ಸ್ಟೇಟಸ್ ಕತೆಗಳು (ಭಾಗ ೨೧೫) - ಮೌನವಾಗಬೇಕು
ಮಲಗಿದವನಿಗೆ ಅಲರಾಂ ಕಿವಿಗೆ ಬಡಿದಾಗ ಒಮ್ಮೆಲೆ ಎಚ್ಚರವಾಯಿತು. ಅಸಾಧ್ಯ ಸಿಟ್ಟು ಕೂಡ ಬಂತು. ಅದೇ ಕ್ಷಣ ಪಕ್ಕದ ಮನೆಯವನು ಹಾಕಿದ ಜೋರು ಹಾಡಿಗೆ ಕಿರಿಕಿರಿ ಸಹಿಸೋಕ್ಕಾಗದೆ ಕಿಟಕಿ ಬಾಗಿಲು ಹಾಕಿ ಕೆಲಸಕ್ಕೆ ಹೊರಟೆ. ಟ್ರಾಫಿಕ್ ಸಿಗ್ನಲ್ ನಲ್ಲಿ ಹಾರ್ನುಗಳ ಶಬ್ದವೇ ದೊಡ್ಡ ತೊಂದರೆ ಕೊಡಲಾರಂಭಿಸಿತು. ಇದೆಲ್ಲಾ ಸಣ್ಣಪುಟ್ಟ ಶಬ್ದಗಳೇ ಇಷ್ಟೊಂದು ನನ್ನನ್ನೇ ಕಾಡುತ್ತಿರುವಾಗ, ನನಗನ್ನಿಸಿದ್ದೇನೆಂದರೆ ಆ ಪರಮಾತ್ಮನಿಗೆ ಎಷ್ಟೆಲ್ಲ ಕಿರಿಕಿರಿಯಾಗಬಹುದು. ನಮ್ಮ ಎಚ್ಚರಕ್ಕೆ ಹಾಡುವ ಹಾಡುಗಳು, ಇಂತಿಷ್ಟು ಸಲ ಕೂಗುವ ಕೂಗುಗಳು, ಅಬ್ಬರದ ಕಿರುಚಾಟಗಳು, ವಾಹನ, ಕಾರ್ಖಾನೆಗಳು ಹೀಗೆ ಅವನ ಸೃಷ್ಟಿ ಅಲ್ಲದೇ ಇರುವ ಶಬ್ದಗಳು. ಈ ಜೋರಿಗೆ ಆತ ಕಿವಿ ಮುಚ್ಚಿ ಕೊಂಡಿದ್ದಾನೆ ಅಂತ ಕಾಣುತ್ತೆ. ಹಾಗಾಗಿ ನಾವು ಏನೇ ಬೇಡಿದರೂ ಎಷ್ಟೇ ಬೇಡಿದರೂ ಆತನಿಗೆ ಕೇಳುವುದಿಲ್ಲ. ಅದಕ್ಕಾಗಿ ಅಕಾಲಿಕ ಮಳೆ, ನೀರಿನೊಳಗೆ ಮುಳುಗಿರುವ ನೆಲ, ಬೆಟ್ಟದಿಂದ ನೀರು ಮಿತಿಮೀರಿ ಹರಿದದ್ದು, ಕೊಚ್ಚಿ ಹೋಗುತ್ತಿರುವ ಜೀವಗಳು, ಮನೆಯೊಳಗೆ ನುಗ್ಗಿದ ನೀರು, ಹೀಗೆಲ್ಲಾ ಆದಾಗ ನಮ್ಮ ಕೂಗು ಕೇಳಿಸದಿದ್ದರೆ ಆತ ಆಲಿಸುವುದು ಹೇಗೆ ?.
ನಾವೊಮ್ಮೆ ಮೌನವಾಗುವ, ಎಲ್ಲ ಶಬ್ದಗಳನ್ನು ನಿಲ್ಲಿಸೋಣ. ಆಗ ಭಗವಂತ ಕಿವಿ ತೆರೆದು ನೋಡಬಹುದು. ಬದುಕಿಗೋಸ್ಕರ ಮೌನಕ್ಕೆ ಜಾರುವುದರಲ್ಲಿ ತಪ್ಪಿಲ್ಲ ಅನ್ಸುತ್ತೆ .
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ