ಸ್ಟೇಟಸ್ ಕತೆಗಳು (ಭಾಗ ೨೦೭) - ಮಸಣವಾಸಿ
ಮಸಣದ ಕಂಪೌಂಡಿಗೆ ಹೊಂದಿಕೊಂಡೇ ಅವನ ಮನೆ. ಸಣ್ಣ ಜೋಪಡಿ. ವಾಸನೆಗೆ ಮೂಗು ಒಗ್ಗಿ ಹೋಗಿದೆ. ಸಾವು ದಿನವೂ ಭೇಟಿಯಾಗುವ ಆತ್ಮೀಯ ಸ್ನೇಹಿತನಾಗಿದ್ದಾನೆ. ನಾಲ್ಕು ಗೋಡೆಗಳು ಸುಭದ್ರವಲ್ಲದ್ದಿದ್ದರೂ ಮನೆಯಲ್ಲಿ ವಾಸಿಸುವುದು ಅವನೊಬ್ಬನೇ.
ಅವನ ಹಲವು ದಿನಗಳ ಯೋಚನೆಗಳಿಗೆ ಇಂದು ಉತ್ತರ ದೊರಕಿದೆ. ಅಲ್ಲಿ ಮಸಣದೊಳಗೆ ಚಿತೆಯ ಮೇಲೆ ಮಲಗಿದ ದೇಹಗಳು ಸುಡುವಾಗ ಚಟಪಟ ಸದ್ದನ್ನ ಕಂಡು ಹಲವು ದಿನಗಳ ಪ್ರಶ್ನೆಗಳ ನಂತರ ಅವನು ಕಂಡುಕೊಂಡ ಉತ್ತರ, "ನಾವು ನಮ್ಮೊಳಗೆ ಮುಚ್ಚಿಟ್ಟುಕೊಂಡಿರುವ ಹಲವು ಸತ್ಯ, ನೋವು, ಮೋಸ, ಸುಳ್ಳು, ಕನಸು, ಕಲ್ಪನೆ, ಬಾಂಧವ್ಯ ಇವೆಲ್ಲವೂ ಉಸಿರು ನಿಂತ ಮೇಲೆ ಹೊರಗೆ ಚಲಿಸುವಾಗ ಬೆಂಕಿಯೊಂದಿಗೆ ಘರ್ಷಣೆ ಉಂಟಾಗಿ ಸಿಡಿಯಲು ಆರಂಭಿಸುತ್ತದೆ. ಪ್ರತಿಯೊಂದು ದೇಹದೊಳಗೆ ಇಂತಹ ಭಾವಗಳು ಮೂಟೆಗಳಷ್ಟಿರುತ್ತದೆ. ಮುಖಭಾವ ದಿನಚರಿಯಲ್ಲಿ ನಮಗದು ಕಾಣದಿದ್ದರೂ ಕೇಳದಿದ್ದರೂ ಉಸಿರು ಬಿಟ್ಟು ಹೊರಟ ಮೇಲೆ ಸುಡುವಾಗ ಗೊತ್ತಾಗುತ್ತದೆ."
ಅವನ ಆಸೆ ಏನೆಂದರೆ ನಾ ಸುಡುವಾಗ ಶಬ್ದವಿಲ್ಲದೆ ಸುಡಬೇಕು, ಅದಕ್ಕೆ ಮನಸ್ಸಿಗೆ ತೋಚಿದ್ದನ್ನ ಹೇಳುತ್ತಾನೆ, ಮುಚ್ಚಿಡುವುದಿಲ್ಲ, ಸುಳ್ಳಾಗುವುದಿಲ್ಲ, ನೇರಮಾತು. ಅದಕ್ಕಾಗಿ ಎಲ್ಲರಿಂದ ದೂರಾಗಿ ಒಬ್ಬಂಟಿಯಾಗಿ ಮಸಣವಾಸಿಯಾಗಿದ್ದಾನೆ. ಅವನೂ ಒಂದು ದಿನ ಸಾಯ್ತಾನೆ. ಅವನ ಚಿತೆ ಉರಿವಾಗ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ