ಹಲವು ಮುಖಗಳನ್ನು ದಾಟಿದರೆ, ಸಾವಿರ ಕಥೆಗಳು, ನೋವಿನ ಕಣ್ಣೀರು, ಸಾವಿನ ಸೂತಕ ಎಲ್ಲವೂ ಕಣ್ಣಮುಂದೆ ಘಟಿಸುತ್ತವೆ. ಅದು ನಮಗೆ ಬದುಕಿನರ್ಥವ ತಿಳಿಸಿದೆ. ಆರೈಕೆ ಮಾಡುವ ಅದ್ಭುತ ಕೆಲಸವನ್ನು, ಮನಸ್ಸುಗಳಲ್ಲಿ ದೇವರ ಕಾಣುವ ಈ ಕೈಂಕರ್ಯವನ್ನು ಬಿಟ್ಟು ಬರುವುದಿಲ್ಲ, ಇದು ಖಂಡಿತ. ನೀನು ಮುಂದುವರಿಯಬಹುದು. ನನಗಿದೆ ಜೀವ ಇದೇ ಜೀವನ ..." ನಗುತ್ತಾ ಹೆಮ್ಮೆಯಿಂದ ತಲೆಯೆತ್ತಿ ಒಳ ನಡೆದಳು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ