ಸ್ಟೇಟಸ್ ಕತೆಗಳು (ಭಾಗ ೨೧೬) - ಪಕ್ಷಿಗಳೆಲ್ಲಿ?
ನಾನಿರುವ ಊರಿನಲ್ಲಿ ಮರಗಳು ಎಲ್ಲಿಯೂ ಕಾಣುತ್ತಿಲ್ಲ. ನಾನು ಹುಟ್ಟುವಾಗಲೇ ಸ್ವಲ್ಪ ಖಾಲಿಯಾಗಿತ್ತು. ಇನ್ನೊಂದಿಷ್ಟು ನನ್ನಿಂದಲೇ ಖಾಲಿಯಾಯಿತು. ಈಗ ವಿಷಯ ಏನೆಂದರೆ ನನಗೆ ಸಣ್ಣದಿರುವಾಗ ಟೀವಿಯೊಳಗೆ ಈ ಪಕ್ಷಿಗಳನ್ನು ನೋಡ್ತಾ ಇದ್ದೆ. ಏನು ಚಂದ ಅಲ್ವಾ. ಅವುಗಳನ್ನು ನಿಜವಾಗಿ ಹತ್ತಿರದಿಂದ ನೋಡುವ ಅವಕಾಶವೇ ಸಿಕ್ಕಿರಲಿಲ್ಲ.
ಎಲ್ಲರ ಮನೆಯ ಮೊಬೈಲ್ ಗಳಲ್ಲಿ ಅವರವರು ಪಕ್ಷಿಗಳ ವೀಕ್ಷಣೆ ಮಾಡಲಿ ಅಂತ ಹೇಳಿ ನಮ್ಮೂರಿಗೆ ಹಲವಾರು ಟವರ್ ಗಳನ್ನು ಹಾಕಿ ಸಮಾಜ ಸೇವೆ ಮಾಡಿದೆ. ತುಂಬಾ ಸಮಯ ಕಾದೆ. ಈ ಹಕ್ಕಿಗಳು ನೆಲದ ಮೇಲೆ ಬರುವುದಿಲ್ಲ ಅಂತ ಕಾಣುತ್ತೆ. ಅದಕ್ಕಾಗಿ ದೊಡ್ಡ ದೊಡ್ಡ ಕಟ್ಟಡಗಳನ್ನ ಕಟ್ಟಿದೆ. ಆ ಎತ್ತರದ ಮೇಲೆ ನಿಂತರೆ ಮೋಡಗಳು ಕೈಗೆಟಕುತ್ತಿದ್ದವು. ಇಷ್ಟು ಎತ್ತರದಲ್ಲಿ ಹಕ್ಕಿಗಳು ಹಾಡುವುದಿಲ್ಲ. ಹಕ್ಕಿಗಳಿಗೆ ಹಾರ ಬಹುದಲ್ವಾ ಅಂತ ಕಾದೆ. ಎಷ್ಟು ಸಮಯ ಕಾದರೂ ಯಾವ ಹಕ್ಕಿಯೂ ಅತ್ತ ಸುಳಿಯಲೇ ಇಲ್ಲ.
ಯಾಕೆ ನನ್ನ ಕಟ್ಟಡದ ಮುಂದಿನಿಂದಲೇ ಹಾದು ಹೋಗಬಹುದಲ್ಲ ? ನನಗಿನ್ನೂ ಅರ್ಥವಾಗುತ್ತಿಲ್ಲ. ಏರಿಸಿದರು, ಕಟ್ಟಿದರೂ ಹಕ್ಕಿಗಳು ಯಾಕೆ ಕಾಣ್ತಾಯಿಲ್ಲ? ಹಕ್ಕಿಗಳ ಎತ್ತರ ಯಾವುದು? ನಾನು ತಲುಪಬೇಕು, ಹಕ್ಕಿಗಳನ್ನು ನೋಡಲೇಬೇಕು. ನೆಲದ ನೋವಿನ ಆಳ ಅರಿವಿಲ್ಲದವರು ಎತ್ತರದ ಬಗ್ಗೆ ಮಾತನಾಡುತ್ತಿದ್ದಾರೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ