ಸ್ಟೇಟಸ್ ಕತೆಗಳು (ಭಾಗ ೨೨೯) - ಊರು ದಾಟಿದ ಬಸ್ಸು

ಆ ಊರು ತುಂಬಾ ಸಣ್ಣದಾಗಿತ್ತು . ಸಣ್ಣಸಣ್ಣ ಹಲವು ಊರುಗಳು ಅಲ್ಲಿದ್ದವು. ಊರಿಂದೂರಿಗೆ ಚಲಿಸೋಕೆ ರಸ್ತೆ ನಿರ್ಮಾಣವಾಯಿತು. ಆಗ ಜನರನ್ನ ಸಾಗಿಸೋಕೆ ಬಸ್ಸುಗಳು ಓಡಲಾರಂಭಿಸಿದವು. ಬಸ್ಸು ಒಂದು ಉದ್ಯಮವಾಯಿತು . ಆ ಊರಿನ ಕೆಲ ದೊಡ್ಡ ಜನ ಅವರವರದೇ ಬಸ್ಸುಗಳನ್ನು ಓಡಾಡೋಕೆ ಬಿಟ್ಟರು. ಊರಿನ ಪ್ರತಿ ಹಳ್ಳಿಹಳ್ಳಿಗೂ ಬಸ್ ತಲುಪಿತು. ರಾಜಧಾನಿಯಲ್ಲಿ ಕೆಲಸಮಾಡುತ್ತಿದ್ದ ಸರಕಾರಕ್ಕೆ ಹಳ್ಳಿಯ ಅಭಿವೃದ್ಧಿಯ ಕಡೆಗೆ ಯೋಚನೆ ಬಂತು. ದೂರ ದೂರ ಊರುಗಳಿಗೆ ಮಾತ್ರ ಓಡುತ್ತಿದ್ದ ಬಸ್ಸುಗಳನ್ನು ಹಳ್ಳಿಗಳ ಕಡೆಗೆ ಮುಖ ಮಾಡಿಸಿದರು. ಆಗ ಊರಿನ ದೊಡ್ಡವರ ಬಸ್ಸುಗಳಿಗೆ ಜನ ಬರುವುದು ಕಡಿಮೆಯಾಯಿತು. ದೊಡ್ಡವರಿಂದ ಒಂದಷ್ಟು ಒತ್ತಡಗಳು ಬಂದು ಕೆಲವು ಸರಕಾರಿ ಬಸ್ಸುಗಳು ವಾಪಾಸು ಹೊರಟವು. ಹೇಳೋರು ಇರಲಿಲ್ಲ ಕೇಳೋರು ಇರಲಿಲ್ಲ. ರಸ್ತೆಗಳು ಅಗಲವಾದವು. ಜನ ಹೆಚ್ಚೆಚ್ಚು ಬಸ್ಸನ್ನು ಅವಲಂಬಿಸಿದ್ದರು. ಗಂಟೆಗೊಂದು ಹೋಗುತ್ತಿದ್ದ ಬಸ್ಸುಗಳು ನಿಮಿಷಕ್ಕೊಂದರಂತೆ ಚಲಿಸಲಾರಂಬಿಸಿದವು. ನಾನೇ ರಾಜನಾಗಿರಬೇಕು ಅನ್ನೋನು ಎದುರಾಳಿಯನ್ನು ಮಟ್ಟ ಹಾಕುತ್ತಾನೆ ಅಥವಾ ಊರು ಬಿಡಿಸುತ್ತಾನೆ. ಇಲ್ಲಿ ಊರು ಬಿಡಿಸುವ ಪ್ರಕ್ರಿಯೆ ಆರಂಭವಾಯಿತು. ಉಳಿದಿದ್ದ ಬೆರಳೆಣಿಕೆಯ ಸರಕಾರಿ ಬಸ್ಸುಗಳಲ್ಲಿ ಕೆಲವನ್ನು ಬೇರೆ ಊರಿಗೆ ದಾಟಿಸಿದರು. ಇನ್ನೂ ಉಳಿದಿರುವ ಕೇವಲ ಕೆಲವೇ ಬಸ್ಸುಗಳನ್ನು ಯಾವೂರಿಗೆ ಸಾಗಿಸುವುದು ಅನ್ನುವ ಯೋಚನೆಯಲ್ಲಿ ಊರ ದೊಡ್ಡ ಮನುಷ್ಯರಿದ್ದಾರೆ.
ಸರಕಾರವಿಲ್ಲಿ ಜನರ ಉದ್ದಾರಕ್ಕಿಂತ ವ್ಯಕ್ತಿ ಉದ್ಧಾರಕ್ಕೆ ಹೆಚ್ಚು ಮನಸ್ಸು ಮಾಡಿದ್ದಂತಿದೆ. ಹಾಗಾಗಿ ಸರಕಾರಿ ಬಸ್ಸು ಬೇರೆ ಊರಿಗೆ ಹೊರಡಲು ತಯಾರಾಗಿದೆ. ಪ್ರಶ್ನೆ ಇಲ್ಲದಿದ್ದರೆ ಉತ್ತರ ಹುಡುಕುವುದು ಯಾತಕ್ಕೆ .ಹಾಗಾಗಿ ಮೌನವಾಗಿದ್ದು ನೋಡಿಕೊಂಡು ಹೋಗಬೇಕಷ್ಟೇ. ನಮಗೆ ಊರಿಂದೂರಿಗೆ ಸಾಗೋಕೆ ಯಾವ ಬಸ್ಸು ಆದರೇನು? ಊರು ತಲುಪಿದರೆ ಸಾಕಲ್ಲವೇ ? ಆದರೂ ಸರಕಾರಿ ಬಸ್ಸು ಇರಬೇಕಿತ್ತು. ಅಂತ ಎದುರಿನ ಅಂಗಡಿಯಲ್ಲಿ ಕುಳಿತಿದ್ದ ಅಜ್ಜ ಮಾತಾಡ್ತಿದ್ರು .
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ