ಸ್ಟೇಟಸ್ ಕತೆಗಳು (ಭಾಗ ೧೯೫) - ಹಚ್ಚೆ
ಅವನದು ದುಡಿಮೆಯ ವಯಸ್ಸಾಗಿದ್ದರೂ, ಶಿಕ್ಷಣವನ್ನ ಮನೆಯವರು ನೀಡಿದ್ದರೂ ಮನೆಯಲ್ಲೇ ತಿಂದುಂಡು ಆರಾಮವಾಗಿದ್ದ. ಗೆಳೆಯರೊಂದಿಗೆ ಆಟ, ತಿರುಗಾಟ, ಜೂಜಾಟ ದಿನಂಪ್ರತಿ ಅಭ್ಯಾಸಗಳು. ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗೋರು. ಇವನ ಶೋಕಿಗೆ ಅವರು ಬೆವರು ಹರಿಸೋರು. ಯಾವುದೋ ಚಲನಚಿತ್ರದಲ್ಲಿ ನೋಡಿದ ಟ್ಯಾಟೋ ಒಂದನ್ನ ಕೈಮೇಲೆ ಧರಿಸಬೇಕು ಅನ್ನುವ ಕಾರಣಕ್ಕಾಗಿ ನಾಲ್ಕು ಸಾವಿರ ರುಪಾಯಿ ಮನೆಯಲ್ಲಿ ಕೇಳಿದ. ಇಲ್ಲವೆಂದದ್ದಕ್ಕೆ ಜಗಳ, ರಂಪಾಟ, ಉಪವಾಸ. ಮನೆ ಬಿಟ್ಟು ಹೋಗುತ್ತೇನೆ ಎಂದದ್ದಕ್ಕೆ ನೀಡಿದರು. ಪಡೆದುಕೊಂಡು ಅಂಗಡಿಗೆ ತೆರಳಿ ಟ್ಯಾಟೋವನ್ನ ಕೈಯಲ್ಲಿ ಧರಿಸಿಯೇ ಬಿಟ್ಟ.
ಮನೆಗೆ ಬರುವಾಗ ತಡವಾಗಿತ್ತು ಮನೆಯಲ್ಲಿ ಎಲ್ಲ ಮಲಗಿದ್ದರು. ಇದು ದಿನಂಪ್ರತಿಯಂತೆ. ಇವನ ಕೋಣೆಗೆ ಹಾದು ಹೋಗಬೇಕಾದರೆ ವರಾಂಡವನ್ನ ದಾಟಿಯೇ ಹೋಗಬೇಕು. ಕಾಲಿಗೆ ಏನಾದರೂ ಅಡ್ಡ ಸಿಕ್ಕಿತು ಎಂದು ಬೆಳಕನ್ನು ಹಾಕಿದ. ನೆಲ ನೋಡಿ ನಡೆಯುವಾಗ ಅಪ್ಪನ ಪಾದ ಕಾಣಿಸಿತು. ದೊಡ್ಡದಾದ ಗಾಯವೊಂದಕ್ಕೆ ಬಟ್ಟೆ ಸುತ್ತಿದ್ದರು. ರಕ್ತ ಕಾಲಿನಿಂದ ಹೊರಬಂದು ಬಟ್ಟೆಯನ್ನು ದಾಟಿ ನೆಲಕ್ಕೆ ಇಳಿಯುತ್ತಿತ್ತು. ಅದರ ಮದ್ದಿಗೆ ತೆಗೆದಿಟ್ಟ ದುಡ್ಡನ್ನ ಇವನೋ ಟ್ಯಾಟೋ ಹಾಕಿಸಿಕೊಂಡು ಬಂದಿದ್ದ. ಅವರು ಗಾಯಗೊಂಡು ನೋವು ಅನುಭವಿಸಿ ಹಣ ಸಂಪಾದನೆ ಮಾಡಿದರೆ, ಇವನೋ ಹಣಕೊಟ್ಟು ನೋವು ಅನುಭವಿಸಿ ಶೋಕಿ ಮಾಡುತ್ತಿದ್ದ. ಅವತ್ತು ಅವನಿಗೆ ಹಚ್ಚೆ ಹಾಕಿಸಿದ ನೋವಿಗಿಂತ ಹೆಚ್ಚು ಮನಸ್ಸಿಗೆ ನೋವಾಯಿತು. ಬೆಳಗ್ಗಿನವರೆಗೂ ತಂದೆಯ ಪಾದದ ಬಳಿ ಕುಳಿತಿದ್ದ. ಬೆಳಗ್ಗೆ ಅಪ್ಪನನ್ನ ಮನೆಯಲ್ಲಿ ಕುಳ್ಳಿರಿಸಿ ಅಪ್ಪನ ಗಾರೆ ಕೆಲಸದ ಕಡೆಗೆ ಹೊರಟ. ತಿಂಗಳ ನಂತರ ದುಡಿಮೆಯ ಮೊದಲ ಸಂಬಳ ಪಡೆದಾಗ ಟ್ಯಾಟೂ ಹಚ್ಚಿಸಿಕೊಂಡ ಆನಂದಕ್ಕಿಂತಲೂ ಅಪ್ಪನ ಮುಖದ ನಗು ಶಾಶ್ವತ ಹಚ್ಚೆಯಾಗಿ ಅವನ ಮನಸ್ಸಿನಲ್ಲಿ ಉಳಿಯಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ